Uttara Kannada Accident | ಲಾರಿ ಪಲ್ಟಿಯಾಗಿ 9 ಸಾವು, 19 ಮಂದಿಗೆ ಗಾಯ; ಮೃತರಿಗೆ ಪರಿಹಾರ ಘೋಷಣೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ಬುಧವಾರ ದಟ್ಟ ಮಂಜಿನಿಂದ ಲಾರಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ
ತರಕಾರಿ ಹಾಗೂ ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾಗಿ 9 ಮಂದಿ ಧಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಸಮೀಪ ಬುಧವಾರ ನಸುಕಿನಲ್ಲಿ ನಡೆದಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಘಟನೆ ಸಂಭವಿಸಿದ್ದು, 19 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಫಯಾಜ್ ಜಮಖಂಡಿ (45), ವಾಸೀಂ ಮುಡಗೇರಿ (35), ಇಜಾಜ್ ಮುಲ್ಲಾ (20), ಸಾದಿಕ್ ಬಾಷಾ (30), ಗುಲಾಮ್ ಹುಸೇನ್ ಜವಳಿ (40), ಇಮ್ತಿಯಾಜ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜಿಲಾನಿ ಅಬ್ದುಲ್ ಜಖಾತಿ (25), ಅಸ್ಲಂ ಬಾಬುಲಿ ಬೆಣ್ಣಿ (24) ಎಂದು ಗುರುತಿಸಲಾಗಿದೆ.
ಅಶ್ರಪ್ (18), ಖ್ವಾಜಾ (22), ಮೊಹಮ್ಮದ್ ಸಾದಿಕ್ (25), ಖ್ವಾಜಾ ಮೈನು (24), ನಿಜಾಮ್ (30), ಲಾರಿ ಚಾಲಕ ಮದ್ಲಾನ್ ಸಾಬ್ (24), ಜಾಫರ್ (22) ಅವರಿಗೆ ಗಂಭೀರ ಗಾಯಗಳಾಗಿವೆ. ಮಲ್ಲಿಕ ರೆಹಾನ್ (21), ಅಫ್ತಾಬ್(23), ಗೌಸ್ ಮೈಯುದ್ದೀನ್ (30), ಇರ್ಫಾನ್ (17), ನೂರ ಅಹಮ್ಮದ್ ( 30), ಅಪ್ಸರ್ ಕಾಂಜಾಡ್ (34), ಸುಭಾಷ ಗೌಡರ್ (17 ), ಖಾದ್ರಿ (26 ), ಸಾಬೀರ್ ಅಹಮ್ಮದ ಬಾಬಾ ಹುಸೇನ್ ಗವಾರಿ (38), ಮರ್ದಾನ್ ಸಾಬ್ (22), ರಪಾಯಿ (21), ಮೊಹಮದ್ ಗೌಸ್(22)ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತರಕಾರಿ ತುಂಬಿದ್ದ ಲಾರಿಯು ಹಾವೇರಿಯ ಸವಣೂರಿನಿಂದ ಉತ್ತರ ಕನ್ನಡದ ಕುಮಟಾ ಮಾರುಕಟ್ಟೆಗೆ ತೆರಳುತ್ತಿತ್ತು. ಇದರಲ್ಲಿ ಒಟ್ಟು 28 ಜನರು ಪ್ರಯಾಣಿಸುತ್ತಿದ್ದರು.
ಅರೆಬೈಲ್ ಹಾಗೂ ಗುಳ್ಳಾಪುರ ನಡುವೆ ಬೆಳಿಗ್ಗೆ 5.30ರ ಸುಮಾರಿಗೆ ದಟ್ಟ ಮಂಜು ಆವರಿಸಿತ್ತು. ಎದುರಿನಿಂದ ಬಂದ ವಾಹನಕ್ಕೆ ದಾರಿ ಬಿಡಲು ಎಡ ಭಾಗಕ್ಕೆ ಬಂದಾಗ ನಿಯಂತ್ರಣ ತಪ್ಪಿ 50 ಅಡಿ ಆಳಕ್ಕೆ ಲಾರಿ ಉರುಳಿ ಬಿದ್ದಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ನಾರಾಯಣ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ.ಘಟನೆಗೆ ಸಂಬಂಧಿಸಿ ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಯಲ್ಲಾಪುರ ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರದ ವತಿಯಿಂದಲೇ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಅವಸರ, ಅತಿ ವೇಗದ ಚಾಲನೆ ಹಾಗೂ ಅಜಾಗರೂಕತೆ ಅಪಘಾತಕ್ಕೆ ಕಾರಣವಾಗಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.