ಗೇಮಿಂಗ್‌ನಲ್ಲಿ ಕಂಪೆನಿಗಳ ಕಳ್ಳಾಟ| ಇಡಿ ಕಾರ್ಯಾಚರಣೆಯಿಂದ ಅಕ್ರಮ ಬಯಲು
x

ಗೇಮಿಂಗ್‌ನಲ್ಲಿ ಕಂಪೆನಿಗಳ ಕಳ್ಳಾಟ| ಇಡಿ ಕಾರ್ಯಾಚರಣೆಯಿಂದ ಅಕ್ರಮ ಬಯಲು

ಇಡಿ ಅಧಿಕಾರಿಗಳು ಗೇಮಿಂಗ್ ಆ್ಯಪ್‌ಗಳ ಮೇಲೆ ದಾಳಿ ನಡೆಸಿ 518 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಬ್ಯಾಂಕ್‌ ಖಾತೆ, ಬಾಂಡ್‌ಗಳು ಮತ್ತು ಮ್ಯೂಚುವಲ್‌ ಫಂಡ್‌ಗಳನ್ನು ಜಪ್ತಿ ಮಾಡಿದ್ದಾರೆ.


Click the Play button to hear this message in audio format

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಗೇಮಿಂಗ್ ಆ್ಯಪ್‌ಗಳ ಮೇಲೆ ದಾಳಿ ನಡೆಸಿ 518 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಬ್ಯಾಂಕ್‌ ಖಾತೆ, ಬಾಂಡ್‌ಗಳು ಮತ್ತು ಮ್ಯೂಚುವಲ್‌ ಫಂಡ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು, ಗುರ್‌ಗಾವ್‌ನಲ್ಲಿನ ಗೇಮಿಂಗ್‌ ಆ್ಯಪ್ 'ವಿಂಜೋ'ಗೆ ಸಂಬಂಧಿಸಿದ ಕಚೇರಿಗಳ ಮೇಲೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಸುಮಾರು 505 ಕೋಟಿ ರೂ. ಮೌಲ್ಯದ ಬ್ಯಾಂಕ್ ಠೇವಣಿ, ಬಾಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಇಡಿ ವಶಪಡಿಸಿಕೊಂಡಿದೆ.

ವಿಂಜೋ ಗೇಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಗ್ರಾಹಕರಿಗೆ ಮೋಸ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ. ಗೇಮಿಂಗ್‌ ಹೆಸರಲ್ಲಿ ಕಂಪನಿಯು ರಹಸ್ಯವಾಗಿ ಅಲ್ಗಾರಿದಮ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಬಳಸಿ ಗ್ರಾಹಕರನ್ನು ಸೋಲಿಸುತ್ತಿತ್ತು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ವಿಂಜೋ ಯುಎಸ್ ಇಂಕ್ ಎಂಬ ನಕಲಿ ಕಂಪೆನಿಯನ್ನು ಸೃಷ್ಟಿಸಿ, ಭಾರತದಿಂದ ಸುಮಾರು 55 ಮಿಲಿಯನ್ ಡಾಲರ್ (ಅಂದಾಜು 489.90 ಕೋಟಿ ರೂ.) ಹಣವನ್ನು ಅಮೆರಿಕ ಮತ್ತು ಸಿಂಗಾಪುರಕ್ಕೆ ಅಕ್ರಮವಾಗಿ ವರ್ಗಾಯಿಸಲಾಗಿದೆ. ಅಲ್ಲದೇ, ಕೇಂದ್ರ ಸರ್ಕಾರವು ರಿಯಲ್ ಮನಿ ಗೇಮ್ಸ್ ಅನ್ನು ನಿಷೇಧಿಸಿದ ನಂತರವೂ ಕಂಪನಿಯು ಗ್ರಾಹಕರಿಗೆ ಹಿಂತಿರುಗಿಸಬೇಕಾದ 43 ಕೋಟಿ ರೂ. ಹಣವನ್ನು ತಡೆಹಿಡಿದಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಈ ನಡುವೆ ಮತ್ತೆರೆಡು ಕಂಪೆನಿಗಳು ಸಹ ಇದೇ ರೀತಿ ವಂಚನೆ ಮಾಡುತ್ತಿದ್ದ ಆರೋಪದ ಮೇರೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಭಾರೀ ವಂಚನೆ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಇಡಿ ಅಧಿಕಾರಿಗಳು 'ಪಾಕೆಟ್-52' (ನಿರ್ದೇಸ ನೆಟ್‌ವರ್ಕ್ಸ್ ಪ್ರೈ. ಲಿ) ಮತ್ತು 'ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್' ಕಚೇರಿಗಳ ಮೇಲೆ ದಾಳಿ ನಡೆಸಿದೆ. ಪಾಕೆಟ್-52 ಗೇಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಗೇಮ್‌ಗಳ ಫಲಿತಾಂಶವನ್ನು ಮೊದಲೇ ನಿರ್ಧರಿಸಲಾಗುತ್ತಿತ್ತು ಮತ್ತು ತಾಂತ್ರಿಕ ದೋಷಗಳನ್ನು ಸೃಷ್ಟಿಸಿ ಬಳಕೆದಾರರನ್ನು ಸೋಲಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ವ್ಯವಸ್ಥಿತ ವಂಚನೆಯಿಂದಾಗಿ ಒಬ್ಬ ಬಳಕೆದಾರರೇ ಬರೋಬ್ಬರಿ 3 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು 'ಪ್ರಮೋಷನ್ ಅಂಡ್ ರೆಗ್ಯುಲೇಷನ್ ಆಫ್ ಆನ್‌ಲೈನ್ ಗೇಮಿಂಗ್ ಆಕ್ಟ್ - 2025' ಅಡಿಯಲ್ಲಿ ರಿಯಲ್ ಮನಿ ಗೇಮ್‌ಗಳನ್ನು ನಿಷೇಧಿಸಿದ್ದರೂ, ಈ ಕಂಪನಿಗಳು ಗ್ರಾಹಕರ 30 ಕೋಟಿ ರೂ. ಅಧಿಕ ಹಣವನ್ನು ವಾಪಸ್ ನೀಡದೆ ತಮ್ಮ ಎಸ್ಕ್ರೊ ಖಾತೆಗಳಲ್ಲಿ ಇರಿಸಿಕೊಂಡಿವೆ. ಕಂಪನಿಯ ನಿರ್ದೇಶಕರ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸುಮಾರು 18.57 ಕೋಟಿ ರೂ. ಇರುವ 8 ಬ್ಯಾಂಕ್ ಖಾತೆಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ ಎಂದಿದ್ದಾರೆ.

Read More
Next Story