Applications invited for 933 posts including IS, IPS, how to apply? Here are the details
x
ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು

ಐಎಎಸ್‌, ಐಪಿಎಸ್‌ ಸೇರಿದಂತೆ 933 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ

ಅಂತಿಮ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಆದರೆ ಮುಖ್ಯ ಪರೀಕ್ಷೆಯ ವೇಳೆಗೆ ಉತ್ತೀರ್ಣರಾದ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ.


Click the Play button to hear this message in audio format

ಭಾರತದ ಅತ್ಯಂತ ಪ್ರತಿಷ್ಠಿತ ಆಡಳಿತಾತ್ಮಕ ಸೇವೆಗಳಾದ IAS, IPS ಮತ್ತು IFS ಸೇರಿದಂತೆ ಒಟ್ಟು 933 ಹುದ್ದೆಗಳ ಭರ್ತಿಗಾಗಿ ಕೇಂದ್ರ ಲೋಕಸೇವಾ ಆಯೋಗವು (UPSC) 2026ರ ಅಧಿಕೃತ ಅಧಿಸೂಚನೆಯನ್ನು ಫೆ. 4ರಂದು ಬಿಡುಗಡೆ ಮಾಡಿದೆ. ದೇಶದ ಸೇವೆ ಮಾಡುವ ಕನಸು ಹೊತ್ತ ಪದವೀಧರರಿಗೆ ಇದು ಸುವರ್ಣಾವಕಾಶವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗ ಆರಂಭವಾಗಿದೆ.

ಒಟ್ಟು 933 ಹುದ್ದೆಗಳಲ್ಲಿ IAS, IPS, IFS, IRS ಮತ್ತು ಗ್ರೂಪ್ 'ಎ' ಮತ್ತ 'ಬಿ' ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆ. 24 ಕೊನೆಯ ದಿನಾಂಕವಾಗಿದ್ದು, ಸಂಜೆ 6 ಗಂಟೆಯ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪೂರ್ವಭಾವಿ ಪರೀಕ್ಷೆ ಮೇ 24ರಂದು ನಡೆಯಲಿದೆ.

ಶೈಕ್ಷಣಿಕ ಅರ್ಹತೆ

ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಅಂತಿಮ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಆದರೆ ಮುಖ್ಯ ಪರೀಕ್ಷೆಯ ವೇಳೆಗೆ ಉತ್ತೀರ್ಣರಾದ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ.

ವಯೋಮಿತಿ

ಆಗಸ್ಟ್ 1ಕ್ಕೆ ಅನ್ವಯಿಸುವಂತೆ ಕನಿಷ್ಠ ವಯಸ್ಸು 21 ವರ್ಷಗಳರಾಗಿರಬೇಕು. ಗರಿಷ್ಠ ವಯಸ್ಸು 32 ವರ್ಷಗಳು ಮೀರಿರಬಾರದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ವಿನಾಯಿತಿ ಇದೆ.

ಪರೀಕ್ಷಾ ವಿಧಾನ ಮತ್ತು ಆಯ್ಕೆ ಪ್ರಕ್ರಿಯೆ

ನಾಗರಿಕ ಸೇವಾ ಪರೀಕ್ಷೆಯು ಒಟ್ಟು ಮೂರು ಹಂತಗಳಲ್ಲಿ ನಡೆಯಲ್ಲಿದ್ದು ಅಭ್ಯರ್ಥಿಗಳು ಹುದ್ದೆಗಳಿಗೆ ಆಯ್ಕೆಯಾಗಬೇಕಾದರೆ ಪ್ರತಿಯೊಂದು ಹಂತದ ಪರೀಕ್ಷೆಯಲ್ಲಿ ಉತ್ತಿರ್ಣರಾಗಬೇಕು.

ಹಂತ 1: ಪೂರ್ವಭಾವಿ ಪರೀಕ್ಷೆಯು ಮೇ 24 ರಂದು ನಡೆಯಲಿದ್ದು, ಕೇವಲ ಅರ್ಹತಾ ಪರೀಕ್ಷೆಯಾಗಿದ್ದು, ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪತ್ರಿಕೆ-1 ರಲ್ಲಿ ಇತಿಹಾಸ, ಭೂಗೋಳ, ರಾಜಕೀಯ ಮತ್ತು ಪ್ರಚಲಿತ ವಿದ್ಯಮಾನದ ಪ್ರಶ್ನೆಗಳಿರಲಿವೆ. ಪತ್ರಿಕೆ-2 ರಲ್ಲಿ ತಾರ್ಕಿಕ ಸಾಮರ್ಥ್ಯ ಮತ್ತು ಗಣಿತದ ಪ್ರಶ್ನೆಗಳಿರಲಿದ್ದು ಎರಡೂ ಪತ್ರಿಕೆಗಳಿಂದ 400 ಅಂಕಗಳು ನಿಗದಿಪಡಿಸಲಾಗಿದೆ. ಪ್ರತೀ ಪತ್ರಿಕೆಯಲ್ಲಿ ಕನಿಷ್ಠ ಶೇ. 33 ಅಂಕ ಪಡೆಯುವುದು ಕಡ್ಡಾಯವಾಗಿದೆ.

ಹಂತ 2: ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ವಿವರಣಾತ್ಮಕ ಮಾದರಿಯಲ್ಲಿ ಮುಖ್ಯಪರೀಕ್ಷೆ ನಡೆಯಲಿದೆ. ಇದು ಒಟ್ಟು 1,750 ಅಂಕಗಳನ್ನು ಒಳಗೊಂಡಿರುತ್ತದೆ.

ಹಂತ 3: ಮುಖ್ಯ ಪರೀಕ್ಷೆಯಲ್ಲಿ ಉತ್ತಿರ್ಣರಾದ ನಂತರ ಅಭ್ಯರ್ಥಿಗಳಿಗೆ 275 ಅಂಕಗಳ ಸಂದರ್ಶನ ನಡೆಯಲಿದ್ದು, ಅಂತಿಮ ಮೆರಿಟ್ ಪಟ್ಟಿಯನ್ನು ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ.

ವೇತನ ಮತ್ತು ಸವಲತ್ತುಗಳು

ಆಯ್ಕೆಯಾದ ಅಧಿಕಾರಿಗಳಿಗೆ 7ನೇ ವೇತನ ಆಯೋಗದ ಅನ್ವಯ ಅತ್ಯುತ್ತಮ ವೇತನ ಶ್ರೇಣಿ ಸಿಗಲಿದೆ. ಆರಂಭಿಕ ಮೂಲ ವೇತನ: 56,100 ರೂ. ನಿಗದಿಪಡಿಸಲಾಗಿದ್ದು, ಭತ್ಯೆಗಳೂ ಸೇರಿದಂತೆ ಸುಮಾರು 85,000 ರೂ. ನಿಂದ 1 ಲಕ್ಷಕ್ಕಿಂತ ಹೆಚ್ಚು ವೇತನ ಇರಲಿದೆ. ಇದರೊಂದಿಗೆ ಸರ್ಕಾರಿ ವಸತಿ, ವಾಹನ, ಭದ್ರತೆ ಮತ್ತು ವೈದ್ಯಕೀಯ ಸೌಲಭ್ಯಗಳು ಲಭ್ಯವಿರುತ್ತವೆ.

ಅರ್ಜಿ ಸಲ್ಲಿಸುವುದು ಹೇಗೆ

ಅಭ್ಯರ್ಥಿಗಳು ಯಾವುದೇ ದೋಷಗಳಿಲ್ಲದೆ ಆನ್‌ಲೈನ್ ಅರ್ಜಿ ನಮೂನೆ ಯನ್ನು ಭರ್ತಿ ಮಾಡಲು ಈ ಕೆಳಕಂಡ ಮಾರ್ಗದರ್ಶಿಯನ್ನು ಅನುಸರಿಸಿ.

* OTR ನೋಂದಣಿ: ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು 'ಒಂದು ಬಾರಿ ನೋಂದಣಿ' (OTR) ಅನ್ನು ಪೂರ್ಣಗೊಳಿಸಿ.

* ಲಾಗಿನ್: ಇಮೇಲ್ ಅಥವಾ ಮೊಬೈಲ್ ಐಡಿ ಬಳಸಿ ನಿಮ್ಮ ಖಾತೆಯನ್ನು ಪ್ರವೇಶಿಸಬಹುದು.

* ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆ, 2026 ಮೇಲೆ ಕ್ಲಿಕ್ ಮಾಡಿ.

* ಭಾಗ-I ಫಾರ್ಮ್: ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆಗಳು ಮತ್ತು ವಿಳಾಸವನ್ನು ನಮೂದಿಸಿ.

* ಭಾಗ-II ಫಾರ್ಮ್: ಶುಲ್ಕವನ್ನು ಪಾವತಿಸಿ, ನಿಮ್ಮ ಯುಪಿಎಸ್‌ಸಿ ಪರೀಕ್ಷಾ ಕೇಂದ್ರವನ್ನು ಆಯ್ಕೆಮಾಡಿ ಮತ್ತು ಸ್ಕ್ಯಾನ್ ಮಾಡಿದ ಫೋಟೋ ಅಥವಾ ಸಹಿಯನ್ನು ಅಪ್‌ಲೋಡ್ ಮಾಡಿ.

* ಫೋಟೋ ಐಡಿ: ನೀವು ಪರೀಕ್ಷಾ ಹಾಲ್‌ಗೆ ಕೊಂಡೊಯ್ಯಬೇಕಾದ ಫೋಟೋ ಐಡಿಯ ಆಧಾರ್ ಅಥವಾ ಮತದಾರರ ಐಡಿ ಅಥವಾ ಪ್ಯಾನ್‌ ವಿವರಗಳನ್ನು ಒದಗಿಸಿ.

* ಫಾರ್ಮ್ ಅನ್ನು ಅಂತಿಮಗೊಳಿಸಿ ಮತ್ತು ನಿಮ್ಮ ದಾಖಲೆಗಳಿಗಾಗಿ ದೃಢೀಕರಣ ಪುಟವನ್ನು ಮುದ್ರಿಸಿಕೊಳ್ಳಬಹುದು.

ಅರ್ಜಿ ಶುಲ್ಕ

ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ 100 ರೂ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು, ಮಹಿಳೆಯರು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅಭ್ಯರ್ಥಿಗಳಿಗೆ ಸೂಚನೆ

ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಲು ಸೂಚಿಸಲಾಗಿದೆ. ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಕೊನೆಯ ದಿನಾಂಕದವರೆಗೂ ಕಾಯದೆ ಬೇಗನೆ ಅರ್ಜಿ ಸಲ್ಲಿಸಲು ಯುಪಿಎಸ್‌ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story