ಪುಷ್ಪ ಸ್ಟೈಲ್‌ನಲ್ಲಿ ರಕ್ತಚಂದನ ದಂಧೆ: ದೆಹಲಿಯಲ್ಲಿ 10 ಟನ್ ವಶ, ಇಬ್ಬರು ಅರೆಸ್ಟ್
x

'ಪುಷ್ಪ' ಸ್ಟೈಲ್‌ನಲ್ಲಿ ರಕ್ತಚಂದನ ದಂಧೆ: ದೆಹಲಿಯಲ್ಲಿ 10 ಟನ್ ವಶ, ಇಬ್ಬರು ಅರೆಸ್ಟ್

ತಿರುಪತಿಯಿಂದ ಹೊರಟಿದ್ದ ಸರಕು ಸಾಗಣೆ ವಾಹನವನ್ನು ತಡೆದು ಪರಿಶೀಲಿಸಿದಾಗ, 'ಪುಷ್ಪ' ಸಿನಿಮಾದ ರೀತಿಯಲ್ಲಿ ಬೇರೆ ವಸ್ತುಗಳ ಅಡಿಯಲ್ಲಿ ಬಚ್ಚಿಡಲಾಗಿದ್ದ ರಕ್ತಚಂದನದ ತುಂಡುಗಳು ಪತ್ತೆಯಾಗಿವೆ.


'ಪುಷ್ಪ' ಸಿನಿಮಾದ ಕತೆಯಂತೆ ರಕ್ತಚಂದನ ಕಳ್ಳಸಾಗಣೆ ಮಾಡುವ ಜಾಲವನ್ನು ದೆಹಲಿ ಪೊಲೀಸರ ವಿಶೇಷ ಕಾರ್ಯಪಡೆ ಭೇದಿಸಿದೆ. ಆಂಧ್ರಪ್ರದೇಶದ ತಿರುಪತಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 10 ಟನ್ ತೂಕದ ರಕ್ತಚಂದನವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಪ್ರಮುಖ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ.

ದೆಹಲಿಯ ಆಗ್ನೇಯ ಜಿಲ್ಲೆಯ ಎಸ್‌ಟಿಎಫ್ ತಂಡಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಈ ಬೃಹತ್ ಕಾರ್ಯಾಚರಣೆ ನಡೆಸಲಾಗಿದೆ. ತಿರುಪತಿಯಿಂದ ಹೊರಟಿದ್ದ ಸರಕು ಸಾಗಣೆ ವಾಹನವನ್ನು ತಡೆದು ಪರಿಶೀಲಿಸಿದಾಗ, 'ಪುಷ್ಪ' ಸಿನಿಮಾದ ರೀತಿಯಲ್ಲಿ ಬೇರೆ ವಸ್ತುಗಳ ಅಡಿಯಲ್ಲಿ ಬಚ್ಚಿಡಲಾಗಿದ್ದ ರಕ್ತಚಂದನದ ತುಂಡುಗಳು ಪತ್ತೆಯಾಗಿವೆ. ತಕ್ಷಣವೇ ವಾಹನದಲ್ಲಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಈ ಜಾಲದ ಹಿಂದೆ ಇನ್ನೂ ಹಲವರು ಇರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ.

ಹೊಸಕೋಟೆಯಲ್ಲೂ ನಡೆದಿತ್ತು ಇದೇ ರೀತಿ ಕಾರ್ಯಾಚರಣೆ

ಇದೇ ರೀತಿಯ ಕಾರ್ಯಾಚರಣೆಯೊಂದು ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿತ್ತು. ಸೆಪ್ಟೆಂಬರ್ 4 ರಂದು ಹೊಸಕೋಟೆ ಪೊಲೀಸರು ಸುಮಾರು 25 ಲಕ್ಷ ರೂಪಾಯಿ ಮೌಲ್ಯದ 11 ಕ್ವಿಂಟಲ್ (102 ತುಂಡು) ರಕ್ತಚಂದನವನ್ನು ವಶಪಡಿಸಿಕೊಂಡಿದ್ದರು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ರಕ್ತಚಂದನವನ್ನು ತರಿಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಟ್ರಾನ್ಸ್‌ಪೋರ್ಟ್ ಕಂಪನಿಯ ವಾಹನದಲ್ಲಿ ಸಾಗಿಸುವಾಗ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಅಕ್ರಮ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ರಕ್ತಚಂದನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆಯಿದೆ. ಇದೇ ಕಾರಣಕ್ಕೆ ಆಂಧ್ರಪ್ರದೇಶದ ಶೇಷಾಚಲಂ ಅರಣ್ಯ ಪ್ರದೇಶದಿಂದ ರಕ್ತಚಂದನವನ್ನು ಕಡಿದು, ದೇಶದ ವಿವಿಧ ಭಾಗಗಳ ಮೂಲಕ ವಿದೇಶಗಳಿಗೆ ಕಳ್ಳಸಾಗಣೆ ಮಾಡುವ ಜಾಲ ಸಕ್ರಿಯವಾಗಿದೆ.]

Read More
Next Story