ರೇವಣ್ಣ ಬಂಧನ ಹಿಂದೆ ದೊಡ್ಡ ತಿಮಿಂಗಿಲ; ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ಆರೋಪ
x

ರೇವಣ್ಣ ಬಂಧನ ಹಿಂದೆ ದೊಡ್ಡ ತಿಮಿಂಗಿಲ; ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ಆರೋಪ


ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಇದೆಲ್ಲದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಹೆಸರಿಸದೆ ಪರೋಕ್ಷ ಆರೋಪ ಮಾಡಿದ್ದಾರೆ.

ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದಾರೆ ಎಂದರು. "ವಕೀಲರಾದ ದೇವರಾಜೇಗೌಡರನ್ನು ಈಗ ಒಂದು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿದ್ದು ಯಾಕೆ? ಒಂದು ತಿಂಗಳಿನಿಂದ ಏನೆಲ್ಲಾ ಬೆಳವಣಿಗೆ ಆಯಿತು? ಆಡಿಯೋ ಮೂಲಕ ಸಿಕ್ಕಿಬಿದ್ದ ದೊಡ್ಡ ತಿಮಿಂಗಲವನ್ನು ಬಿಟ್ಟು ದೇವರಾಜೇಗೌಡರನ್ನು ಬಂಧನ ಮಾಡಿದ್ದಾರೆ!," ಎಂದು ಕುಮಾರಸ್ವಾಮಿ ಟೀಕಿಸಿದರು.

"ವಿಡಿಯೋದಲ್ಲಿ ಬಂದಂತಹ ಮಹಿಳೆಯರ ಕುಟುಂಬಗಳ ಬಗ್ಗೆ ಸರಕಾರಕ್ಕೆ ಅನುಕಂಪ‌ ಎನ್ನುವುದು ಇದೆಯಾ? ಈ ಪ್ರಕರಣಕ್ಕೆ ಸಂಬಂಧಿಸಿ ನಾನು ಯಾರನ್ನೂ ವಹಿಸಿಕೊಳ್ಳುವ ಪ್ರಶ್ನೆ ಇಲ್ಲ. ಮಾಹಿತಿ ತಂತ್ರಜ್ಞಾನದ ಈ ಕಾಲದಲ್ಲಿ ಅಪರಾಧಿ ನಿರಪರಾಧಿ ಆಗುತ್ತಾನೆ. ಸರಕಾರಕ್ಕೆ ಬದ್ಧತೆ ಇದ್ದರೆ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಲಿ. ಅದನ್ನು ಬಿಟ್ಟು ರೇವಣ್ಣ ಸುತ್ತ ತನಿಖೆ ಗಿರಕಿ ಹೊಡೆಯುವ ಅಗತ್ಯವಿಲ್ಲ," ಎಂದು ಹೇಳಿದರು.

ಕುಮಾರಸ್ವಾಮಿ ಅವರು ರೇವಣ್ಣ ಕುಟುಂಬವನ್ನು ಮುಗಿಸಲು ನೋಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ನ್ಯಾಯದ ಪರ ಇದ್ದೇನೆ, ನೊಂದ ಮಹಿಳೆಯರ ಪರ ಇದ್ದೇನೆ ಎಂದು ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ನೊಂದ ಮಹಿಳೆಯರಿಗೆ ಹೆದರಿಸಿದ್ದು ಯಾರು?

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಓರ್ವ ನೊಂದ ಮಹಿಳೆ ದೂರು ಕೊಟ್ಟಿದ್ದಾರೆ. ಆ ಹೆಣ್ಣುಮಗಳಿಗೆ ಹೆದರಿಸಿ‌ ಅವರಿಂದ ದೂರು ಪಡೆಯಲು ಪ್ರಯತ್ನ ಮಾಡಿದ್ದಾರೆ. ಅವರಿಗೆ ಹೆದರಿಸಿ ಬೆದರಿಸಿದವರು ಯಾರು? ಮಫ್ತಿಯಲ್ಲಿ ಅವರ ಮನೆ ಬಳಿ ಹೋಗಿ ಹೆದರಿಸಿದ್ದು ಯಾರು? ಇದೆಲ್ಲಾ ಎಸ್ ಐಟಿಗೆ ಗೊತ್ತಾ? ಎಂದು ಮಾಜಿ ಮುಖ್ಯಮಂತ್ರಿಗಳು ಕೇಳಿದರು.

ಕೆಲವೇ ದಿನಗಳಲ್ಲಿ ಇದೆಲ್ಲಾ ಹೊರಗೆ ಬರಲಿದೆ. ಮಹಿಳೆಯರಿಗೆ ಬೆದರಿಸಿದ್ದು, ಧಮ್ಕಿ ಹಾಕಿದ್ದು ಎಲ್ಲವೂ ಆಚೆ ಬರಲಿದೆ. ನೀವು ಅದರ ಬಗ್ಗೆ ಏನು ಕ್ರಮ ತಗೊಂಡಿದ್ದೀರಿ ಗೃಹ ಸಚಿವರೇ? ಎಂದು ಡಾ.ಜಿ.ಪರಮೇಶ್ವರ ಅವರನ್ನು ನೇರವಾಗಿ ಪ್ರಶ್ನಿಸಿದರು ಕುಮಾರಸ್ವಾಮಿ ಅವರು.

ಪೆನ್ ಡ್ರೈವ್ ಹಂಚಿದವರು ಎಲ್ಲಿ? ಯಾಕೆ ಹಿಡಿದಿಲ್ಲ?

ಹಾಸನದಲ್ಲಿ ಪೆನ್ ಡ್ರೈವ್ ಗಳನ್ನು ಹಂಚಿರುವ ವ್ಯಕ್ತಿಗಳು ಎಲ್ಲಿ? ಎಫ್ ಐಆರ್ ದಾಖಲಾಗಿರುವ ಒಬ್ಬ ವ್ಯಕ್ತಿಯನ್ನೂ ಎಸ್ ಐಟಿ ಹಿಡಿಯಲಿಲ್ಲ. ವಿಡಿಯೋಗಳನ್ನು ಮೊದಲು ಕದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾದ ಕಾರು ಚಾಲಕನನ್ನು ಇದುವರೆಗೂ ತನಿಖಾ ತಂಡ ಬಂಧನ ಮಾಡಿಲ್ಲ ಯಾಕೆ? ಆದರೆ, ಖಾಸಗಿ ಚಾನಲ್ ನಲ್ಲಿ ಒಂದೂವರೆ ಗಂಟೆ ಕಾಲ ಕೂರಿಸಿಕೊಂಡು ಅವನನ್ನು ಸಂದರ್ಶನ ಮಾಡುತ್ತಾರೆ. ಎಸ್ ಐಟಿ ತಂಡಕ್ಕೆ ಸಿಗದ ಆ ವ್ಯಕ್ತಿ ಸುಲಭವಾಗಿ ಖಾಸಗಿ ಚಾನೆಲ್ ಗೆ ಸಿಗುತ್ತಾನೆ ಎಂದರೆ ಇಲ್ಲಿ ಏನ್ ನಡೆಯುತ್ತಿದೆ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನೆ ಮಾಡಿದರು.

ನವೀನ್ ಗೌಡ ಎನ್ನುವ ವ್ಯಕ್ತಿ ಎಲ್ಲಿ?

ಇನ್ನೇನು ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಹೊರಬರುತ್ತವೆ ಎಂದು ಫೇಸ್ ಬುಕ್ಕಿನಲ್ಲಿ ಸಮಯದ ಸಮೇತ ಪೋಸ್ಟ್ ಹಾಕಿದ್ದ ನವೀನ್ ಗೌಡ ಎನ್ನುವ ವ್ಯಕ್ತಿ ನಮ್ಮ ಪಕ್ಷದ ಶಾಸಕರಿಗೆ ಪೆನ್ ಡ್ರೈವ್ ಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. ಅವನು ಏನೆಲ್ಲಾ ಹೇಳಿದ್ದಾನೆ, ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲಾ ಪೋಸ್ಟ್ ಮಾಡಿದ್ದಾನೆ ಎನ್ನುವುದು ಎಸ್ ಐಟಿಗೆ ಗೊತ್ತಿಲ್ಲವೇ? ಇವನನ್ನು ಹಿಡಿದ್ರಾ? ಎಂದು ಮಾಜಿ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಪ್ರಶ್ನಿಸಿದರು.

ಬಿಜೆಪಿ ಪಕ್ಷದ ಮಾಜಿ ಶಾಸಕರೊಬ್ಬರ ಎಡಬಲದಲ್ಲಿ ಇದ್ದ ಇಬ್ಬರನ್ನು ಹಿಡಿಯಲಾಗಿದೆ ಮಾಧ್ಯಮಗಳಲ್ಲಿ ಗಮನಿಸಿದೆ. ಇನ್ನೊಂದು ವಾರದಲ್ಲಿ ಮುಖ್ಯವಾದವರನ್ನು ಹಿಡಿಯಲಾಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ. ಹಾಗಾದರೆ, ಎಸ್ ಐಟಿ ತನಿಖೆಯ ಎಲ್ಲಾ ಅಂಶಗಳು ಇವರಿಗೆ ಹೇಗೆ ಸೋರಿಕೆ ಆಗುತ್ತಿವೆ. ಇದಕ್ಕೆ ಸರಕಾರ ಉತ್ತರ ಕೊಡಬೇಕಿದೆ ಎಂದು ಅವರು ಒತ್ತಾಯಿಸಿದರು.

ಎಸ್ ಐಟಿ ಅಧಿಕಾರಿಗಳಿಗೆ ಕಿವಿಮಾತು

ನಾನು ಎಸ್ ಐಟಿ ಅಧಿಕಾರಿಗಳಿಗೆ ಒಂದು ಮಾತು ಹೇಳಲು ಇಚ್ಛಿಸುತ್ತೇನೆ. ತಮಗೂ ತಂದೆ-ತಾಯಿ ಜನ್ಮ ಕೊಟ್ಟಿದ್ದಾರೆ. ಅಕ್ಕ ತಂಗಿ ಎಲ್ಲರೂ ನಿಮಗೂ ಇರುತ್ತಾರೆ. ದಯಮಾಡಿ ಪ್ರಾಮಾಣಿಕವಾಗಿ ತನಿಖೆ ನಡೆಸಿ. ಚುನಾವಣೆ ಸಂದರ್ಭದಲ್ಲಿ ಪೆನ್ ಡ್ರೈವ್ ಹಂಚಿ ಅಶ್ಲೀಲ ದೃಶ್ಯಗಳ ಮೂಲಕ ಸಮಾಜದಲ್ಲಿ ಕೆಟ್ಟ ಪರಿಸ್ಥಿತಿಯನ್ನು ಸೃಷಿ ಮಾಡಿದರಲ್ಲ, ಅವರನ್ನು ಇಲ್ಲಿಯವರೆಗೆ ನೀವು ಮುಟ್ಟಿಲ್ಲ. ಘಟನೆಗೆ ಕಾರಣನಾದ ವ್ಯಕ್ತಿಯನ್ನೂ ಹಿಡಿಯಲಿಲ್ಲ. ಇದೆಲ್ಲವನ್ನೂ ಮಾಡಬೇಕಾದ್ದು ಸರ್ಕಾರದ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.

ಪಟಾಕಿ ಸಿಡಿಸಿ ಸಂಭ್ರಮಿಸುವ ಸಮಯ ಇದಲ್ಲ

ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣ ಕೂಡ ಆರೋಪ ಎದುರಿಸಬೇಕಾಯಿತು. ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೂ ಹೇಳಬಯಸುತ್ತೇನೆ. ಇದು ಪಟಾಕಿ ಸಿಡಿಸಿ ಸಂತೋಷಪಡುವ ಸಮಯ ಅಲ್ಲ. ಇಡೀ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾದಾಗ ಸಂಭ್ರಮಿಸಿ. ಈ ಘಟನೆ ರಾಜ್ಯವೇ ತಲೆ ತಗ್ಗಿಸುವಂತಹ ಘಟನೆ ಎಂದು ಮಾಜಿ ಮುಖ್ಯಮಂತ್ರಿ ಹೆ.ಡಿ.ಕುಮಾರಸ್ವಾಮಿ ಅವರು ಹೇಳಿದರು.

Read More
Next Story