ಗೋಕರ್ಣದ ಗುಹೆಗಳೇಕೆ ವಿದೇಶಿ ಪ್ರವಾಸಿಗರಿಗೆ ಅಚ್ಚುಮೆಚ್ಚು ;  ರಷ್ಯಾ ಮಹಿಳೆಯಿಂದ ಬಯಲಾದ ಗುಟ್ಟುಗಳು...
x

ಗೋಕರ್ಣದ ಗುಹೆಗಳೇಕೆ ವಿದೇಶಿ ಪ್ರವಾಸಿಗರಿಗೆ ಅಚ್ಚುಮೆಚ್ಚು ; ರಷ್ಯಾ ಮಹಿಳೆಯಿಂದ ಬಯಲಾದ ಗುಟ್ಟುಗಳು...

ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ಗುಹೆಯಲ್ಲಿ ವಾಸಮಾಡುವುದು ಸಾಮಾನ್ಯ ಪ್ರಕ್ರಿಯೆ, ಮೊದಲು ಅದು ಸುದ್ದಿಯಾಗುತ್ತಿರಲಿಲ್ಲ. 2018 ರಲ್ಲಿ ರಷ್ಯಾ ಪ್ರವಾಸಿಯೊಬ್ಬ ವೀಸಾ ಅವಧಿ ಮುಗಿದ ಮೇಲೂ ಗುಹೆಯಲ್ಲಿ ವಾಸ ಮಾಡಿ ಸಿಕ್ಕಿ ಹಾಕಿಕೊಂಡಿದ್ದ.


ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಗುಹೆಯೊಂದರಲ್ಲಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ರಷ್ಯಾದ ಮಹಿಳೆಯೊಬ್ಬರು ಹಲವು ವರ್ಷಗಳಿಂದ ರಹಸ್ಯವಾಗಿ ವಾಸಿಸುತ್ತಿದ್ದ ಪ್ರಕರಣವು ಅಲ್ಲಿನ ಗುಹೆಗಳಲ್ಲಿ ಮನುಷ್ಯರ ವಾಸದ ಕಥೆಯನ್ನು ಮುನ್ನೆಲೆಗೆ ತಂದಿದೆ.

ಅರಬ್ಬಿ ಸಮುದ್ರದ ತೀರದ ಗೋಕರ್ಣ ತನ್ನ ಪ್ರಾಕೃತಿಕ ಸೌಂದರ್ಯದಿಂದ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಇಲ್ಲಿನ ಓಂ ಬೀಚ್‌ಗೆ ಅಮೆರಿಕಾ, ರಷ್ಯಾ, ಇಸ್ರೇಲ್, ಇಟಲಿ, ಸ್ವೀಡನ್ ಸೇರಿದಂತೆ ಯೂರೋಪ್ ರಾಷ್ಟ್ರಗಳಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿ ನಿಸರ್ಗದ ಮಡಿಲಲ್ಲಿ ಸ್ವಚ್ಚಂಧವಾಗಿ ವಿಹರಿಸಿ ವಾಪಸ್ ಆಗುವುದುಂಟು. ಹೀಗೆ ಬಂದವರಲ್ಲಿ ಎಷ್ಟೋ ಮಂದಿ ವಿದೇಶಿಯರು ತಮ್ಮ ಪ್ರವಾಸಿ ವೀಸಾ ಅವಧಿ ಮುಗಿದ ನಂತರವೂ ಠಿಕಾಣಿ ಹೂಡಿದ ಪ್ರಕರಣಗಳಿವೆ. ಇನ್ನೂ ಕೆಲವರು ಗೋಕರ್ಣದಿಂದ ವಾಪಸ್ ಹೋಗಲು ಮನಸ್ಸಾಗದೆ ಸಣ್ಣ ಪುಟ್ಟ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಇಲ್ಲೆ ಉಳಿಯಲು ಅವಕಾಶ ಸೃಷ್ಟಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ.

ಗೋಕರ್ಣದ ಗುಹೆಗಳು ಅಚ್ಚು ಮೆಚ್ಚು

ಗೋಕರ್ಣದ ಕಡಲ ತೀರದ ಪಕ್ಕದ ಗುಡ್ಡ ಹಾಗೂ ಕುಡ್ಲೆ ಕಡಲ ತೀರದ ಮೇಲ್ಭಾಗದ ಗುಡ್ಡದಲ್ಲಿ ಎಂಟಕ್ಕೂ ಹೆಚ್ಚು ಗುಹೆಗಳಿವೆ. ಅವುಗಳಲ್ಲಿ ರಾಮತೀರ್ಥ, ಗೋಗರ್ಭ ಪ್ರಮುಖವಾಗಿವೆ. ರಷ್ಯಾ, ಇಸ್ರೇಲ್, ಸ್ವೀಡನ್ ಹಾಗೂ ಅಮೆರಿಕಾದ ಪ್ರವಾಸಿಗರು ಇಲ್ಲಿ ಧ್ಯಾನಕ್ಕೆ ತಂಗುವುದು ಸಾಮಾನ್ಯ, ಇವುಗಳ ಅಕ್ಕಪಕ್ಕದಲ್ಲಿ ಸಣ್ಣಪುಟ್ಟ ಗುಹೆಗಳಿವೆ. ಅಲ್ಲಿ ಏಕಾಂತ ಬಯಸುವ ಹಿಪ್ಪಿಗಳು, ಮಾದಕ ವ್ಯಸನಿ ಪ್ರವಾಸಿಗರು ತಂಗುತ್ತಾರೆ ಎಂದು ಸ್ಥಳೀಯ ನಿವಾಸಿ ಸುಜಯ್ ಶೆಟ್ಟಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.


ವೀಸಾ ಅವಧಿ ಮೀರಿದವರು, ಮಾದಕ ವ್ಯಸನಿಗಳು, ಹಣಕಾಸಿನ ಸಮಸ್ಯೆ ಎದುರಿಸುವವರು, ಸ್ವತಂತ್ರವಾಗಿ ಇರಲು ಬಯಸುವವರು, ಹಿಪ್ಪಿಗಳು ಗುಹೆಯಲ್ಲಿ ವಾಸವಿರಲು ಬಯಸುತ್ತಾರೆ.

ಮಳೆಗಾಲದ ಬಳಿಕ ಗೋಕರ್ಣಕ್ಕೆ ಬರುವ ವಿದೇಶಿ ಪ್ರವಾಸಿಗರು ನಾಲ್ಕೈದು ತಿಂಗಳು ತಂಗುತ್ತಾರೆ. ಇಲ್ಲಿ ಇದ್ದಷ್ಟು ದಿನ ಗುಹೆಯಲ್ಲಿ ಮೋಜು‌ ಮಸ್ತಿ ಮಾಡುತ್ತಾರೆ. ಹೋಟೆಲ್ ರೂಮ್, ರೆಸಾರ್ಟ್, ಬಾಡಿಗೆ ಮನೆಯಾದರೆ ಗುರುತಿನ ಚೀಟಿ ನೀಡಬೇಕು. ಸಿ-ಫಾರಂ ದೃಢೀಕರಣ ಮಾಡಬೇಕು, ದುಬಾರಿ ಬಾಡಿಗೆ ಪಾವತಿಸಬೇಕು, ಮಾದಕ ದ್ರವ್ಯ ಸೇವನೆಗೆ ಅವಕಾಶ ಇರುವುದಿಲ್ಲ, ಹೋಟೆಲ್ ಸಿಬ್ಬಂದಿ ಹಾಗೂ ಸಿ.ಸಿ.ಟಿವಿ ಕ್ಯಾಮೆರಾದ ಕಣ್ಗಾವಲಿನಲ್ಲಿ ಇರಬೇಕಾಗುತ್ತದೆ. ಈ ಎಲ್ಲಾ ಜಂಜಾಟ ಬೇಡವೆಂದೇ ವಿದೇಶಿ ಪ್ರವಾಸಿಗರು ವಾಸ್ತವ್ಯಕ್ಕೆ ಸುತ್ತಮುತ್ತಲ ಗುಹೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೋಟೆಲ್ ಉದ್ಯಮಿ ನಾಗರಾಜ್ ನಾಯ್ಕ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕೋವಿಡ್ ನಂತರ ಕಡಿಮೆಯಾದ ಪ್ರವಾಸಿಗರ ಸಂಖ್ಯೆ

ಕೋವಿಡ್ ಮಹಾಮಾರಿಗೂ ಮುನ್ನ ಗೋಕರ್ಣಕ್ಕೆ ವಿದೇಶಿ ಪ್ರವಾಸಿಗರ ದಂಡೇ ಬರುತ್ತಿತ್ತು. ಪ್ರತಿವರ್ಷ ಅಂದಾಜು ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದರು. ಹೋಟೆಲ್‌, ರೆಸಾರ್ಟ್, ಬಾಡಿಗೆ ರೂಂ ಹಾಗೂ ಗುಹೆಗಳು ಭರ್ತಿಯಾಗುತ್ತಿದ್ದವು. ಅದು ಸಾಕಾಗದೆ ತೆಂಗಿನ ಗರಿಯ ಗುಡಿಸಲುಗಳನ್ನು ಹಾಕಿಕೊಂಡು ವಾಸ್ತವ್ಯ ಮಾಡುತ್ತಿದ್ದರು. ಭರ್ಜರಿ ವ್ಯಾಪಾರವೂ ನಡೆಯುತ್ತಿತ್ತು. ಕೋವಿಡ್ ನಂತರ ವಿದೇಶಿ ಪ್ರವಾಸಿಗರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದೆ. ವ್ಯಾಪಾರವೂ ಕುಸಿದಿದೆ. ಈ ನಡುವೆ ರಷ್ಯಾ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಗುಹೆವಾಸ ಮಾಡುತ್ತಿದ್ದ ಪ್ರಕರಣದಿಂದ ಗೋಕರ್ಣವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗುವಂತೆ ಮಾಡಿದೆ ಎಂದು ಸ್ಥಳೀಯ ಶಿಕ್ಷಕ ಮಂಜುನಾಥ್ ಭಟ್ 'ದ ಫೆಡರಲ್ ಕರ್ನಾಟಕ'ಕ್ಕೆ ಹೇಳುತ್ತಾರೆ.


ಪ್ರವಾಸಕ್ಕೆ ಬಂದವರಲ್ಲಿ ದೊಡ್ಡ ಸಂಖ್ಯೆಯ ಜನ ಇಲ್ಲಿನ ಧಾರ್ಮಿಕ ಪಾವಿತ್ರ್ಯತೆಯನ್ನು ಗೌರವಿಸಿ ಸರಳ ಜೀವನ ನಡೆಸುತ್ತಿದ್ದಾರೆ. ಭಕ್ತಿ ಮತ್ತು ಧ್ಯಾನದಲ್ಲಿ ಜೀವನ ಸಾಗಿಸುತ್ತಾ ಮಾನಸಿಕ ಶಾಂತಿ ಪಡೆದಿದ್ದಾರೆ. ಕೆಲವರು ಮಾತ್ರ ಹಿಪ್ಪಿ ಬಿಟ್ಟುಕೊಂಡು, ಮಾದಕ ದ್ರವ್ಯಗಳನ್ನು ಸೇವಿಸುತ್ತಾ ಸಣ್ಣ ಪುಟ್ಟ ಅಪರಾಧ ಚಟುವಟಿಕೆ ನಡೆಸುತ್ತಾ ತೊಂದರೆ ನೀಡಿರುವುದೂ ಇದೆ ಎಂದು ಸ್ಥಳೀಯ ಉದ್ಯಮಿ ರವಿ ನಾಯ್ಕ್ ಹೇಳಿದರು.

ರಷ್ಯಾ ಮಹಿಳೆ ವಾಸದಿಂದ ಸುದ್ದಿಯಾದ ಗುಹೆಗಳು

ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ಗುಹೆಯಲ್ಲಿ ವಾಸಮಾಡುವುದು ಸಾಮಾನ್ಯ ಪ್ರಕ್ರಿಯೆ, ಮೊದಲು ಅದು ಸುದ್ದಿಯಾಗುತ್ತಿರಲಿಲ್ಲ. 2018 ರಲ್ಲಿ ರಷ್ಯಾ ಪ್ರವಾಸಿಯೊಬ್ಬ ವೀಸಾ ಅವಧಿ ಮುಗಿದ ಮೇಲೂ ಗುಹೆಯಲ್ಲಿ ವಾಸ ಮಾಡಿ ಸಿಕ್ಕಿ ಹಾಕಿಕೊಂಡಿದ್ದ.

ರಷ್ಯಾ ಪ್ರವಾಸಿ ರಾಮತೀರ್ಥ ಗುಹೆಯಲ್ಲಿ ವಾಸ ಮಾಡುತ್ತಿದ್ದ. ಇದೀಗ ರಷ್ಯಾ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅದೇ ರಾಮತೀರ್ಥ ಗುಹೆಯಲ್ಲಿ ಪತ್ತೆಯಾಗಿದ್ದಾಳೆ. ಪುಟ್ಟ ಮಕ್ಕಳೊಂದಿಗೆ ಆ ಮಹಿಳೆ ಯಾವುದೇ ರೀತಿಯ ಸೌಲಭ್ಯಗಳಿರದ ಗುಹೆಯಲ್ಲಿ ವಾಸ ಮಾಡಿರುವುದರಿಂದ ಅದು ದೊಡ್ಡ ಸುದ್ದಿಯಾಗಿದೆ. ಒಂದೇ ಸಮನೆ ಸುರಿಯುವ‌ ಮುಂಗಾರು ಮಳೆ ಸಮಯದಲ್ಲಿ ಈ ಭಾಗದಲ್ಲಿ ಮಣ್ಣುಗಳು ಸಡಿಲವಾಗಿ ಗುಡ್ಡಗಳು ಕುಸಿಯವ ಅಪಾಯ ಹೆಚ್ಚಿದೆ. ಅಲ್ಲದೆ ಮಳೆಗಾಲದ ಸಮಯದಲ್ಲಿ ಹಾವು, ಚೇಳು ಸಹಿತ ವಿಷಕಾರಿ ಜೀವ ಜಂತುಗಳು ಗುಹೆಯನ್ನು ಆಶ್ರಯಿಸುತ್ತವೆ. ಮಳೆ ನೀರಿನಿಂದ ಗುಡ್ಡದ ತಳಭಾಗದ ಶೀತದಿಂದ ಕೂಡಿರುತ್ತದೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಗುಹೆಯಲ್ಲಿ ವಾಸ ಮಾಡುವುದು ಪ್ರಾಣಕ್ಕೆ ಸಂಚಕಾರ ತಂದೊಡ್ಡುವ ಸಾಧ್ಯತೆಯೂ ಇದೆ ಎಂದು ಸ್ಥಳೀಯ ನಿವಾಸಿ ಮಹೇಶ್ ಗೌಡ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಚಿಂತನೆ

ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ ಅವರ ಪ್ರಕಾರ ಮಳೆಗಾಲದಲ್ಲಿ ಗುಹೆಗಳಲ್ಲಿ ವಾಸ ಕಷ್ಟ. ಅಕ್ಟೋಬರ್ ಬಳಿಕ ಪ್ರವಾಸಿಗರು ಗುಹೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಅಂತಹ ವಿದೇಶಿ ಪ್ರವಾಸಿಗರ ಚಲನವಲನಗಳ ಮೇಲೆ ನಿಗಾ ವಹಿಸಲು ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.


ರಾಮತೀರ್ಥ ಗುಡ್ಡದಲ್ಲಿ ಗುಹೆಯಿದ್ದು, ಕಳೆದ ವರ್ಷ ಮಳೆಗಾಲದಲ್ಲಿ ಸ್ವಲ್ಪ ಭಾಗ ಕುಸಿದಿತ್ತು. ಆ ಹಿನ್ನಲೆಯಲ್ಲಿ ಈ ವರ್ಷ ಮಳೆ ಅಬ್ಬರ ಹೆಚ್ಚಾಗಿರುವುದರಿಂದ ರಾಮತೀರ್ಥ ಗುಡ್ಡ ಕುಸಿಯುವ ಅಪಾಯದ ಮುನ್ಸೂಚನೆ ಅರಿಯಲು ಗೋಕರ್ಣ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಎಸ್.ಎಸ್. ಶ್ರೀಧರ್ ಅವರು ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಗಸ್ತಿಗೆ ಕಳುಹಿಸಿದರು, ಆ ಸಮಯದಲ್ಲಿ ರಾಮತೀರ್ಥ ಗುಡ್ಡದ ಗುಹೆಯಲ್ಲಿ ರಷ್ಯಾ ಮಹಿಳೆ ಮತ್ತು ಮಕ್ಕಳು ವಾಸ್ತವ್ಯ ಮಾಡಿದ ವಿಷಯ ಗಮನಕ್ಕೆ ಬಂದಿದೆ. ಗೋವಾದಿಂದ ಗೋಕರ್ಣಕ್ಕೆ ಮಕ್ಕಳೊಂದಿಗೆ ಆಗಮಿಸಿದ ರಷ್ಯಾ ಮಹಿಳೆ ಒಂದು ವಾರದಿಂದ ಗುಹೆಯಲ್ಲಿ ವಾಸ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿತು.


ರಷ್ಯಾ ರಾಯಭಾರ ಕಚೇರಿ ಮೂಲಕ ಡಿಪೋರ್ಟ್‌?

ರಾಮತೀರ್ಥ ಗುಹೆಯಲ್ಲಿ ಜುಲೈ 9 ರಂದು ಪತ್ತೆಯಾಗಿದ್ದ ರಷ್ಯಾ ಮಹಿಳೆ 40 ವರ್ಷದ ನೀನಾ ಕುಟಿನಾ ಹಾಗೂ ಆಕೆಯ ಇಬ್ಬರೂ ಮಕ್ಕಳಾದ 6 ವರ್ಷದ ಪ್ರೇಮಾ ಮತ್ತು 4 ವರ್ಷದ ಅಮಾ ಅವರನ್ನು ಗೋಕರ್ಣ ಪೊಲೀಸರು ಬೆಂಗಳೂರಿನಲ್ಲಿರುವ ವಿದೇಶಿಗರ ವಿಭಾಗೀಯ ನೋಂದಣಿ ಕಚೇರಿಗೆ (ಎಫ್ ಆರ್ ಆರ್ ಒ) ಕರೆ ತಂದಿದ್ದಾರೆ. ವಿದೇಶಿಗರ ವಿಭಾಗೀಯ ನೋಂದಣಿ ಕಚೇರಿಯ ಅಧಿಕಾರಿಗಳು ಮಹಿಳೆಗೆ ಸುತ್ತಾಟ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಪ್ರಸ್ತುತ ಅವರನ್ನು ತುಮಕೂರಿನಲ್ಲಿರುವ ವಿದೇಶಿಗರ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ. ರಷ್ಯಾ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ. ಅಲ್ಲಿಂದ ಸೂಚನೆ ಬಂದ ಬಳಿಕ ಮಹಿಳೆ ಮತ್ತು ಮಕ್ಕಳನ್ನು ವಾಪಸ್ ಅವರ ತಾಯ್ನಾಡಿಗೆ ಕಳುಹಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದ್ದಾರೆ.

Read More
Next Story