ಪ್ರವಾಹ ಪೀಡಿತರಿಗಾಗಿ 114 ಪರಿಹಾರ ಕೇಂದ್ರಗಳ ಸ್ಥಾಪನೆಗೆ ಮುಂದಾದ ಕಂದಾಯ ಇಲಾಖೆ
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಳೆದ 15 ರಿಂದ 20 ದಿನಗಳಿಂದ ಮಳೆ ಕೊರತೆಯಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಉಂಟಾದ ಪ್ರವಾಹದಲ್ಲಿ ಸಂತ್ರಸ್ತರಾಗಿರುವ 600ರಿಂದ 800 ಮಂದಿಗೆ ವಸತಿ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. 114 ಪರಿಹಾರ ಕೇಂದ್ರಗಳನ್ನು ಸರ್ಕಾರ ಆರಂಭಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಶನಿವಾರ ಹೇಳಿದ್ದಾರೆ.
ಹೇಮಾವತಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಗಿರುವುದರಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಯಾಸೀನ್ ನಗರ, ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಮಂದಗೆರೆ ಸೇರಿದಂತೆ ನದಿ ತೀರದ ಕೆಲವೆಡೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.28ರಷ್ಟು ಅಧಿಕ ಮಳೆಯಾಗಿದ್ದು, ಸಾಮಾನ್ಯ ಸರಾಸರಿ 419 ಮಿ.ಮೀ.ಗೆ ಹೋಲಿಸಿದರೆ 540 ಮಿ.ಮೀ ಮಳೆಯಾಗಿದೆ. ಲಿಂಗನಮಕ್ಕಿ, ಸೂಪಾ ಮತ್ತು ಘಟಪ್ರಭಾ ಹೊರತುಪಡಿಸಿ ಬಹುತೇಕ ಅಣೆಕಟ್ಟುಗಳು ತುಂಬಿವೆ. ಹೆಚ್ಚುವರಿ ನೀರನ್ನು ಅಣೆಕಟ್ಟುಗಳಿಂದ ನದಿಗಳಿಗೆ ಬಿಡಲಾಗುತ್ತಿದೆ. ಎಲ್ಲ ಜಿಲ್ಲೆಗಳ ಡಿಸಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಪರಿಹಾರ ಕ್ರಮಗಳಿಗೆ ಹಾಗೂ ಹಾಸನ ಜಿಲ್ಲಾಧಿಕಾರಿಗೆ 23 ಕೋಟಿ ಸೇರಿದಂತೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ 777 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ತಾಲೂಕಿಗೆ 25 ಲಕ್ಷ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಮೀನು ಹಿಡಿಲು, ಈಜಲು ಹೋಗಿ ಅವರ ನಿರ್ಲಕ್ಷತನದಿಂದ ಸಾವುಗಳು ಸಂಭವಿಸಿದೆ. ಈ ಕುರಿತು ಜನರು ಜಾಗರೂಕರರಾಗಿರಬೇಕು. ಭಾರೀ ಮಳೆಯ ಸಂದರ್ಭದಲ್ಲಿ ಜನರು ಪಾಳುಬಿದ್ದ ಮನೆಗಳಲ್ಲಿ ವಾಸಿಸುವುದನ್ನು ತಪ್ಪಿಸಬೇಕು ಮತ್ತು ಪರ್ಯಾಯ ಆಶ್ರಯಕ್ಕಾಗಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಚಿವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಮಳೆಯಿಂದಾಗಿ ಇದುವರೆಗೆ 600 ಮನೆಗಳಿಗೆ ತೀವ್ರ ಹಾನಿಯಾಗಿದೆ. ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂಪಾಯಿ ಪರಿಹಾರ ನೀಡುವುದರ ಜೊತೆಗೆ ಪ್ರತಿಯೊಬ್ಬರಿಗೂ ಹೊಸ ಮನೆ ನೀಡುತ್ತೇವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಳೆದ 15 ರಿಂದ 20 ದಿನಗಳಿಂದ ಮಳೆ ಕೊರತೆಯಾಗಿದೆ ಎಂದು ಸಚಿವರು ಹೇಳಿದರು.