ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆ ಎಂಇಎ ಅಂಗಳದಲ್ಲಿ
x

ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆ ಎಂಇಎ ಅಂಗಳದಲ್ಲಿ

ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ (ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌) ರದ್ದು ಮಾಡಲು ಬೆಂಗಳೂರಿನ ಹೆಚ್ಚುವರಿ ಮೆಟ್ರೋಪಾಲಿಟನ್‌ ನ್ಯಾಯಾಲಯ ಅನುಮತಿ ನೀಡಿರುವುದರಿಂದ ಆ ಪ್ರಕ್ರಿಯೆ ಸುಲಭವಾಗಿದೆ.ಹಾಗಾಗಿ ಈಗ ಆತನ ಪಾಸ್‌ಪೋರ್ಟ್‌ ರದ್ದತಿ ಈಗ ಕೇಂದ್ರದ ವಿದೇಶಾಂಗ ವ್ಯವಹಾರ ಸಚಿವಾಲಯದ (ಎಂಇಎ) ಅಂಗಳದಲ್ಲಿದ್ದು, ಯಾವುದೇ ಕ್ಷಣದಲ್ಲಾಗುವ ನಿರೀಕ್ಷೆ ಎಸ್‌ಐಟಿಗಿದೆ.


ಲೈಂಗಿಕ ಹಗರಣದಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ತಾಂತ್ರಿಕ ಪ್ರಕ್ರಿಯೆ ಆರಂಭಿಸಿದೆ. ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸುವುದು, ಘೋಷಿತ ಅಪರಾಧಿ ಎಂದು ದಾಖಲಿಸುವುದು ಮತ್ತು ಸಿಬಿಐನ ಇಂಟರ್‌ಪೋಲ್ ವಿಭಾಗದ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವುದು ಮತ್ತು ಆ ಮೂಲಕ ಪ್ರಜ್ವಲ್‌ ಸುತ್ತ ಕಾನೂನು ಕುಣಿಕೆ ಹೆಣೆಯುವುದು ಎಸ್‌ಐಟಿ ಉದ್ದೇಶವಾಗಿದೆ.

ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ (ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌) ರದ್ದು ಮಾಡಲು ಬೆಂಗಳೂರಿನ ಹೆಚ್ಚುವರಿ ಮೆಟ್ರೋಪಾಲಿಟನ್‌ ನ್ಯಾಯಾಲಯ ಅನುಮತಿ ನೀಡಿರುವುದರಿಂದ ಆ ಪ್ರಕ್ರಿಯೆ ಸುಲಭವಾಗಿದೆ.ಹಾಗಾಗಿ ಈಗ ಆತನ ಪಾಸ್‌ಪೋರ್ಟ್‌ ರದ್ದತಿ ಈಗ ಕೇಂದ್ರದ ವಿದೇಶಾಂಗ ವ್ಯವಹಾರ ಸಚಿವಾಲಯದ (ಎಂಇಎ) ಅಂಗಳದಲ್ಲಿದ್ದು, ಯಾವುದೇ ಕ್ಷಣದಲ್ಲಾಗುವ ನಿರೀಕ್ಷೆ ಎಸ್‌ಐಟಿಗಿದೆ.

ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಾತ್ರ ಹಿಂಪಡೆಯಬಹುದು ಎಂದು ಪಾಸ್‌ಪೋರ್ಟ್‌ ನಿಯಮಾವಳಿ ಇರುವುದರಿಂದ ಹಾಗೂ ಈಗ ನ್ಯಾಯಾಲಯ ಪ್ರಜ್ವಲ್‌ ರೇವಣ್ಣ ಬಂಧನ ವಾರಂಟ್‌ ಜತೆ ಪಾಸ್‌ಪೋರ್ಟ್‌ ರದ್ದತಿ ಸಂಬಂಧ ಅನುಮತಿ ನೀಡಿದೆ ಎನ್ನಲಾಗಿದೆ. ಎಸ್‌ಐಟಿ ನ್ಯಾಯಾಲಯ ದಾಖಲೆಗಳ ಸಹಿತ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಎರಡು ಅಥವಾ ಮೂರು ದಿನಗಳಲ್ಲಿ ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಎಂಇಎ ರದ್ದುಗೊಳಿಸದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಮತ್ತು ರಾಜತಾಂತ್ರಿಕ ಮತ್ತು ಪೊಲೀಸ್ ಚಾನೆಲ್‌ಗಳನ್ನು ಬಳಸಿಕೊಂಡು ಆತ ಭಾರತಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದಾಗ್ಯೂ, ರಾಜತಾಂತ್ರಿಕ ಪಾಸ್‌ಪೋರ್ಟ್‌ನ ರದ್ದತಿಗೆ 1967 ರ ಪಾಸ್‌ಪೋರ್ಟ್ ಕಾಯಿದೆಯ ಪ್ರಕಾರ ನ್ಯಾಯಾಲಯದ ನಿರ್ದೇಶನದ ಅಗತ್ಯವಿತ್ತು,ಈಗ ನ್ಯಾಯಾಲಯದ ಅನುಮತಿ ದೊರೆತಿದ್ದು, ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು "ದ ಫೆಡರಲ್‌ ಕರ್ನಾಟಕ"ಕ್ಕೆ ತಿಳಿಸಿದರು.

ಲೋಕಸಭಾ ಚುನಾವಣೆ ನಡೆದು ಮುಂದಿನ ಸರ್ಕಾರ ರಚನೆಯಾಗುವುದರಿಂದ ಪ್ರಜ್ವಲ್ ರೇವಣ್ಣ ಅವರ ಐದು ವರ್ಷಗಳ ಸಂಸದರ ಅವಧಿ ಮುಗಿಯುವ ಜೂನ್ 4 ರವರೆಗೆ ಎಸ್‌ಐಟಿ ಕಾಯಬೇಕಾಗುತ್ತದೆ. ಪ್ರಜ್ವಲ್ ರೇವಣ್ಣ ಅವರು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿದ್ದು, ಅವರು ಗೆದ್ದರೆ ಮಾತ್ರ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ನವೀಕರಿಸಬೇಕಾಗುತ್ತದೆ. ಅವರ ಪ್ರಸ್ತುತ ರಾಜತಾಂತ್ರಿಕ ಪಾಸ್‌ಪೋರ್ಟ್ ಜೂನ್ 4 ರಂದು ಮುಕ್ತಾಯಗೊಳ್ಳುತ್ತದೆ.

ಒಮ್ಮೆ ಅವರ ಪಾಸ್‌ಪೋರ್ಟ್ ನವೀಕರಣಗೊಳ್ಳದಿದ್ದರೆ ಪ್ರಜ್ವಲ್ ಯಾವ ದೇಶದಲ್ಲಿದ್ದರೂ ಆ ದೇಶದಲ್ಲಿ ಅಕ್ರಮ ವಾಸ್ತವ್ಯ ಕಾರಣಕ್ಕೆ ಅವರು ಸಂಬಂಧಪಟ್ಟ ದೇಶದಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ಕಾನೂನು ಪ್ರಕ್ರಿಯೆಗಳ ಮೂಲಕ ಭಾರತಕ್ಕೆ ಗಡೀಪಾರು ಮಾಡಬಹುದು.

ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ಜರ್ಮನಿ (ಪ್ರಜ್ವಲ್ ಆಶ್ರಯ ಪಡೆದಿರುವ) ಸೇರಿದಂತೆ 34 ದೇಶಗಳೊಂದಿಗೆ ಭಾರತವು ಕಾರ್ಯಾಚರಣೆಯ ವೀಸಾ ವಿನಾಯಿತಿ ಒಪ್ಪಂದಗಳನ್ನು ಹೊಂದಿದೆ. ಪಾಸ್‌ಪೋರ್ಟ್ ಕಾಯಿದೆಯು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರು 90 ದಿನಗಳವರೆಗೆ ವೀಸಾ ಇಲ್ಲದೆ ಈ ದೇಶಗಳಿಗೆ ಭೇಟಿ ನೀಡಲು ಅವಕಾಶವಿದೆ. ಆದಾಗ್ಯೂ, ಪ್ರಜ್ವಲ್ ಅವರ ಸಂಸದರ ಅವಧಿಯು ಜೂನ್ 4 ರಂದು ಕೊನೆಗೊಳ್ಳುತ್ತದೆ, ಆದ್ದರಿಂದ ಅವರು ಗಡೀಪಾರು ಮಾಡುವ ಮೂಲಕ ಅಥವಾ ಸ್ವಯಂಪ್ರೇರಣೆಯಿಂದ ಭಾರತಕ್ಕೆ ಮರಳಬೇಕಾಗುತ್ತದೆ ಅಥವಾ ವಿದೇಶದಲ್ಲೇ ತಲೆಮರೆಸಿಕೊಳ್ಳುವ ಸಾಧ್ಯತೆಯೂ ಇದೆ.

ಘೋಷಿತ ಅಪರಾಧಿ:

ಪ್ರಜ್ವಲ್ ರೇವಣ್ಣ ಅವರು ಕಾನೂನನ್ನು ಎದುರಿಸಲು ಭಾರತಕ್ಕೆ ಮರಳಲು ವಿಫಲರಾದರೆ ಮತ್ತು ತಲೆಮರೆಸಿಕೊಂಡಿರಲು ಪ್ರಯತ್ನಿಸಿದರೆ, ಸ್ಥಳೀಯ ನ್ಯಾಯಾಲಯವು ಅವರನ್ನು "ಘೋಷಿತ ಅಪರಾಧಿ" ಎಂದು ಘೋಷಿಸಬಹುದು. ಪೊಲೀಸರು ಆತನನ್ನು ʼತಲೆಮರೆಸಿಕೊಂಡಿದ್ದಾನೆʼ ಎಂದು ಎಂದು ಹೆಸರಿಸಿ ಚಾರ್ಜ್ ಶೀಟ್ ಸಲ್ಲಿಸಿದರೆ, ನ್ಯಾಯಾಲಯವು ಆತನನ್ನು ಅಪರಾಧಿ ಹಾಗೂ ʼವಾಂಟೆಡ್ʼ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸವುದನ್ನು ಅಧಿಕೃತಗೊಳಿಸಬಹುದು. ಈ ನೋಟಿಸ್ ಅನ್ನು ಸಿಬಿಐನ ಇಂಟರ್‌ಪೋಲ್ ವಿಭಾಗಕ್ಕೆ ಹಸ್ತಾಂತರಿಸಬಹುದು, ನಂತರ ಅವರು 196 ಸದಸ್ಯ ರಾಷ್ಟ್ರಗಳಲ್ಲಿ ಆರೋಪಿಗಳನ್ನು ಬಂಧಿಸಲು ರೆಡ್ ಕಾರ್ನರ್ ನೋಟಿಸ್ ಅನ್ನು ಹೊರಡಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜ್ವಲ್ ಎಲ್ಲಿ?:

ಮೂಲಗಳ ಪ್ರಕಾರ, ಪ್ರಜ್ವಲ್ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಜರ್ಮನಿ, ಆಸ್ಟ್ರಿಯಾ, ಇಂಗ್ಲೆಂಡ್, ಹಂಗೇರಿ ಮತ್ತು ದುಬೈ ಸೇರಿದಂತೆ ದೇಶಗಳನ್ನು ಸುತ್ತುತ್ತಿದ್ದಾರೆ. ಅವರು ಮೇ 7 ಮತ್ತು ಮೇ 15 ರಂದು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವ ಮೂಲಕ ಬೆಂಗಳೂರಿಗೆ ಪ್ರಯಾಣಿಸಲು ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ, ಆದರೆ ಎರಡೂ ಬಾರಿ ರದ್ದುಗೊಳಿಸಲಾಗಿದೆ. ಇಂಟರ್‌ಪೋಲ್‌ನ ವ್ಯಾಪ್ತಿಗೆ ಒಳಪಡುವ 196 ದೇಶಗಳಲ್ಲಿ ಪ್ರಜ್ವಲ್ ರೇವಣ್ಣ ಅವರ ಸ್ಥಳಗಳನ್ನು ಪತ್ತೆಹಚ್ಚಲು ಎಸ್‌ಐಟಿ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವಲ್ಲಿ ಯಶಸ್ವಿಯಾಗಿರುವುದರಿಂದ ಅವರು ಈಗಾಗಲೇ ಇಂಟರ್‌ಪೋಲ್‌ನ ರಾಡಾರ್‌ನಲ್ಲಿದ್ದಾರೆ. ಒಮ್ಮೆ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಂಡರೆ, ಅವರು ಪತ್ತೆಯಾದ ದೇಶದಲ್ಲಿ ಅವರನ್ನು ಬಂಧಿಸಬಹುದು.

ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಗೃಹ ಇಲಾಖೆಯು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ಪತ್ರ ಬರೆದಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಈ ಕ್ರಮವು ನ್ಯಾಯಾಲಯವು ಅವರ ವಿರುದ್ಧ ಹೊರಡಿಸಿದ ಬಂಧನ ವಾರಂಟ್ ಅನ್ನು ಆಧರಿಸಿದೆ. 'ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದ್ದು, ಅದರ ಆಧಾರದ ಮೇಲೆ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಪತ್ರ ಕಳುಹಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

ಎಚ್‌ಡಿಕೆ ಮನವಿ

ಏತನ್ಮಧ್ಯೆ, ಎಚ್‌ಡಿ ಕುಮಾರಸ್ವಾಮಿ ಸೋಮವಾರ, ಎಸ್‌ಐಟಿಯ ವಿಚಾರಣೆ ಎದುರಿಸಲು ಪ್ರಜ್ವಲ್ ಬೆಂಗಳೂರಿಗೆ ಹಿಂತಿರುಗುವಂತೆ ಸಾರ್ವಜನಿಕವಾಗಿ ವಿನಂತಿಸಿದ್ದಾರೆ. ಮಂಗಳವಾರವೂ ಪ್ರಜ್ವಲ್ ಭಾರತಕ್ಕೆ ಮರಳುವಂತೆ ತಮ್ಮ ಮನವಿಯನ್ನು ಪುನರುಚ್ಚರಿಸಿದರು. 'ನಾನು ಈಗಾಗಲೇ ಪ್ರಜ್ವಲ್‌ಗೆ ಹಿಂತಿರುಗುವಂತೆ ಕೇಳಿದ್ದೇನೆ. ಎಲ್ಲೇ ಇದ್ದರೂ ಎಸ್‌ಐಟಿ ಮುಂದೆ ಹಾಜರಾಗುವಂತೆ ಸಂದೇಶ ರವಾನಿಸಿದ್ದೇನೆ. ನಾನು ಪ್ರಜ್ವಲ್ ಜೊತೆ ನೇರ ಸಂಪರ್ಕದಲ್ಲಿಲ್ಲದ ಕಾರಣ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಈ ಮನವಿ ಮಾಡಿದ್ದೇನೆ. ಅವನು ಹಿಂತಿರುಗುತ್ತಾನೆ ಎಂದು ನಾನು ಭಾವಿಸುತ್ತೇನೆ. ದೇವೇಗೌಡರಿಗೆ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಗೌರವ ಇದ್ದರೆ ವಾಪಸ್ ಬರಬೇಕು' ಎಂದು ಮನವಿ ಮಾಡಿದ್ದಾರೆ.

Read More
Next Story