ಕೆಇಎ ಯಡವಟ್ಟು | ಚೆಸ್ ಆಟಗಾರ್ತಿ ಸಂಜನಾಗೆ 10 ಲಕ್ಷ ರೂ ಪರಿಹಾರ: ಹೈಕೋರ್ಟ್‌ ಆದೇಶ
x
ಕರ್ನಾಟಕ ಹೈಕೋರ್ಟ್‌

ಕೆಇಎ ಯಡವಟ್ಟು | ಚೆಸ್ ಆಟಗಾರ್ತಿ ಸಂಜನಾಗೆ 10 ಲಕ್ಷ ರೂ ಪರಿಹಾರ: ಹೈಕೋರ್ಟ್‌ ಆದೇಶ

'ಅರ್ಜಿದಾರರು ಕ್ರೀಡಾ ಕೋಟಾದಡಿ ಸೀಟು ಪಡೆಯುವ ಅರ್ಹತೆ ಹೊಂದಿ ಪಿ-1 ಶ್ರೇಣಿಗೆ ಅರ್ಹರಿದ್ದಾರೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಿದೆ. ನಿಯಮಗಳ ಪ್ರಕಾರ ಈ ವರ್ಗೀಕರಣ ಊರ್ಜಿತವಾಗದು' ಎಂದು ನ್ಯಾಯಪೀಠ ಹೇಳಿದೆ.


Click the Play button to hear this message in audio format

ಕ್ರೀಡಾ ಕೋಟಾದಡಿ ಸೀಟು ನೀಡದಿದ್ದಕ್ಕೆ ಅಂತರರಾಷ್ಟ್ರೀಯ ಚೆಸ್‌ ಪಟು ಸಂಜನಾ ರಘುನಾಥ್ ಅವರಿಗೆ 10 ಲಕ್ಷ ರೂ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಬೆಂಗಳೂರಿನ ಎಚ್‌ಎಸ್‌ಆರ್ ಲೇ ಔಟ್ ನಿವಾಸಿಯಾಗಿರುವ ಸಂಜನಾ ಅವರು ಕ್ರೀಡಾ ಕೋಟಾದಡಿ ಅರ್ಹತೆ ಹೊಂದಿದ್ದರೂ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಿತ್ತು. ಈ ಹಿನ್ನಲೆಯಲ್ಲಿ ಸಂಜನಾ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿ ಮಂಗಳವಾರ ಈ ಕುರಿತಂತೆ ಆದೇಶಿಸಿದೆ.

'ಅರ್ಜಿದಾರರು ಕ್ರೀಡಾ ಕೋಟಾದಡಿ ಸೀಟು ಪಡೆಯುವ ಅರ್ಹತೆ ಹೊಂದಿ ಪಿ-1 ಶ್ರೇಣಿಗೆ ಅರ್ಹರಿದ್ದಾರೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಿದೆ. ನಿಯಮಗಳ ಪ್ರಕಾರ ಈ ವರ್ಗೀಕರಣ ಊರ್ಜಿತವಾಗದು' ಎಂದು ನ್ಯಾಯಪೀಠ ಹೇಳಿದೆ.

ಸರ್ಕಾರಿ ಕೋಟಾದಡಿ ಸೀಟು ಸಿಗದೇ ಹೋದ ಕಾರಣ ಅವರು ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿ ಅಂದಾಜು 11 ಲಕ್ಷ ರೂ ಪಾವತಿಸಿದ್ದಾರೆ. ಹಾಗಾಗಿ, ಅವರಿಗೆ ರಾಜ್ಯ ಸರ್ಕಾರ ಆರು ವಾರಗಳಲ್ಲಿ 10 ಲಕ್ಷ ರೂ ಪರಿಹಾರದ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ಪಿ.ಶ್ರೀಕಾಂತ್ ವಾದ ಮಂಡಿಸಿದರು.

ಹೆಸರಾಂತ ಚೆಸ್ ಆಟಗಾರ್ತಿ ಸಂಜನಾ ರಘುನಾಥ್ ಹಲವು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚೆಸ್ ಟೂರ್ನಿಗಳಲ್ಲಿ ಭಾಗವಹಿಸಿದ್ದರು. 2019ರಲ್ಲಿ 13 ವರ್ಷದೊಳಗಿನ 32ನೇ ರಾಷ್ಟ್ರೀಯ ಬಾಲಕಿಯರ ಚೆಸ್‌ ಚಾಂಪಿಯನ್‌ಷಿಪ್, ಏಷ್ಯಾ ಯುವ ಚೆಸ್ ಚಾಂಪಿಯನ್‌ಷಿಪ್ ಹಾಗೂ ಕಾಮನ್ ವೆಲ್ತ್ ಚೆಸ್ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿದ್ದರು. ಅಖಿಲ ಭಾರತ ಚೆಸ್ ಫೆಡರೇಷನ್‌ನಲ್ಲಿ ಪದಕ ಜಯಸಿದ್ದರು. ವೈದ್ಯೆಯಾಗುವ ಆಕಾಂಕ್ಷೆ ಹೊಂದಿದ್ದ ಅವರು 2022-23ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್‌ ಗಳಿಸಿದ್ದರು. ಆದರೆ, ಕೆಇಎ ಅವರ ಅರ್ಹತೆಗೆ ತಕ್ಕಂತೆ ಶ್ರೇಣಿ ನೀಡದ ಕಾರಣ ಸೀಟು ವಂಚಿತರಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Read More
Next Story