ತಮ್ಮನ ಸೋಲಿಗೆ ಬಿಜೆಪಿ ಕಾರಣವಲ್ಲ, ಡಾ. ಮಂಜುನಾಥ್‌ ವ್ಯಕ್ತಿತ್ವ ಕಾರಣ: ಡಿ.ಕೆ ಶಿವಕುಮಾರ್‌ ವಿಶ್ಲೇಷಣೆ
x

ತಮ್ಮನ ಸೋಲಿಗೆ ಬಿಜೆಪಿ ಕಾರಣವಲ್ಲ, ಡಾ. ಮಂಜುನಾಥ್‌ ವ್ಯಕ್ತಿತ್ವ ಕಾರಣ: ಡಿ.ಕೆ ಶಿವಕುಮಾರ್‌ ವಿಶ್ಲೇಷಣೆ


ರಾಜ್ಯದಲ್ಲಿ ಕಾಂಗ್ರೆಸ್‌ ಒಂದು ಸ್ಥಾನದಿಂದ 9 ಸ್ಥಾನಗಳಿಗೆ ಏರಿರುವುದಕ್ಕೆ ಸಂತಸವಾಗಿದ್ದರೂ, ತನ್ನ ಸೋದರನ ಸೋಲಿನ ಅಂತರ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಅನಿರೀಕ್ಷಿತವಾಗಿದೆ. ತಮ್ಮ ಡಿ.ಕೆ. ಸುರೇಶ್‌ ಸೋಲಿಗೆ ಪ್ರಧಾನಿ ಮೋದಿ ಅಲೆ ಕಾರಣವಲ್ಲ, ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌. ಮಂಜುನಾಥ್‌ ಅವರ ವರ್ಚಸ್ಸು ಕಾರಣ ಎಂದು ಅವರು ವಿಶ್ಲೇಷಿಸದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ":ನನ್ನ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅವರ ಗೆಲುವಿಗೆ ವೈಯಕ್ತಿಕವಾಗಿ ಅವರಿಗೆ ಅಭಿನಂದಿಸುತ್ತೇನೆ. ಅವರ ಪಕ್ಷ ಗೆಲ್ಲುವುದಕ್ಕಿಂತ ಇಲ್ಲಿ ವ್ಯಕ್ತಿ ಗೆದ್ದಿದ್ದಾರೆ. ಬಹಳ ಲೆಕ್ಕಾಚಾರದಲ್ಲಿ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದರು. ಇಷ್ಟು ದೊಡ್ಡ ಅಂತರದ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ನನ್ನ ತಮ್ಮ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಜನ ಅವರನ್ನು ಗೆಲ್ಲಿಸಿದ್ದಾರೆ," ಎಂದು ಅಭಿಪ್ರಾಯಪಟ್ಟಿದ್ದಾರೆ.

"ನನ್ನ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ಪಡೆಯುವ ನಿರೀಕ್ಷೆ ಇತ್ತು. ಆದರೆ ಇಷ್ಟೊಂದು ಅಂತರದ ಸೋಲುವ ನಿರೀಕ್ಷೆ ಮಾಡಿರಲಿಲ್ಲ. ಈ ಫಲಿತಾಂಶದ ಮೂಲಕ ಜನ ಕೊಟ್ಟಿರುವ ಸಂದೇಶ ಅರಿಯುತ್ತೇನೆ. ಪ್ರಜ್ಞಾವಂತ ಮತದಾರರ ತೀರ್ಪು ಪ್ರಶ್ನಿಸುವುದಿಲ್ಲ. ನಮಗೆ ಇನ್ನೂ ಹೆಚ್ಚಿನ ಸ್ಥಾನ ಬರಬೇಕಾಗಿತ್ತು. ಯಾಕೆ ಕಡಿಮೆ ಬಂದಿದೆ ಎಂದು ಚಿಂತನೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿನ ಸೀಟು ನಿರೀಕ್ಷೆ ಮಾಡಿದ್ದೆವು. ಜನ ಯಾವ ವಿಚಾರದಲ್ಲಿ ನಮ್ಮನ್ನು ಒಪ್ಪಿಲ್ಲ ಎಂಬುದನ್ನು ಪರಿಶೀಲಿಸಿ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ," ಎಂದು ಡಿ,ಕೆ. ಶಿವಕುಮಾರ್‌ ಹೇಳಿದ್ದಾರೆ.

ಮೋದಿ ಅವರ ಜನಪ್ರಿಯತೆ ಕುಗ್ಗಿರುವುದು ಸಾಬೀತಾಗಿದೆ. ಹಿಂದಿ ಭಾಷಿಗರ ಭಾಗದಲ್ಲೂ ಕುಗ್ಗಿರುವುದು ಸ್ಪಷ್ಟವಾಗಿದೆ. ಬಿಜೆಪಿಗೆ ಸಂಪೂರ್ಣ ಬಹುಮತ ಇಲ್ಲ ಎಂಬುದನ್ನು ಎಲ್ಲರೂ ಒಪ್ಪಬೇಕು. ನನ್ನ ಕ್ಷೇತ್ರದಲ್ಲಿ ನನಗೆ ಹಿನ್ನಡೆಯಾಗಿದ್ದಂತೆ ಅಯೋಧ್ಯೆಯಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಳೆದ ಬಾರಿ 303 ಕ್ಷೇತ್ರ ಗೆದ್ದಿದ್ದ ಬಿಜೆಪಿ 243 ಸ್ಥಾನಕ್ಕೆ ಕುಸಿದಿದೆ. ಬಿಜೆಪಿ ನಿಚ್ಚಳ ಬಹುಮತ ಪಡೆದಿಲ್ಲ. ಎನ್ ಡಿ ಎ ಕೂಡ ಹೇಳಿಕೊಂಡಿದ್ದ ಸಾಧನೆ ಮಾಡಿಲ್ಲ. ಬೇರೆ ಪಕ್ಷಗಳ ಮೇಲೆ ಅವಲಂಬಿತವಾಗಿವೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ ಅಸಾಧ್ಯ

10 ವರ್ಷಗಳ ನಂತರ ಜನರು ಮತ್ತೆ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂಬುದನ್ನು ಈ ಚುನಾವಣೆ ಮನದಟ್ಟು ಮಾಡಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಿರಂತರ ಪರಿಶ್ರಮ ಹೋರಾಟದಿಂದ ಪಕ್ಷ ಚೇತರಿಕೆ ಕಂಡಿದೆ. ಪ್ರಿಯಾಂಕಾ ಗಾಂಧಿ ಅವರ ಕೊಡುಗೆ ಸಾಕಷ್ಟು ಇದೆ. ಕಾಂಗ್ರೆಸ್ ಪಕ್ಷದ ಮತ ಪ್ರಮಾಣ ಕೂಡ ಹೆಚ್ಚಾಗಿದೆ. ಹಳೇ ಮೈಸೂರು ಭಾಗದಲ್ಲಿ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಲೋಕಸಭೆ ಚುನಾವಣೆ ಮತ ಪ್ರಮಾಣ ಕುಸಿದಿದ್ದು, ಮೊದಲಿನಿಂದಲೂ ಈ ರೀತಿ ವ್ಯತ್ಯಾಸ ಕಂಡು ಬಂದಿದೆ. ಎಸ್ ಎಂ ಕೃಷ್ಣ ಅವರ ಸರಕಾರ ಇದ್ದಾಗಲೂ ಹೀಗೆ ಆಗಿತ್ತು. ಅದು ಈ ರಾಜ್ಯದ ರಾಜಕೀಯ ಗುಣ. ಈ ಬಾರಿ ಬದಲಾಗಬಹುದು ಅಂದುಕೊಂಡಿದ್ದೆವು. ಆದರೆ ಆಗಲಿಲ್ಲ ಎಂದರು.

ಗ್ಯಾರಂಟಿ ಯೋಜನೆ ಕೈಹಿಡಿಯಲಿಲ್ಲವೇ, ಈ ಫಲಿತಾಂಶದಿಂದ ತೃಪ್ತಿಯಾಗಿದ್ದೀರಾ ಎಂದು ಕೇಳಿದಾಗ, “ಈಗಲೇ ಆ ರೀತಿ ಹೇಳಲು ಸಾಧ್ಯವಿಲ್ಲ. ಕನಿಷ್ಠ 14 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ ಎಂದು ಭಾವಿಸಿದ್ದೆವು. ಬೆಂಗಳೂರು, ಮುಂಬೈ ಕರ್ನಾಟಕ ಸೇರಿದಂತೆ ಇನ್ನು ಕೆಲವು ಕಡೆ ನಮಗೆ ನಿರೀಕ್ಷಿತ ಮಟ್ಟದ ಫಲಿತಾಂಶ ಬಂದಿಲ್ಲ. ಯಾವ ವರ್ಗ ಯಾಕೆ ನಮ್ಮಿಂದ ದೂರವಾಗಿದೆ ಎಂದು ಪರಿಶೀಲನೆ ಮಾಡುತ್ತೇವೆ. ಹೀಗಾಗಿ ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ಕೈ ಹಿಡಿದಿಲ್ಲ ಎಂದು ಹೇಳಲು ಸಾಧ್ಯವಿಲ್ಲ” ಎಂದರು.

ಕೇಂದ್ರದಲ್ಲಿ ಅತಂತ್ರದ ಪರಿಸ್ಥಿತಿ ಬಗ್ಗೆ ಕೇಳಿದಾಗ, “ಬಿಜೆಪಿಗೆ ನಿರೀಕ್ಷಿತ ಸಂಖ್ಯಾಬಲ ಸಿಕ್ಕಿಲ್ಲ. ಅವರು ಈ ಸೋಲನ್ನು ಸ್ವೀಕರಿಸಬೇಕು. ಮಹಾರಾಷ್ಟ್ರದಲ್ಲಿ ಅವರು ಮಾಡಿದ ಕುತಂತ್ರವನ್ನು ಜನ ಒಪ್ಪಿಲ್ಲ. ಉತ್ತರ ಪ್ರದೇಶದಲ್ಲೂ ರಾಮಮಂದಿರ, ಮೋದಿ ಗಾಳಿ ಇಲ್ಲ. ಭಾವನೆಗಿಂತ ಬದುಕು ಈ ಚುನಾವಣೆಯಲ್ಲಿ ಗೆದ್ದಿದೆ. ನಮ್ಮ ನಾಯಕರು ಸಭೆ ಮಾಡುತ್ತಿದ್ದಾರೆ. ಭಾರತೀಯ ರಾಜಕಾರಣದಲ್ಲಿ ಯಾವಾಗ ಏನುಬೇಕಾದರೂ ನಡೆಯಬಹುದು” ಎಂದರು.

Read More
Next Story