ಸಂಜೆಯಿಂದ ʼ108ʼ ಬಂದ್:‌ ವೇತನಕ್ಕಾಗಿ ಆಂಬ್ಯುಲೆನ್ಸ್ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
x

ಸಂಜೆಯಿಂದ ʼ108ʼ ಬಂದ್:‌ ವೇತನಕ್ಕಾಗಿ ಆಂಬ್ಯುಲೆನ್ಸ್ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ


ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸುವಂತೆ ಒತ್ತಾಯಿಸಿ 108-ಆರೋಗ್ಯ ಕವಚ ಆಂಬ್ಯುಲೆನ್ಸ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸೋಮವಾರ ರಾತ್ರಿ 8 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಇದರಿಂದ ರಾಜ್ಯಾದ್ಯಂತ ತುರ್ತು ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಈ ಬಗ್ಗೆ ಭಾನುವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ 108 ನೌಕರರ ಸಂಘದ ಉಪಾಧ್ಯಕ್ಷ ಎನ್‌.ಹೆಚ್.‌ ಪರಮಶಿವ ಅವರು, “ನಾವು ಮಾಸಿಕ ಕೇವಲ 10,000 ರೂಪಾಯಿ ಪಡೆಯುತ್ತಿದ್ದೇವೆ. ಪ್ರತಿಯೊಬ್ಬ ಉದ್ಯೋಗಿಯು 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುವುದರಿಂದ, ನಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳುವುದು ಕಷ್ಟಕರವಾಗುತ್ತಿದೆ. ಕುಟುಂಬಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದರೂ, GVK EMRI ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸುತ್ತಿಲ್ಲ. ಯಾವುದೇ ಮಾಹಿತಿ ಒದಗಿಸದೆ ಸಂಬಳವನ್ನು ಕಡಿತಗೊಳಿಸಲಾಗಿದೆ" ಎಂದು ಆರೋಪಿಸಿದರು.

3,500 ಉದ್ಯೋಗಿಗಳ ಮುಷ್ಕರ

ಕರ್ನಾಟಕದಾದ್ಯಂತ ಸುಮಾರು 715 ಆಂಬ್ಯುಲೆನ್ಸ್‌ಗಳು ಮತ್ತು ಸರಿಸುಮಾರು 3,500 ಉದ್ಯೋಗಿಗಳು 108 ಆಂಬ್ಯುಲೆನ್ಸ್ ಅಸೋಸಿಯೇಷನ್‌ ಜೊತೆಗೆ ಸಂಬಂಧ ಹೊಂದಿದ್ದಾರೆ. ಹೀಗಾಗಿಯೇ ತುರ್ತು ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಆರೋಗ್ಯ ಕವಚ ಯೋಜನೆಯನ್ನು ಜಿವಿಕೆ-ಇಎಂಆರ್‌ಐ ಸಂಸ್ಥೆ ನಿರ್ವಹಿಸುತ್ತಿದೆ. ಆಂಬ್ಯುಲೆನ್ಸ್ ಸೇವೆಯನ್ನು ನಿರ್ವಹಿಸುವ ಜಿವಿಕೆ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ನಡುವಿನ ಅಸಮಾಧಾನದಿಂದ ಮುಷ್ಕರ ನಡೆಯುತ್ತಿದೆ.

ಸಿಗದ ಸಂಬಳ, ಆಂಬ್ಯುಲೆನ್ಸ್‌ ಚಾಲಕರ ಮುಷ್ಕರ

ಚಾಲಕರು ಮತ್ತು ವೈದ್ಯಕೀಯ ತಂತ್ರಜ್ಞರು ಸೇರಿದಂತೆ ನೌಕರರರಿಗೆ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ಸೇರಿ ಮೂರು ತಿಂಗಳ ಸಂಬಳವನ್ನು ಪಾವತಿಸಿಲ್ಲ ಎಂದು 108 ಆಂಬ್ಯುಲೆನ್ಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೆಚ್ಚುವರಿಯಾಗಿ, ಜನವರಿಯಲ್ಲಿ ಸಂಬಳ ಕಡಿತವಾಗಿದೆ. 30,000 ರೂ. ಮಾಸಿಕ ಸಂಬಳದ ಬದಲಾಗಿ ಕೇವಲ 12,000 ರೂ. ಸಂಬಳ ಪಡೆದಿದ್ದಾರೆ. ಕಳೆದ ಐದು ತಿಂಗಳಿನಿಂದ ಎರಡು ತಿಂಗಳ ವೇತನಕ್ಕೆ ಸಮನಾದ ವೇತನವನ್ನು ಮಾತ್ರ ಪಡೆದಿದ್ದೇವೆ ಎಂದು ಸಂಘದ ನೌಕರರು ಹೇಳಿದ್ದಾರೆ. ಸಂಘವು ಬೆಂಗಳೂರಿನಲ್ಲಿ ಸುಮಾರು 90 ಆಂಬ್ಯುಲೆನ್ಸ್‌ಗಳನ್ನು ನಿರ್ವಹಿಸುತ್ತಿದ್ದು, 400 ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಕರ್ನಾಟಕ ರಾಜ್ಯ ಆರೋಗ್ಯ ವಿಮಾ 108 ನೌಕರರ ಸಂಘವು ಮುಷ್ಕರವನ್ನು ಆಯೋಜಿಸುತ್ತಿದೆ.

ಈ ಬಗ್ಗೆ ʻದ ಫೆಡರಲ್‌-ಕರ್ನಾಟಕʼದೊಂದಿಗೆ ಮಾತನಾಡಿದ 108 ನೌಕರರ ಸಂಘದ ಉಪಾಧ್ಯಕ್ಷ ದಯಾನಂದ್ ಅವರು, ʻಜನರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ, ಕಳೆದ ಐದು ತಿಂಗಳಿನಿಂದ ಸರಿಯಾದ ವೇತನ ನೀಡುತ್ತಿಲ್ಲ. ಈ ಬಗ್ಗೆ ನಾವು ಈವರೆಗೂ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇವೆ ಆದರೆ ಸರ್ಕಾರ ಗಮನಹರಿಸದ ಕಾರಣಕ್ಕೆ ನಾವು ಮುಷ್ಕರ ಹಮ್ಮಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ಒಂದು ವೇಳೆ ಸರ್ಕಾರ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಕಿ ವೇತನ ಪಾವತಿ ಕುರಿತು ಚರ್ಚಿಸಿ ಕ್ರಮ ಕೈಗೊಂಡಲ್ಲಿ ಮುಷ್ಕರದಿಂದ ಹಿಂದೆ ಸರಿಯುತ್ತೇವೆʼ ಎಂದರು.

"ನಮ್ಮ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡದೇ ಇರುವುದರಿಂದ ಅವರಿಗೆ ತಮ್ಮ ಕುಟುಂಬ ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಸರ್ಕಾರವನ್ನು ಎಚ್ಚರಿಸಲು ಮುಷ್ಕರ ಅನಿವಾರ್ಯ. ಸಿಬ್ಬಂದಿ ಸೇವೆಗೆ ಹಾಜರಾಗುತ್ತಾರೆ. ಆದರೆ ಆಂಬುಲೆನ್ಸ್‌ಗಳನ್ನು ರಸ್ತೆಗಿಳಿಸುವುದಿಲ್ಲ. ಶನಿವಾರ ರಾತ್ರಿಯಿಂದಲೇ ಸಿಬ್ಬಂದಿಯು ನಿರ್ವಹಿಸಿದ ಪ್ರಕರಣಗಳ ಮಾಹಿತಿಯನ್ನು ನೀಡುವುದನ್ನು ಸ್ಥಗಿತಗೊಳಿಸುತ್ತೇವೆʼʼ ಎಂದರು.

ಕೇವಲ ವೇತನ ವಿಷಯ ಮಾತ್ರವಲ್ಲ, ವೇತನ ಹೆಚ್ಚಳ, ಉದ್ಯೋಗ ಭದ್ರತೆ, ವಜಾಗೊಂಡ ನೌಕರರ ಮರುನೇಮಕ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಹಿಂದೆಯೂ ಆಂಬುಲೆನ್ಸ್‌ ನೌಕರರು ಮುಷ್ಕರ ನಡೆಸಿದ್ದರು, ಆಗ ಭರವಸೆ ನೀಡಲಾಗಿತ್ತು. ಆದರೆ ಆ ಭರವಸೆಗಳು ಕಾರ್ಯರೂಪಕ್ಕೆ ಬರಲಿಲ್ಲ. ಹಾಗಾಗಿ ಇದೀಗ ಅನಿರ್ದಿಷ್ಟಾವಧಿಗೆ ಮುಷ್ಕರ ನಡೆಸುತ್ತೇವೆ ಎಂದು ಹೇಳಿದರು.

Read More
Next Story