
ʼರಾಜಕೀಯ ಯಾರಪ್ಪನ ಆಸ್ತಿಯಲ್ಲʼ; ಸಂಚಲನ ಸೃಷ್ಟಿಸಿದ ಸಿಎಂ ಮಾತುಕತೆ
ಶಾಸಕರೊಬ್ಬರ ಬಳಿ ರಾಜಕೀಯ ನಮ್ಮ ಅಪ್ಪನ ಆಸ್ತಿ ಅಲ್ಲ ಎಂದು ಹೇಳುವಷ್ಟು ದಡ್ಡರಲ್ಲ ಎಂಬ ಅಭಿಪ್ರಾಯ ಪಕ್ಷದೊಳಗೆ ಇದೆ. ಆದರೆ ಸಂದರ್ಭ, ಸ್ಥಳ, ಹಾಜರಿದ್ದವರನ್ನು ಗಮನಿಸಿಯೇ ಇಂತಹ ಹೇಳಿಕೆ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ನಡುವೆ ಮಂಗಳವಾರ ನಡೆದ ಮಾತುಕತೆಯ ಅಂಶಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ʼʼರಾಜಕೀಯ ನಮ್ಮ ಅಪ್ಪನ ಆಸ್ತಿನಾ, ಇದು ಶಾಶ್ವತ ಅಲ್ಲ” ಎಂಬ ಸಿಎಂ ಸ್ವಾಭಾವಿಕವಾಗಿ ಹೇಳಿದರೆ ಅಥವಾ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ ಪರೋಕ್ಷ ಸಂದೇಶವೋ ಎಂಬ ಪ್ರಶ್ನೆಗಳು ಮೂಡಿವೆ.
ಮಂಗಳವಾರ ವಿಧಾನಸೌಧದಿಂದ ಹೊರ ಬರುವ ವೇಳೆ ಸಿದ್ದರಾಮಯ್ಯ ಎದುರು ಬಂದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಪ್ರಸ್ತುತ ರಾಜ್ಯ ರಾಜಕೀಯ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆಗ ಇದ್ದಕ್ಕಿದ್ದಂತೆ, ಸಿಎಂ ಸಿದ್ದರಾಮಯ್ಯ ಅವರು “ರಾಜಕೀಯ ನಮ್ಮ ಅಪ್ಪನ ಆಸ್ತಿನಾ?, ಇದು ಶಾಶ್ವತ ಅಲ್ಲ” ಎಂದು ಹೇಳಿ ಅಲ್ಲಿಂದ ತೆರಳಿದರು.
ಬೇಳೂರು ಗೋಪಾಲಕೃಷ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡವರು. ಅವರ ಬಳಿ ಇಂತಹ ಹೇಳಿಕೆ ನೀಡುವಷ್ಟು ಸಿಎಂ ದಡ್ಡರಲ್ಲ. ಆದರೆ, ಬೇಳೂರು ಗೋಪಾಲಕೃಷ್ಣ ಅವರ ಜತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತರಾದ ಮದ್ದೂರು ಶಾಸಕ ಉದಯ್ ಕಡಲೂರ್ ಅವರನ್ನು ಗಮನಿಸಿಯೇ ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಏಕೆಂದರೆ, ಇತ್ತೀಚೆಗೆ ಮದ್ದೂರು ಶಾಸಕ ಉದಯ್ ಕಡಲೂರ್ ಸೇರಿದಂತೆ ಹಲವು ಶಾಸಕರು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಲು ದೆಹಲಿಗೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಡಿಕೆಶಿಗೆ ಟಾಂಗ್ ನೀಡಲು ಇಂತಹ ಹೇಳಿಕೆ ನೀಡಿರಬಹುದು ಎಂದು ಹೇಳಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಏನೇ ಹೇಳಿದರೂ ನೇರವಾಗಿ ಹೇಳುವ ನಾಯಕರಲ್ಲಿ ಒಬ್ಬರು. ಶಾಸಕರೊಬ್ಬರ ಬಳಿ ರಾಜಕೀಯ ನಮ್ಮ ಅಪ್ಪನ ಆಸ್ತಿ ಅಲ್ಲ ಎಂದು ಹೇಳುವಷ್ಟು ದಡ್ಡರಲ್ಲ ಎಂಬ ಅಭಿಪ್ರಾಯ ಪಕ್ಷದೊಳಗೆ ಇದೆ. ಆದರೆ ಸಂದರ್ಭ, ಸ್ಥಳ, ಹಾಜರಿದ್ದವರನ್ನು ಗಮನಿಸಿಯೇ ಇಂತಹ ಹೇಳಿಕೆ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

