Building Collapse | ಬಹುಮಹಡಿ ಕಟ್ಟಡ ಕುಸಿತ: ಸಾವಿನ ಸಂಖ್ಯೆ 5ಕ್ಕೆ ಏರಿಕೆ, ಕಟ್ಟಡ ಮಾಲೀಕರ ವಿರುದ್ಧ ಎಫ್‌ಐಆರ್‌
x

Building Collapse | ಬಹುಮಹಡಿ ಕಟ್ಟಡ ಕುಸಿತ: ಸಾವಿನ ಸಂಖ್ಯೆ 5ಕ್ಕೆ ಏರಿಕೆ, ಕಟ್ಟಡ ಮಾಲೀಕರ ವಿರುದ್ಧ ಎಫ್‌ಐಆರ್‌

ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ 6 ಅಂತಸ್ತಿನ ಕಟ್ಟಡ ಮಂಗಳವಾರ ಕುಸಿದಿದ್ದು, ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ ಕಾರ್ಮಿಕರ ಸಂಖ್ಯೆ ಬುಧವಾರ 5ಕ್ಕೆ ಏರಿಕೆಯಾಗಿದೆ.


ಭಾರೀ ಮಳೆಯಿಂದ ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡದ ಕುಸಿದಿದ್ದು, ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಬುಧವಾರ ಐದಕ್ಕೆ ಏರಿಕೆಯಾಗಿದೆ. ಈವರೆಗೆ 13 ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಮೂವರು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ತಂಡ ಮಳೆಯ ನಡುವೆಯೂ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿತು. ಬುಧವಾರ ಬೆಳಿಗ್ಗೆ ಶ್ವಾನದಳದ ಮೂಲಕ ಪರಿಶೀಲಿಸಿ, ಅವಶೇಷಗಳಡಿ ಸಿಲುಕಿದ್ದ ಮತ್ತೆರಡು ಮೃತದೇಹಗಳನ್ನು ಕಬ್ಬಿಣ ಸರಳು ಹಾಗೂ ಬೀಮ್‌ ತುಂಡರಿಸಿ ಹೊರತೆಗೆಯಲಾಯಿತು.

ಮೃತರಲ್ಲಿ ಮೂವರು ಬಿಹಾರ ಮೂಲದವರು ಎನ್ನಲಾಗಿದೆ. ಮೃತರನ್ನು ಹರ್ಮನ್ (26), ತ್ರಿಪಾಲ್ (35), ಮೊಹಮ್ಮದ್ ಸಾಹಿಲ್ (19), ಸತ್ಯರಾಜು (25) ಮತ್ತು ಶಂಕರ್ ಎಂದು ಗುರುತಿಸಲಾಗಿದೆ.

ಕಟ್ಟಡ ಮಾಲೀಕರ ವಿರುದ್ಧ ಎಫ್‌ಐಆರ್‌

ಕಟ್ಟಡ ಮಾಲೀಕ ಆಂಧ್ರಪ್ರದೇಶ ಮೂಲದ ಮುನಿರಾಜು ರೆಡ್ಡಿ ಹಾಗೂ ಅವರ ಪುತ್ರ ಮೋಹನ ರೆಡ್ಡಿ ಎಂಬುವರ ಮೇಲೆ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮೃತ ಹರ್ಮನ್‌ ಅವರ ಸಂಬಂಧಿ ಮೊಹಮದ್‌ ಅರ್ಷದ್‌ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಟ್ಟಡ ಮಾಲೀಕರು ಬಿಬಿಎಂಪಿ ವತಿಯಿಂದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ಅಕ್ರಮವಾಗಿ ಆರು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಆ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜು ತಿಳಿಸಿದರು.

ಆರೋಪಿಗಳ ವಿರುದ್ಧ ಬಿಎನ್‌ಎಸ್‌ 105ಸೆಕ್ಷನ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ ಹಾಗೂ ರಿಯಲ್‌ ಎಸ್ಟೇಟ್‌(ನಿಯಂತ್ರಣ ಮತ್ತು ಅಭಿವೃದ್ಧಿ) ೨೦೧೬ರ ಕಾಯ್ದೆಯಡಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

20 ಮಂದಿ ಅವಶೇಷಗಳಡಿ ಸಿಲುಕಿದ್ದರು

ಕನಿಷ್ಠ 20 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದರು ಎಂದು ಡಿಸಿಪಿ (ಪೂರ್ವ ಬೆಂಗಳೂರು) ಡಿ ದೇವರಾಜ್ ತಿಳಿಸಿದ್ದಾರೆ. ಇಲ್ಲಿಯವರೆಗೆ 5 ಮೃತದೇಹಗಳು ಪತ್ತೆಯಾಗಿವೆ. ಐವರು ಗಾಯಗೊಂಡಿದ್ದಾರೆ. 13 ಕಾರ್ಮಿಕರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ ಎಂದು ಹೇಳಿದರು. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಕಟ್ಟಡ ಕುಸಿತದ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕ ಭೈರತಿ ಬಸವರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ಮುಖ್ಯ ಎಂಜಿನಿಯರ್ ಅವರು ಘಟನೆ ಕುರಿತು ಡಿ.ಕೆ.ಶಿವಕುಮಾರ್‌ ಅವರಿಗೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಸುಮಾರು 20 ಮಂದಿ ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ‌. ಈಗ 13 ಜನರ ರಕ್ಷಣೆ ಆಗಿದೆ, ಉಳಿದವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಮೃತರು ಹಾಗೂ ಗಾಯಾಳುಗಳ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ಸೂಕ್ತ ಪರಿಹಾರ ನೀಡಲಾಗುವುದು. ಮೃತರಲ್ಲಿ ವಲಸಿಗ ಕಾರ್ಮಿಕರು ಕೂಡ ಇದ್ದಾರೆ. ಅವರ ಬಗ್ಗೆಯೂ ಪರಿಶೀಲನೆ ನಡೆಸಿ ಪರಿಹಾರ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಬೆಂಗಳೂರಿನ ಯಲಹಂಕ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳು ಜಲಾವೃತವಾಗಿವೆ. ರಕ್ಷಣಾ ಸಿಬ್ಬಂದಿ ದೋಣಿಗಳ ಸಹಾಯದಿಂದ ಜನರನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ.

ಡಾನಾ ಚಂಡಮಾರುತದ ಪ್ರಭಾವ

ಅಂಡಮಾನ್ ಬಳಿಯ ಸಮುದ್ರದಲ್ಲಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತವು ಬಂಗಾಳಕೊಲ್ಲಿಯತ್ತ ವೇಗವಾಗಿ ಚಲಿಸುತ್ತಿದೆ. ಚಂಡಮಾರುತವು ಅ. 24 ರ ಮಧ್ಯರಾತ್ರಿ ಅಥವಾ ಅ.25 ರ ಬೆಳಿಗ್ಗೆ ಒಡಿಶಾದ ಪುರಿ ಕರಾವಳಿಗೆ ಅಪ್ಪಳಿಸಲಿದೆ. ಇದರ ಪರಿಣಾಮವನ್ನು ಕರ್ನಾಟಕವೂ ಎದುರಿಸಲಿದೆ. ಚಂಡಮಾರುತ ಅಪ್ಪಳಿಸುವ ಮುನ್ನವೇ ಭಾರೀ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Read More
Next Story