
Ambulance Controversy -Part 1| ಆರೋಗ್ಯ ಕ್ಷೇತ್ರದ ಜೀವರಕ್ಷಕ '108' ; ಆಂಧ್ರದ ಜಿವಿಕೆ ಸಂಸ್ಥೆಯಿಂದ ನಿರ್ವಹಣೆ ಹಿಂಪಡೆಯಲು ಸರ್ಕಾರ ನಿರ್ಧರಿಸಿದ್ದೇಕೆ?
ದೇಶದಲ್ಲಿ ʼ108ʼ ಅಂಬುಲೆನ್ಸ್ ಸೇವೆ ಜಾರಿಯಾದ 16 ವರ್ಷಗಳ ಬಳಿಕ ನಿರ್ವಹಣೆ ಸರ್ಕಾರದ ಕೈಗೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ108 ಅಂಬುಲೆನ್ಸ್ ಜಾರಿ, ಅದರ ಉದ್ದೇಶಗಳು, ಯಶೋಗಾಥೆಯ ಕುರಿತ ವಿವರ ಇಲ್ಲಿದೆ.
ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸಾ ಪೂರ್ವ ಆರೈಕೆ ಹಾಗೂ ತ್ವರಿತ ಪ್ರಯಾಣ ಸೌಲಭ್ಯ ಒದಗಿಸುವ ʼ108ʼ ಅಂಬುಲೆನ್ಸ್ ಸೇವೆಯ ಅಸಮರ್ಪಕ ನಿರ್ವಹಣೆ ಕುರಿತಾಗಿ ಸಾಕಷ್ಟು ದೂರುಗಳ ಬಂದ ಹಿನ್ನೆಲೆಯಲ್ಲಿ ಈ ಸೇವೆಯನ್ನು ಸರ್ಕಾರದ ವತಿಯಿಂದಲೇ ನಡೆಸಲು ನಿರ್ಧರಿಸಲಾಗಿದೆ.
ಸಿಬ್ಬಂದಿ ನೇಮಕ, ವೇತನ ಇತ್ಯಾದಿ ವೆಚ್ಚಗಳನ್ನು ಸರ್ಕಾರವೇ ಭರಿಸಿದರೂ ನಿರ್ವಹಣೆಯಲ್ಲಿ ಆಂಧ್ರಪ್ರದೇಶದ ಜಿವಿಕೆ ಸಂಸ್ಥೆ ನಿರ್ಲಕ್ಷ್ಯ ವಹಿಸುತ್ತಿತ್ತು ಎಂಬ ದೂರುಗಳ ಬಳಿಕ 108 ಅಂಬುಲೆನ್ಸ್ ಸೇವೆಯನ್ನು ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಿದೆ. 2024 ರಲ್ಲಿ ಅಂಬುಲೆನ್ಸ್ ಸಿಬ್ಬಂದಿಗೆ ವೇತನ, ಡೀಸೆಲ್ ವೆಚ್ಚ, ನಿರ್ವಹಣಾ ವೆಚ್ಚ ನೀಡಿದ್ದರೂ ಜಿವಿಕೆ ಸಂಸ್ಥೆ ಸಿಬ್ಬಂದಿಗೆ ವೇತನ ಪಾವತಿಸಿರಲಿಲ್ಲ. ವೇತನ ಪಾವತಿಗೆ ಆಗ್ರಹಿಸಿ ಅಂಬುಲೆನ್ಸ್ ಸಿಬ್ಬಂದಿ ಮುಷ್ಕರ ನಡೆಸಿದ್ದರು. ರಾಜ್ಯ ಸರ್ಕಾರ ಮುಷ್ಕರನಿರತ ವಿರುದ್ಧ ಎಸ್ಮಾ ಜಾರಿಗೊಳಿಸಿತ್ತು.
ಜಿವಿಕೆ ಸಂಸ್ಥೆ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ವೇತನ ಪಾವತಿಯಾಗಿತ್ತು. ಇಲ್ಲದೇ ರೋಗಿಗಳಿಗೆ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸೇವೆ ಒದಗಿಸುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿದ್ದವು. ಈ ಎಲ್ಲಾ ಕಾರಣಗಳಿಂದ ರಾಜ್ಯ ಸರ್ಕಾರ ಜಿವಿಕೆ ಸಂಸ್ಥೆಯಿಂದ 108ಅಂಬುಲೆನ್ಸ್ ಸೇವೆಯ ನಿರ್ವಹಣೆ ಹಿಂಪಡೆಯಲು ನಿರ್ಧರಿಸಿದೆ.
ಮುಂದಿನ ಮೂರು ತಿಂಗಳ ಅವಧಿಯಲ್ಲಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಸುಮಾರು 750 ಅಂಬುಲೆನ್ಸ್‌ಗಳನ್ನು ಸರ್ಕಾರಿ ನಿಯಂತ್ರಣಕ್ಕೆ ತರಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಸರಿಯಾಗಿ ಕಾರ್ಯ ನಿರ್ವಹಿಸದ ಜಿವಿಕೆ
ಆರೋಗ್ಯ ಕ್ಷೇತ್ರದ ನರನಾಡಿಗಳಂತೆ ಕಾರ್ಯ ನಿರ್ವಹಿಸುತ್ತಿರುವ ಅಂಬುಲೆನ್ಸ್‌ಗಳನ್ನು ಟೆಂಡರ್ ಪಡೆದಿದ್ದ ಖಾಸಗಿ ಸಂಸ್ಥೆ ಜಿವಿಕೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿರಲಿಲ್ಲ. ಕಮಾಂಡ್ ಸೆಂಟರ್ ಮಾತ್ರ ಇದ್ದರೂ ಇಡೀ ಸೇವೆಯನ್ನು ಟೆಂಡರ್ ನೀಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ದೇಶದಲ್ಲಿ ʼ108ʼ ಅಂಬುಲೆನ್ಸ್ ಸೇವೆ ಜಾರಿಯಾದ 16 ವರ್ಷಗಳ ಬಳಿಕ ನಿರ್ವಹಣೆ ಸರ್ಕಾರದ ಕೈಗೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ108 ಅಂಬುಲೆನ್ಸ್ ಜಾರಿ, ಅದರ ಉದ್ದೇಶಗಳು, ಯಶೋಗಾಥೆಯ ಕುರಿತ ವಿವರ ಇಲ್ಲಿದೆ.
ʼ108ʼ ಸೇವೆ ಜಾರಿಯಾಗಿದ್ದು ಯಾವಾಗ?
ಭಾರತದ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ 2005 ರಲ್ಲಿ 108 ಅಂಬುಲೆನ್ಸ್ ಸೇವೆ ಜಾರಿಗೆ ತರಲಾಯಿತು. ಕರ್ನಾಟಕದಲ್ಲಿ ಈ ಸೇವೆ 2008ರಿಂದ ಆರಂಭವಾಯಿತು. ರೋಗಿಗಳಿಗೆ ಚಿಕಿತ್ಸಾ ಪೂರ್ವ ಆರೈಕೆ ಮತ್ತು ಪ್ರಯಾಣ ಸೇವೆಯನ್ನು ಉಚಿತವಾಗಿ ಒದಗಿಸಲಿದೆ. 108 ಟೋಲ್ ಫ್ರಿ ಸಂಖ್ಯೆ ಹೆಸರಿನಲ್ಲೇ ಈ ಅಂಬುಲೆನ್ಸ್ ಸೇವೆಯು ಮನೆ ಮಾತಾಗಿದೆ. ದಿನ 24 ಗಂಟೆಯೂ ಇದು ಕಾರ್ಯ ನಿರ್ವಹಿಸಲಿದೆ.
108 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಸರಾಸರಿ 18 ನಿಮಿಷದಲ್ಲಿ ಸ್ಥಳಕ್ಕೆ ಅಂಬುಲೆನ್ಸ್‌ಗಳು ಬರಲಿವೆ. ಪ್ರತಿ ಅಂಬುಲೆನ್ಸ್‌ಗಳಲ್ಲಿ ನುರಿತ ಶುಶ್ರೂಷಕಿಯರು ರೋಗಿಗೆ ಚಿಕಿತ್ಸಾ ಪೂರ್ವ ಆರೈಕೆ ನೀಡಲಿದ್ದಾರೆ. ಅಪಘಾತ, ವಿಪತ್ತು ಸಂದರ್ಭದಲ್ಲಿ ತ್ವರಿತವಾಗಿ ಸೇವೆ ಒದಗಿಸುವ ಮೂಲಕ 108 ಅಂಬುಲೆನ್ಸ್‌ಗಳು ಪ್ರಾಣ ಉಳಿಸುವ ಕೆಲಸದಲ್ಲಿ ನಿರತವಾಗಿವೆ.
108 ಅಂಬುಲೆನ್ಸ್‌ನಲ್ಲಿ ಏನೆಲ್ಲಾ ಇರಲಿದೆ?
ತುರ್ತು ಸೇವೆಯಾದ 108 ಅಂಬುಲೆನ್ಸ್‌ನಲ್ಲಿ ಸುಧಾರಿತ ಲೈಫ್ ಸಪೋರ್ಟ್ ವ್ಯವಸ್ಥೆ, ಅಂಬುಲೆನ್ಸ್ ಡಿಫಿಬ್ರಿಲೇಟರ್, ಆಕ್ಸಿಜನ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಅಗತ್ಯ ವೈದ್ಯಕೀಯ ಉಪಕರಣಗಳು ಇವೆ. ಲೈಫ್ ಸಪೋರ್ಟ್ ವ್ಯವಸ್ಥೆಯಿಂದ ರೋಗಿಯ ಜೀವ ಉಳಿಸಬಹುದಾಗಿದೆ. ಈ ವ್ಯವಸ್ಥೆ ನೋಡಿಕೊಳ್ಳಲು ನುರಿತ ಅರೆಕಾಲಿಕ ವೈದ್ಯರು ಅಥವಾ ಶುಶ್ರೂಷಕಿಯನ್ನು ನೇಮಿಸಲಾಗಿರುತ್ತದೆ.
108 ಅಂಬುಲೆನ್ಸ್ ಯಾರ ಹಿಡಿತದಲ್ಲಿತ್ತು?
2005ರಲ್ಲಿ ಆಂಧ್ರಪ್ರದೇಶದಲ್ಲಿ ಆರಂಭಿಸಲಾದ 108 ಅಂಬುಲೆನ್ಸ್ ಸೇವೆಯು ಜಿವಿಕೆ ರೆಡ್ಡಿ ಒಡೆತನದ ತುರ್ತು ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ (EMRI) ಹಿಡಿತದಲ್ಲಿತ್ತು. 2010 ರ ಹೊತ್ತಿಗೆ 108 ಅಂಬುಲೆನ್ಸ್ ಸೇವೆಯನ್ನು ದೇಶದ 12 ರಾಜ್ಯಗಳಿಗೆ ವಿಸ್ತರಿಸಲಾಯಿತು. ಪ್ರಸ್ತುತ ಈ ಸೇವೆ ದೇಶದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶೇ 75 ರಷ್ಟು ಜನರಿಗೆ ತುರ್ತು ಸೇವೆ ನೀಡುತ್ತಿವೆ. ಜಿಪಿಎಸ್ ಟ್ರ್ಯಾಕಿಂಗ್, ವಿಡಿಯೋ ಕಾನ್ಫರೆನ್ಸ್ ಸೇರಿದಂತೆ ಸಂಚಾರಿ ಅಂಬುಲೆನ್ಸ್ ವ್ಯವಸ್ಥೆ ಮೂಲಕ 108 ಅಂಬುಲೆನ್ಸ್ ಸೇವೆ ಪ್ರಚಲಿತದಲ್ಲಿದೆ.
108 ಅಂಬುಲೆನ್ಸ್ ಯಶೋಗಾಥೆ ಏನು?
ಗ್ರಾಮೀಣ ಹಾಗೂ ನಗರ ಭಾಗದ ಜನರಿಗೆ ತ್ವರಿತವಾಗಿ ಆರೋಗ್ಯ ಸೇವೆ ಕಲ್ಪಿಸುವಲ್ಲಿ 108 ಅಂಬುಲೆನ್ಸ್‌ಗಳು ಮಹತ್ವ ಪಾತ್ರ ನಿರ್ವಹಿಸುತ್ತಿವೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಯನದ ಪ್ರಕಾರ 108 ಅಂಬುಲೆನ್ಸ್ ಸೇವೆ ಆರಂಭವಾದಾಗಿನಿಂದ ಈವರೆಗೆ 1.4 ಕೋಟಿ ಜನರ ಜೀವ ಉಳಿಸಿದೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆ ತಲುಪುವ ಸಮಯವನ್ನು ಸರಾಸರಿ 55 ನಿಮಿಷಗಳಿಂದ ಕೇವಲ 5-15 ನಿಮಿಷಗಳಿಗೆ ಇಳಿಸಿದೆ. ಜೊತೆಗೆ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ, ರಸ್ತೆ ಅಪಘಾತ ಹಾಗೂ ಹೃದಯಾಘಾತದಿಂದ ಉಂಟಾಗುವ ಸಾವುಗಳನ್ನು ಕಡಿಮೆ ಮಾಡುವಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದೆ ಎಂದು ಹೇಳಿದೆ.
ಅಂಬುಲೆನ್ಸ್ ಸಿಬ್ಬಂದಿಗೆ ಸೂಕ್ತ ತರಬೇತಿ ಮತ್ತು ಗುಣಮಟ್ಟದ ಆರೈಕೆ ಕುರಿತು ಆರೋಗ್ಯ ಇಲಾಖೆ ತರಬೇತಿ ನೀಡುತ್ತದೆ. ತುರ್ತು ಸಂದರ್ಭದಲ್ಲಿ ರೋಗಿಯ ಆರೈಕೆ ಮಾಡುವ ಕುರಿತು ನಿಯಮಿತ ರಿಫ್ರೆಶರ್ ಕೋರ್ಸ್‌ಗಳ ಮೂಲಕ ತರಬೇತಿ ನೀಡಿರುವುದರಿಂದ ಜೀವ ಉಳಿಸಲು ಸಾಧ್ಯವಾಗಿದೆ.
ತುರ್ತು ಸೇವೆ ಸುಧಾರಣೆಗೆ ಚಿಂತನೆ
ತುರ್ತು ಸೇವೆಗಳಾದ ಪೊಲೀಸ್, ಅಗ್ನಿಶಾಮಕ ಹಾಗೂ ಅಂಬುಲೆನ್ಸ್ ಸೇವೆಯಲ್ಲಿ ಮತ್ತಷ್ಟು ಸುಧಾರಣೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಂಬುಲೆನ್ಸ್ ಸೇವಾ ವಲಯದಲ್ಲಿ ಹೂಡಿಕೆ ಮತ್ತು ನಾವೀನ್ಯತೆ ಹೆಚ್ಚಿಸಲು ಖಾಸಗಿ ವಲಯದ ಕಂಪನಿಗಳೊಂದಿಗೆ ಪಾಲುದಾರಿಕೆಗೂ ಚಿಂತನೆ ನಡೆಸಲಾಗಿದೆ.
ತುರ್ತು ಸಂದರ್ಭದಲ್ಲಿ ಪರಿಣಾಮಕಾರಿ ವೈದ್ಯಕೀಯ ಆರೈಕೆ ಹೆಚ್ಚಿಸಲು ಟೆಲಿಮೆಡಿಸಿನ್, ಕೃತಕ ಬುದ್ಧಿಮತ್ತೆ ಹಾಗೂ ಡ್ರೋನ್‌ಗಳಂತಹ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಗೆ ನಿರ್ಧರಿಸಲಾಗಿದೆ. ಒಟ್ಟಾರೆ 108 ಅಂಬುಲೆನ್ಸ್ ಸೇವೆ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಶ್ರಮಿಸುತ್ತಿದೆ. ಈಗ ಸರ್ಕಾರವೇ ಸುಪರ್ದಿಗೆ ಪಡೆಯಲು ಮುಂದಾಗಿರುವುದರಿಂದ ಯಾವ ರೀತಿ ನಿರ್ವಹಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
(ಪಾರ್ಟ್- 2: ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 108 ಅಂಬುಲೆನ್ಸ್‌ಗಳು, ಸರ್ಕಾರ ಪಾವತಿಸುವ ವೆಚ್ಚ, ಸರ್ಕಾರದ ಕಮಾಂಡ್ ಸೇಂಟರ್ ಹೇಗೆ ಕಾರ್ಯ ನಿರ್ವಹಿಸಲಿವೆ ಎಂಬ ವಿವರ ಸೋಮವಾರ ಪ್ರಕಟವಾಗಲಿದೆ.)