Right To Education Act| 11,454 ಸೀಟುಗಳ ಪೈಕಿ ಭರ್ತಿಯಾಗಿದ್ದು  2,491 ಸೀಟು ಮಾತ್ರ..!
x

Right To Education Act| 11,454 ಸೀಟುಗಳ ಪೈಕಿ ಭರ್ತಿಯಾಗಿದ್ದು 2,491 ಸೀಟು ಮಾತ್ರ..!

ರಾಜ್ಯದ ಜಿಲ್ಲೆಗಳನ್ನು ಗಮನಿಸುವುದಾದರೆ 27 ಜಿಲ್ಲೆಗಳಲ್ಲಿ ಆರ್‌ಟಿಇ ದಾಖಲಾತಿ ಎರಡಂಕಿ ದಾಟಿಲ್ಲ..! ಮಧುಗಿರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾತಿ ಶೂನ್ಯ ಇದೆ.


ರಾಜ್ಯದ ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕೆಂಬ ಬಡ ವಿದ್ಯಾರ್ಥಿಗಳ ಕನಸು ಕಮರಿದಂತಾಗುತ್ತಿದೆ. ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಲಭ್ಯವಿದ್ದ 11,454 ಸೀಟುಗಳಲ್ಲಿ ಕೇವಲ 2,491 ಸೀಟುಗಳಿಗೆ ಮಾತ್ರ ವಿದ್ಯಾರ್ಥಿಗಳ ಪ್ರವೇಶವಾಗಿದೆ.

ಖಾಸಗಿ ಶಾಲೆಯಲ್ಲಿ ಉಚಿತ ಪ್ರವೇಶ ಪಡೆಯಲು ಒಂದು ಕಾಲಕ್ಕೆ ಅಪಾರ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದ್ದು, ಸ್ಪರ್ಧೆ ಏರ್ಪಡುತ್ತಿತ್ತು. ಆದರೆ, ಬದಲಾದ ನಿಯಮದಿಂದಾಗಿ ಈಗ ಈ ಸೀಟುಗಳಿಗೆ ಬೇಡಿಕೆ ಕುಸಿಯುವಂತಾಗಿದೆ. ಆರ್‌ಟಿಇ ಅಡಿಯಲ್ಲಿ ಬೆರಳೆಣಿಕೆಯಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುವಂತಾಗಿದೆ. ಬಡ ಕುಟುಂಬದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಜಾರಿಗೆ ತಂದ ಆರ್‌ಟಿಇ ಅಡಿಯಲ್ಲಿ 2025–26ನೇ ಸಾಲಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಸಾಕಾಷ್ಟು ಕುಸಿತಗೊಂಡಿದೆ.

ಆರ್‌ಟಿಇ : ಆಟಕ್ಕುಂಟು ಲೆಕ್ಕಕ್ಕಿಲ್ಲ

ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಲಭ್ಯವಿದ್ದ 11,454 ಸೀಟುಗಳಲ್ಲಿ ಕೇವಲ 2,491 ಸೀಟುಗಳಿಗೆ ಮಾತ್ರ ವಿದ್ಯಾರ್ಥಿಗಳ ಪ್ರವೇಶವಾಗಿದೆ. ರಾಜ್ಯದ ಜಿಲ್ಲೆಗಳನ್ನು ಗಮನಿಸುವುದಾದರೆ 27 ಜಿಲ್ಲೆಯಲ್ಲಿ ಎರಡಂಕಿ ದಾಟಿಲ್ಲ..! ಮಧುಗಿರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾತಿ ಶೂನ್ಯ ಇದೆ. ರಾಜ್ಯದಲ್ಲಿ ಆರ್‌ಟಿಇ ಒಂದು ರೀತಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಪೈಕಿ ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 27 ಜಿಲ್ಲೆಗಳಲ್ಲಿ ಆರ್‌ಟಿಇ ಸೀಟುಗಳ ಭರ್ತಿ ಎರಡಂಕಿಯನ್ನೂ ದಾಟಿಲ್ಲ. ರಾಜ್ಯದಲ್ಲಿ 2025-2026ನೇ ಸಾಲಿಗೆ ರಾಜ್ಯದ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು (11,454) ಸೀಟುಗಳನ್ನು ಆರ್‌ಟಿಇ ಕಾಯ್ದೆಯಡಿ ಭರ್ತಿಗೆ ಮೀಸಲಿಟ್ಟರೂ ಸರ್ಕಾರದ ಕಠಿಣ ನಿಯಮಗಳ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಭರ್ತಿಯಾದುದು ಕೇವಲ 2,491 ಸೀಟುಗಳು ಮಾತ್ರ. 8,963 ಸೀಟುಗಳು ಉಳಿಕೆ ಇದೆ ಎಂದು ದಾಖಲೆಗಳು ಹೇಳುತ್ತವೆ.

ಸರ್ಕಾರದ ಕಠಿಣ ನಿಯಮದಿಂದಾಗಿ ದಾಖಲಾತಿ ಕುಸಿತ

ಆರ್‌ಟಿಇ ನಿಯಮ ಜಾರಿಯಾದ ಕೆಲವು ವರ್ಷಗಳ ಕಾಲ ಭಾರೀ ಬೇಡಿಕೆ ಇತ್ತು. ಆದರೆ, 2018ರಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ನಿಯಮಗಳನ್ನು ಬದಲಾವಣೆ ಮಾಡಿತು. ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು ಹೊಸ ನಿಯಮಗಳನ್ನು ಜಾರಿ ಮಾಡಿತು. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ನೆಪದಲ್ಲಿ ಸರ್ಕಾರವು ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಲಾಗಿದೆ.

ಒಂದು ಕಿ. ಮೀ. ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿದ್ದಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಆರ್‌ಟಿಇ ಅಡಿ ಪ್ರವೇಶ ಇಲ್ಲ ಎಂಬ ನಿಯಮವನ್ನು ಜಾರಿಗೊಳಿಸಿತು. ಈ ನಿಯಮವು ಮೇಲ್ನೋಟಕ್ಕೆ ಸರ್ಕಾರಿ ಶಾಲೆಗಳ ಪರವಾಗಿದೆ ಎಂದು ಹೇಳಲಾಗುತ್ತಿದ್ದರೂ ಖಾಸಗಿ ಶಾಲೆಗಳಿಗೆ ಪ್ರಯೋಜನವಾಗಲಿದೆ. ಆರ್‌ಟಿಇ ಅಡಿ ಉಚಿತವಾಗಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವುದನ್ನು ನಿಲ್ಲಿಸಲಾಯಿತು. ರಾಜ್ಯದ ಯಾವುದೇ ಸ್ಥಳಕ್ಕೂ ತೆರಳಿದರೂ ವಿದ್ಯಾರ್ಥಿಗಳು ನೆಲೆಸಿರುವ ಮನೆಯ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳು ಇದ್ದೇ ಇರುತ್ತವೆ. ಹೀಗಾಗಿ ದಾಖಲಾತಿಗಳು ಕುಂಠಿತಗೊಂಡಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧುಗಿರಿ, ಉತ್ತರ ಕನ್ನಡದಲ್ಲಿ ಶೂನ್ಯ..!

ಆರ್‌ಟಿಇಯಡಿ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಮಧುಗಿರಿ (ಶೈಕ್ಷಣಿಕ ಜಿಲ್ಲೆ) ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದು ಸೀಟು ಸಹ ಭರ್ತಿಯಾಗದೆ ಶೂನ್ಯ ದಾಖಲಾತಿ ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಹೆಚ್ಚು, 368 ಮಕ್ಕಳು ಆರ್‌ಟಿಇನಡಿ ಪ್ರವೇಶ ಪಡೆದಿದ್ದಾರೆ. ಉಳಿದಂತೆ ದಾವಣಗೆರೆ ಜಿಲ್ಲೆಯಲ್ಲಿ 294, ಧಾರವಾಡದಲ್ಲಿ 281, ಚಿಕ್ಕೋಡಿಯಲ್ಲಿ 258, ಮೈಸೂರಿನಲ್ಲಿ 238, ವಿಜಯಪುರದಲ್ಲಿ 139, ಕಲಬುರುಗಿಯಲ್ಲಿ 128, ಬೆಳಗಾವಿಯಲ್ಲಿ 125 ಮಕ್ಕಳು ಮಾತ್ರ ಆರ್‌ಇಟಿ ಕಾಯ್ದೆಯಡಿ ಪ್ರತಿಷ್ಠಿತ ಶಾಲೆಗಳಲ್ಲಿ ಸೀಟು ಪಡೆದಿದ್ದಾರೆ.


ಸಾರ್ವಜನಿಕ ಶಿಕ್ಷಣ ಇಲಾಖೆ ಮೇ ತಿಂಗಳಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ, ಎರಡೂ ಸುತ್ತುಗಳಲ್ಲಿ ಸೀಟು ಹಂಚಿಕೆ ನಡೆಸಿತ್ತು. ಮೊದಲ ಸುತ್ತಿನಲ್ಲಿ 3,769 ಸೀಟುಗಳನ್ನು ಹಂಚಲಾಗಿದ್ದು, 2,097 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದರು. ಎರಡನೇ ಸುತ್ತಿನಲ್ಲಿ 921 ಸೀಟುಗಳ ಹಂಚಿಕೆ ನಡೆದಿದ್ದು, 394 ಮಂದಿ ಮಾತ್ರ ದಾಖಲಾಗಿದ್ದಾರೆ. ಜಿಲ್ಲಾವಾರು ವಿವರಗಳಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 776 ಪೈಕಿ 368 ಸೀಟುಗಳು ಭರ್ತಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 294, ಧಾರವಾಡದಲ್ಲಿ 281 ಸೀಟುಗಳು ಭರ್ತಿಯಾಗಿವೆ. ಆದರೆ ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿ ಕೇವಲ 10, ಗ್ರಾಮೀಣ ಜಿಲ್ಲೆಯಲ್ಲಿ 43 ಹಾಗೂ ದಕ್ಷಿಣ ಜಿಲ್ಲೆಯಲ್ಲೂ 26 ಸೀಟುಗಳಷ್ಟೇ ಭರ್ತಿಯಾಗಿವೆ ಎಂದು ದಾಖಲೆಯಲ್ಲಿ ಉಲ್ಲೇಖವಾಗಿದೆ.

ಮೂರು ಜಿಲ್ಲೆ2 ಸೀಟು ಭರ್ತಿ:

ರಾಜ್ಯದ ಮೂರು ಜಿಲ್ಲೆಗಳಲ್ಲಿ ಕೇವಲ 2 ಸೀಟು ಮಾತ್ರ ಭರ್ತಿಯಾಗಿದೆ. ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇವಲ 2 ಸೀಟುಗಳು ಭರ್ತಿಯಾಗಿವೆ. ಇನ್ನುಳಿದಂತೆ ಯಾದಗಿರಿ ಜಿಲ್ಲೆಯಲ್ಲಿ 4, ರಾಮನಗರ 7, ಚಿತ್ರದುರ್ಗ 3, ಚಿಕ್ಕಮಗಳೂರು 2, ಚಿತ್ರದುರ್ಗ 3, ಚಿಕ್ಕಬಳ್ಳಾಪುರ 3, ಚಾಮರಾಜನಗರ 8, ಮಂಡ್ಯ 10 ಸೀಟುಗಳು ಭರ್ತಿಯಾಗಿವೆ.

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

ಸಿಇಟಿ ಸೀಟು ಹಂಚಿಕೆಯಲ್ಲಿ ಕುಸಿತಗೊಳ್ಳುತ್ತಿರುವ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಆರ್‌ಟಿಇ ವಿದ್ಯಾರ್ಥಿ ಮತ್ತು ಪೋಷಕರ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಯೋಗಾನಂದ, "ರಾಜ್ಯ ಸರ್ಕಾರವು 2018ರಲ್ಲಿ ಆರ್‌ಟಿಇ ನಿಯಮಕ್ಕೆ ತಿದ್ದುಪಡಿ ಮಾಡಿದ್ದರಿಂದ ಬಡವರ ಮಕ್ಕಳಿಗೆ ಆರ್‌ಟಿಇಯಡಿ ಸೀಟು ಕಡಿಮೆಯಾಗಿದೆ. ಈ ಬಗ್ಗೆ ಪ್ರಶ್ನಿಸಿ ನ್ಯಾಯಾಲಯ ಮೆಟ್ಟಿಲೇರಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ತೀರ್ಪುಗಾಗಿ ಕಾಯುತ್ತಿದ್ದೇವೆ. ಸರ್ಕಾರವು ಖಾಸಗಿ ಶಾಲೆಗಳ ಪರವಾಗಿದೆ. ಹೀಗಾಗಿ ಆರ್‌ಟಿಇ ನಿಯಮಕ್ಕೆ ತಿದ್ದುಪಡಿ ಮಾಡಿದೆ. ಆರ್‌ಟಿಇ ನಿಯಮದಿಂದ ಬಡವರಿಗೆ ಅನುಕೂಲವಾಗಿದೆ. ಆರ್‌ಟಿಇ ನಿಯಮ ಜಾರಿಯಾದಾಗ 1.52 ಲಕ್ಷ ಸೀಟು ಲಭ್ಯವಾಗಿದ್ದವು. ಆದರೆ, ನಿಯಮ ಬದಲಾವಣೆಯಿಂದ ಕೇವಲ ೩-೪ ಸಾವಿರ ಸೀಟುಗಳ ಮಾತ್ರ ಲಭ್ಯವಾಗುತ್ತಿದೆ. ಅದರಲ್ಲಿಯೂ ನಿಯಮದಿಂದ ಆ ಸಂಖ್ಯೆಯು ಭರ್ತಿಯಾಗುತ್ತಿಲ್ಲ," ಎಂದು ಹೇಳಿದರು.

ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಮಾತನಾಡಿ, ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿದ್ದೇವೆ. ಆರ್‌ಟಿಇಯಿಂದ ಬಡವರ ಅನುಕೂಲವಾಗುತ್ತದೆ. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪೋಷಕ ರಾಹುಲ್‌ ಎಂಬವರು ಮಾತನಾಡಿ, ಆರ್‌ಟಿಇ ನಿಯಮದಿಂದ ಬಹಳಷ್ಟು ಬಡವರಿಗೆ ಅನುಕೂಲವಾಗುತ್ತಿತ್ತು. ಖಾಸಗಿ ಶಾಲೆಯಲ್ಲಿ ಉಚಿತ ದಾಖಲಾತಿ ಪಡೆದು ಒಳ್ಳೆಯ ಶಿಕ್ಷಣ ಪಡೆಯಬಹುದಿತ್ತು. ಆದರೆ, ನಿಯಮ ಬದಲಾವಣೆಯಿಂದಾಗಿ ಬಡವರಿಗೆ ಅನ್ಯಾಯವಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಆರ್‌ಟಿಇಯಿಂದ ಅನುಕೂಲವಾಗುತ್ತದೆ. ಸರ್ಕಾರ ಮತ್ತೊಮ್ಮೆ ಹಳೆ ನಿಯಮವನ್ನೇ ಜಾರಿಯಾಗಬೇಕು. ಇದರಿಂದ ಬಡ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದರು.


Read More
Next Story