
ಅನಿಷ್ಠ ಪದ್ಧತಿ| ಬಾಣಂತಿಯರು, ಋತುಮತಿಯರಾದ ಯುವತಿಯರಿಗೆ ಮನೆಯಿಂದ ಬಹಿಷ್ಕಾರ!
ಇನ್ನೂ ಇಂತಹ ಕಟ್ಟುಪಾಡುಗಳು, ಸಾಮಾಜಿಕ ಪಿಡುಗುಗಳು ನಮ್ಮ ಮಧ್ಯೆಯೇ ಕಾಣಸಿಗುತ್ತವೆ. ತುಮಕೂರು ಜಿಲ್ಲೆಯ ಬಿಸಡಿಹಳ್ಳಿಯ ಈ ಪಿಡುಗು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ! ಆಗ ತಾನೆ ತಾಯಿಯರಾದ ಬಾಣಂಇಯರು ಮತ್ತು ಋತುಮತಿಯಾದ ಮಹಿಳೆಯರನ್ನು ಮನೆಯಿಂದ ನಹಿಷ್ಕರಿಸಿ ಹೊರಗಿಡುವುದು ಮತ್ತು ಪ್ರತ್ಯೇಕ ಗುಡಿಸಲುಗಳಲ್ಲಿ ಇರುವಂತೆ ಮಾಡುವ ಅನಿಷ್ಠ ಪದ್ಧತಿ ಇನ್ನೂ ಜಾರಿಯಲ್ಲಿದೆ.
ಈ ಅನಿಷ್ಠ ಪಿಡುಗಿನ ಬಗ್ಗೆ ಈಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ೦ ಕಣ್ತೆರೆದಿದೆ. ಅಮಾಯಕ ಮಹಿಳೆಯರು ಮತ್ತು ಅವರ ಶಿಶುಗಳ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಆಯೋಗ ಕಳಕಳಿ ವ್ಯಕ್ತಪಡಿಸಿದ್ದು, ಕರ್ನಾಟಕ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ತುಮಕೂರಿನ ಬಿಸಡಿಹಳ್ಳಿ ಪ್ರದೇಶದಲ್ಲಿ ನವ ಜಾತ ಶಿಶುಗಳ ತಾಯಂದಿರು ಮತ್ತು ಋತುಮತಿಯಾದ ಮಹಿಳೆಯರಿಗೆ ಮತ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ 19 ವರ್ಷದ ಮಹಿಳೆಯನ್ನು ಮನೆಗಳಿಂದ ಹೊರಗೆ ಹಾಕಿ ಪ್ರತ್ಯೇಕ ಗುಡಿಸಲುಗಳಲ್ಲಿ ವಾಸವಿರುವಂತೆ ಮಾಡುವ ಘಟನೆ ನಡೆದಿತ್ತು. ಆತಂಕಕಾರಿ ಮತ್ತು ಅಮಾನವೀಯ ವಿಷಯವೆಂದರೆ ಆ ಗುಡಿಸಲುಗಳಲ್ಲಿ ಮಲಗಲು ಹಾಸಿಗೆ ಅಥವಾ ಶೌಚಾಲಯ ಇರಲಿಲ್ಲ ಎಂಬುದನ್ನು ಎನ್‌ಎಚ್‌ಆರ್ ಗಮನಿಸಿದೆ.
"ಈ ಅಭ್ಯಾಸವು ಹಲವಾರು ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕರ್ನಾಟಕದಲ್ಲಿ ಕಾಡು ಗೊಲ್ಲ ಸಮುದಾಯಕ್ಕೆ ಸೇರಿದ ಜನರಲ್ಲಿ ಇಂದಿಗೂ ಮುಂದುವರೆದಿದೆ. ಈ ವಾಸ್ತವ್ಯದ ಸಮಯದಲ್ಲಿ, ಮಹಿಳೆಯರು ಮತ್ತು ನವಜಾತ ಶಿಶುಗಳು ಪ್ರಕೃತಿಯ ವೈಪರೀತ್ಯಗಳಿಗೆ ಒಡ್ಡಿಕೊಳ್ಳುತ್ತಾರೆ. ಈ ಗುಡಿಸಲುಗಳಲ್ಲಿ ಬೀದಿ ನಾಯಿಗಳು, ಚೇಳುಗಳು ಮತ್ತು ಹಾವುಗಳಿಂದ ಉಂಟಾಗುವ ಗಂಭೀರ ಅಪಾಯಗಳು ಮತ್ತು ಅಶುಚಿತ್ವಕ್ಕೆ ಬಾಣಂತಿಯರು, ಅವರ ಶಿಶುಗಳು ತಮ್ಮನ್ನು ತಾವು ಒಡ್ಡಿಕೊಂಡು ತೀವ್ರ ಕಷ್ಟ ಎದುರಿಸುತ್ತಾರೆ," ಎಂದು ಅದು ಹೇಳಿದೆ.
ತುಮಕೂರಿನ ಈ ಘಟನೆ ಬಗ್ಗೆ ನಾಲ್ಕು ವಾರಗಳಲ್ಲಿ ವಿವರವಾದ ವರದಿಯನ್ನು ನೀಡುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ. ಕರ್ನಾಟಕದಲ್ಲಿ ಇಂತಹ "ಕೆಟ್ಟ ಅಭ್ಯಾಸಗಳು ಇನ್ನೂ ಪ್ರಚಲಿತದಲ್ಲಿರುವ" ಸ್ಥಳಗಳನ್ನು ಒಳಗೊಂಡಿರುವ ಅಂಕಿ ಅಂಶ ಒಳಗೊಂಡಿರಬೇಕು ಮತ್ತು ಸರ್ಕಾರಿ ಅಧಿಕಾರಿಗಳು ತೆಗೆದುಕೊಂಡ ಅಥವಾ ಪ್ರಸ್ತಾಪಿಸಿದ ಕ್ರಮಗಳ ವಿವರಗಳನ್ನು ಒಳಗೊಂಡಿರಬೇಕು ಎಂದು ಅದು ಸೂಚಿಸಿದೆ.
2013ರಲ್ಲಿ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರ ಬಗ್ಗೆ ಇದೇ ರೀತಿಯ ದೂರು ದಾಖಲಿಸಲಾಗಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ನೋಟಿಸ್ ಜಾರಿ ಮಾಡಿದೆ. ಮಹಾರಾಷ್ಟ್ರದ ರಾಜ್ಯ ಸರ್ಕಾರವು ಈ ಅಮಾನವೀಯ ಪದ್ಧತಿಯಾದ 'ಗಾಕೋರ್/ಕುರ್ಮಾ'ವನ್ನು ನಿರ್ಮೂಲನೆ ಮಾಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅದರ ವರದಿ ಸಲ್ಲಿಸಿದೆ.