ಬೆಂಗಳೂರು ಕೇಕ್‌ ಶೋದಲ್ಲಿ ಜೀವತಳೆದ ರತನ್ ಟಾಟಾ, ಎಸ್‌.ಎಂ. ಕೃಷ್ಣ
x
ಕೇಕ್​ನಲ್ಲಿ ಮೈದೆಳೆದ ರತನ್ ಟಾಟಾ, ಎಸ್​.ಎಂ. ಕಷ್ಣ

ಬೆಂಗಳೂರು ಕೇಕ್‌ ಶೋದಲ್ಲಿ ಜೀವತಳೆದ ರತನ್ ಟಾಟಾ, ಎಸ್‌.ಎಂ. ಕೃಷ್ಣ

ಬೆಂಗಳೂರಿನ ಕೇಕ್ ಶೋಗೆ ಈಗ ಸುವರ್ಣ ಸಂಭ್ರಮ. ಸೇಂಟ್ ಜೋಸೆಫ್ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕೇಕ್​ ಶೋವನ್ನು 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಸಲ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.


ಎಲ್ಲಿ ನೋಡಿದರೂ ಕೇಕ್ ಕಲಾಕೃತಿಗಳು, ಜೊತೆಗೆ ಕೇಕ್ ಪರಿಮಳ, ಬೆರಗಿನಿಂದ ನೋಡುತ್ತಿರುವ ಚಿಣ್ಣರು, ಕೇಕ್​ನಲ್ಲಿ ಅರಳಿರುವ ಕಲಾಕೃತಿಗಳನ್ನು ಕಣ್ಣುತುಂಬಿಕೊಳ್ಳುತ್ತಿರುವ ಕೇಕ್ ಪ್ರೀಯರು, ಮೊಬೈಲ್​ನಲ್ಲಿ ಕೇಕ್ ಕಲಾಕೃತಿಗಳನ್ನು ಸೆರೆಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿರುವ ಯುವಜನ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕೇಕ್ ಶೋಗೆ ಈಗ ಸುವರ್ಣ ಮಹೋತ್ಸವದ ಸಂಭ್ರಮ. ಇದುವರೆಗೆ ಯುಬಿ ಸಿಟಿ ಮುಂಭಾಗದ ಸೇಂಟ್ ಜೋಸೆಫ್ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕೇಕ್ ಶೋವನ್ನು 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಸಲ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಬಾರಿಯ ಕೇಕ್‌ ಶೋವನ್ನು 'ಎ ಸೆಲೆಬ್ರೇಷನ್‌ ಆಫ್‌ ಆರ್ಟ್‌' ಥೀಮ್‌ನಡಿ ಆಯೋಜಿಸಲಾಗಿದೆ. 20ಕ್ಕೂ ಹೆಚ್ಚು ಕೇಕ್‌ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ.

ಮನ ಸೆಳೆಯುತ್ತಿವೆ ರತನ್ ಟಾಟಾ, ಎಸ್ಎಂಕೆ ಕಲಾಕೃತಿಗಳು

ಇತ್ತೀಚೆಗೆ ನಿಧನ ಹೊಂದಿದ ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ದಿ. ರತನ್ ಟಾಟಾ ಹಾಗೂ ರಾಜಕಾರಣಿ, ದಿ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕಲಾಕೃತಿ ಇಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. 10 ದಿನಗಳ ಕಾಲ ಕೆಲಸ ಮಾಡಿ ರತನ್ ಟಾಟಾ ಅವರ ಕಲಾಕೃತಿ ರಚಿಸಲಾಗಿದೆ. ಕೇಕ್‌ ತಳ ಭಾಗದಲ್ಲಿ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಿಸಿಎಸ್, ಟೈಟಾನ್ ಸೇರಿದಂತೆ ಟಾಟಾ ಗ್ರೂಪ್​ನ ಕಂಪನಿಗಳನ್ನು ತೋರಿಸಲಾಗಿದೆ.

ಜೊತೆಗೆ ಕರ್ನಾಟಕದ ದಿ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ 280 ಕಿಲೋಗ್ರಾಮ್ ತೂಕದ ಕೇಕ್ ಕಲಾಕೃತಿ ತಯಾರಿಸಲಾಗಿದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಡುಗಳ್ಳ ವೀರಪ್ಪನ್ ಡಾ. ರಾಜಕುಮಾರ್ ಅವರನ್ನು ಅಪಹರಿಸಿದ ಸಂದರ್ಭದಲ್ಲಿ ಕೃಷ್ಣ ಅವರು ತೋರಿದ್ದ ಗಂಭೀರ ನಡತೆಯನ್ನುಕೇಕ್‌ಗಳು ಬಿಂಬಿಸಿವೆ.

ಎಸ್‌ಎಂ ಕೃಷ್ಣ ಅವರ ಕಲಾಕೃತಿ ಕೇಕ್​ನಲ್ಲಿ ಮಾಡಿರುವುದು ತುಂಬಾ ಖುಷಿಯ ವಿಚಾರ ಎಂದು ಕೇಕ್​ ಶೋ ನೋಡಲು ಬಂದಿದ್ದ ಬೆಂಗಳೂರಿನ ಇಂದಿರಾನಗರದ ನಿವಾಸಿ ಅದಿತಿ ಅಭಿಪ್ರಾಯಪಟ್ಟಿದ್ದಾರೆ.

ಜನವರಿ 1ರ ವರೆಗೆ ನಡೆಯಲಿದೆ ಕೇಕ್ ಶೋ

ಕಳೆದ ಡಿಸೆಂಬರ್ 13ರಿಂದ ಆರಂಭವಾಗಿರುವ ಕೇಕ್ ಶೋ ಹೊಸ ವರ್ಷ ಜನವರಿ 1ರಂದು ಮುಕ್ತಾಯವಾಗಲಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕೇಕ್ ಶೋ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿಯೊಂದು ಕೇಕ್ ಕಲಾಕೃತಿಯೂ ಕೂಡಾ ಅನನ್ಯವಾಗಿದ್ದು, ನೋಡುಗರನ್ನು ಕಲಾ ಲೋಕಕ್ಕೆ ಕರೆದೊಯ್ಯುತ್ತಿವೆ. ಪುಟಾಣಿ ರೈಲು, ಅಯೋಧ್ಯೆಯ ರಾಮ ಮಂದಿರ, ಮಧು ಬನಿ ವೆಡ್ಡಿಂಗ್ ಬ್ಲಿಸ್, ರಟಾಟೂಲ್ ಪಾಕಶಾಲೆ, ಡೈನೋಸಾರ್ ವರ್ಲ್ಡ್, ಕೆಂಪೇಗೌಡರ ಪ್ರತಿಮೆ ಹೀಗೆ ಹಲವು ವಿಶೇಷಗಳು ಈ ಬಾರಿಯ ಕೇಕ್ ಶೋನಲ್ಲಿ ಕಂಡು ಬರುತ್ತಿವೆ.

ಹರಿದು ಬರುತ್ತಿದೆ ಪ್ರವಾಸಿಗರ ದಂಡು
ಈ ಹಿಂದಿನ 49 ಕೇಕ್‌ ಪ್ರದರ್ಶನಗಳಲ್ಲಿ ಬರೋಬ್ಬರಿ 7.5 ಕೋಟಿಗೂ ಹೆಚ್ಚು ಜನರು ಭೇಟಿ ನೀಡಿ ವೀಕ್ಷಿಸಿದ್ದಾರೆ. ಅವರಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ವಿದೇಶಿ ಪ್ರವಾಸಿಗರಿದ್ದರು ಎನ್ನುತ್ತಾರೆ ಆಯೋಜಕರು.

ಇನ್​ಸ್ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್ಸ್ ಹಾಗೂ ಮೈಬೇಕ್ ಮಾರ್ಟ್ ಸಂಸ್ಥೆಗಳು ಜಂಟಿಯಾಗಿ ಕೇಕ್ ಶೋ ಆಯೋಜಿಸಿವೆ. 1974ರಲ್ಲಿ ಸಿ. ರಾಮಚಂದ್ರ ಅವರು ದೂರದೃಷ್ಟಿಯಿಂದ ಆರಂಭಿಸಿದ್ದ ಕೇಕ್ ಶೋಗೆ ಈಗ 50ನೇ ವರ್ಷಾಚರಣೆ ಸಂಭ್ರಮ.

Read More
Next Story