ಬೆಸ್ಕಾಂ ನಿರ್ಲಕ್ಷ್ಯ |ಕಂಬ ಸ್ಪರ್ಶಿಸಿದ ಬಾಲಕಿಗೆ ವಿದ್ಯುತ್‌ ಪ್ರವಹಿಸಿ ಸಾವು
x

ಮೃತ ಬಾಲಕಿ ತನಿಷ್ಕ

ಬೆಸ್ಕಾಂ ನಿರ್ಲಕ್ಷ್ಯ |ಕಂಬ ಸ್ಪರ್ಶಿಸಿದ ಬಾಲಕಿಗೆ ವಿದ್ಯುತ್‌ ಪ್ರವಹಿಸಿ ಸಾವು

ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ತನಿಷ್ಕಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಮೃತಪಟ್ಟಿದ್ದಾಳೆ.


ಮನೆಯ ಮುಂದಿದ್ದ ವಿದ್ಯುತ್‌ ಕಂಬದ ಬಳಿ ಆಟವಾಡುತ್ತಿದ್ದ12 ವರ್ಷದ ಬಾಲಕಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನಾರಾಯಣಘಟ್ಟ ಗ್ರಾಮದಲ್ಲಿ ನಡೆದಿದೆ.

ಮನೆ ಮುಂದೆ ಆಟವಾಡುವ ವೇಳೆ ವಿದ್ಯುತ್ ಕಂಬದ ಬಳಿ ಚೆಂಡು ಬಿದ್ದಿತ್ತು. ಚೆಂಡು ತೆಗೆದುಕೊಳ್ಳಲು ಹೋಗಿ ಕಂಬ ಸ್ಪರ್ಶಿಸಿದ ಬಾಲಕಿಗೆ ವಿದ್ಯುತ್‌ ಪ್ರವಹಿಸಿದೆ. ತೀವ್ರ ಗಾಯಗೊಂಡಿದ್ದ ಬಾಲಕಿ ತನಿಷ್ಕಾಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಮೃತಪಟ್ಟಿದ್ದಾಳೆ.

ಈ ಘಟನೆಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರನ ಎಂದು ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿ ವತಿಯಿಂದ ಕಂಬಗಳಿಗೆ ಬೀದಿ ದೀಪ ಅಳವಡಿಸಲಾಗಿದೆ. ಆದರೆ, ಬೆಸ್ಕಾಂ ಅವುಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಸೂರ್ಯ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯತಿ ಅಧಿಕಾರಿಗಳು ವಿದ್ಯುತ್ ಕಂಬವನ್ನು ತೆರವು ಮಾಡಿದ್ದಾರೆ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಧೋರಣೆಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ಕೂಡ ನಡೆಸಿದ್ದಾರೆ.

ಕಳೆದ ಮಾರ್ಚ್‌ ತಿಂಗಳಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ನೀರಿನ ಪಂಪ್ ಬಳಿ ಮೋಟಾರ್ ಆನ್ ಮಾಡಲು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು.

2023 ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದು 23 ವರ್ಷದ ಮಹಿಳೆ ಮತ್ತು ಆಕೆಯ ಮಗಳು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

Read More
Next Story