
ಭಾರತೀಯ ಅರಣ್ಯ ಸೇವೆ (ಸಾಂದರ್ಭಿಕ ಚಿತ್ರ)
UPSC ನೇಮಕಾತಿ : ಅರಣ್ಯ ಸೇವೆ ಅಧಿಕಾರಿಯಾಗಬೇಕೆ? ಅರ್ಜಿ ಸಲ್ಲಿಸಲು ಫೆ. 24 ಕೊನೆ ದಿನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಒಟ್ಟು ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಮೆ.24ಕ್ಕೆ ಪ್ರಾಥಮಿಕ ಪರೀಕ್ಷೆಯು ನಾಗರಿಕ ಸೇವಾ ಪರೀಕ್ಷೆಯೊಂದಿಗೆ ಜಂಟಿಯಾಗಿ ನಡೆಯುತ್ತದೆ.
ಕೇಂದ್ರ ಸಾರ್ವಜನಿಕ ಸೇವಾ ಆಯೋಗವು 2026ನೇ ಸಾಲಿನ ಪ್ರತಿಷ್ಠಿತ ಭಾರತೀಯ ಅರಣ್ಯ ಸೇವೆ (IFoS) ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪರಿಸರ ಸಂರಕ್ಷಣೆ ಮತ್ತು ಅರಣ್ಯ ನಿರ್ವಹಣೆಯಲ್ಲಿ ಆಸಕ್ತಿಯಿರುವ ವಿಜ್ಞಾನ ಹಾಗೂ ಎಂಜಿನಿಯರಿಂಗ್ ಪದವೀಧರರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಅರ್ಜಿ ಸಲ್ಲಿಸಲು ಫೆ.24 ಕೊನೆಯ ದಿನಾಂಕವಾಗಿದೆ.
ಒಟ್ಟು ಹುದ್ದೆಗಳೆಷ್ಟು ?
ಯುಪಿಎಸ್‌ಸಿ ಪ್ರತಿ ವರ್ಷದ ಅಧಿಸೂಚನೆಯಂತೆ ಈ ವರ್ಷವೂ ಅರಣ್ಯ ಸೇವೆಗೆ ಪ್ರತ್ಯೇಕ ಅಧಿಸೂಚೆನೆ ಹೊರಡಿಸಿದ್ದು, ಸಾಮಾನ್ಯ ವರ್ಗಕ್ಕೆ 33, ಹಿಂದುಳಿದ ವರ್ಗಗಳಿಗೆ 21, ಪರಿಶಿಷ್ಟ ಜಾತಿಗೆ 12, ಪರಿಶಿಷ್ಟ ಪಂಗಡಕ್ಕೆ 6 ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 8 ಹುದ್ದೆಗಳು ಸೇರಿದಂತೆ ಒಟ್ಟು 80 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಶೈಕ್ಷಣಿಕ ಅರ್ಹತೆ
ಅರಣ್ಯ ಸೇವೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ, ಭೌತಶಾಸ್ತ್ರ, ಅಂಕಿಅಂಶಗಳು, ಪ್ರಾಣಿಶಾಸ್ತ್ರ ಕೃಷಿ, ಅರಣ್ಯಶಾಸ್ತ್ರ ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಗಸ್ಟ್ 1, 2026ಕ್ಕೆ ಅನ್ವಯಿಸುವಂತೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷಗಳು ನಿಗದಿಪಡಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ 5 ವರ್ಷ ಹಾಗೂ ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಒಟ್ಟು ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಮೆ.24ಕ್ಕೆ ಪ್ರಾಥಮಿಕ ಪರೀಕ್ಷೆಯು ನಾಗರಿಕ ಸೇವಾ ಪರೀಕ್ಷೆಯೊಂದಿಗೆ ಜಂಟಿಯಾಗಿ ನಡೆಯುತ್ತದೆ. ಮುಖ್ಯ ಪರೀಕ್ಷೆಯು ನವೆಂಬರ್ 2026 ರಂದು ನಡೆಯಲಿದ್ದು, ಇದು ವಿವರಣಾತ್ಮಕ ಮಾದರಿಯಾಗಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ನಡೆಸಿ ಉತ್ತಮ ಅಂಕಗಳನ್ನು ಪಡೆದವರನ್ನು ಆಯ್ಕೆ ಮಾಡಲಾಗುತ್ತದೆ.
ಸಂಬಳ ಮತ್ತು ಸೌಲಭ್ಯಗಳು
ಆಯ್ಕೆಯಾದ ಅಧಿಕಾರಿಗಳಿಗೆ 7ನೇ ವೇತನ ಆಯೋಗದ ಅನ್ವಯ ವೇತನ ನೀಡಲಾಗುತ್ತದೆ. ಆರಂಭಿಕ ಮೂಲ ವೇತನ 56,100 ನಿಗದಿಪಡಿಸಲಾಗಿದೆ. ತುಟ್ಟಿ ಭತ್ಯೆ , ಮನೆ ಬಾಡಿಗೆ ಭತ್ಯೆ , ಸಾರಿಗೆ ಭತ್ಯೆ ಹಾಗೂ ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತವೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ
* ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ upsconline.nic.in ಗೆ ಭೇಟಿ ನೀಡಿ.
*ಒನ್ ಟೈಮ್ ರಿಜಿಸ್ಟ್ರೇಶನ್ (OTR) ಪ್ರಕ್ರಿಯೆ ಪೂರ್ಣಗೊಳಿಸಿ.
* ಅರ್ಜಿ ನಮೂನೆಯಲ್ಲಿ 'Indian Forest Service' ಆಯ್ಕೆಯನ್ನು ಆರಿಸಿ ವಿವರಗಳನ್ನು ಭರ್ತಿ ಮಾಡಿ.
ಅರ್ಜಿ ಶುಲ್ಕ
ಸಾಮಾನ್ಯ ವರ್ಗ, ಹಿಂದುಳಿದ ವರ್ಗದ ಅಭ್ಯರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ವಿಧಿಸಲಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

