
Job news| ಎಂಜಿನಿಯರಿಂಗ್ ಪದವೀಧರರಿಗೆ ಸೂರತ್ ಪಾಲಿಕೆಯಲ್ಲಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ !
ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ 3 ವರ್ಷಗಳ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 17,500 ರೂ. ಗೌರವಧನ ನೀಡಲಾಗುತ್ತದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ 7ನೇ ವೇತನ ಆಯೋಗದ ಅನ್ವಯ ವೇತನ ಪರಿಷ್ಕರಣೆಯಾಗಲಿದೆ.
ಎಂಜಿನಿಯರಿಂಗ್ ಪದವಿ ಪೂರೈಸಿರುವ ಉದ್ಯೋಗಾಕಾಂಕ್ಷಿಗಳಿಗೆ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಸಿಹಿ ಸುದ್ದಿ ನೀಡಿದೆ. ಪಾಲಿಕೆಯಲ್ಲಿ ಖಾಲಿ ಇರುವ 22 ಯೋಜನಾ ಸಹಾಯಕ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಒಟ್ಟು 22 ಹುದ್ದೆಗಳಿದ್ದು ಸಾಮಾನ್ಯ ವರ್ಗಕ್ಕೆ 7, ಪರಿಶಿಷ್ಟ ಜಾತಿಗೆ 7, ಪರಿಶಿಷ್ಟ ಪಂಗಡಕ್ಕೆ 5 ಹಾಗೂ ಹಿಂದುಳಿದ ವರ್ಗಗಳಿಗೆ 3 ಹುದ್ದೆಗಳನ್ನು ನಿಗದಿಪಡಿಸಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೂ ನಿಯಮಾನುಸಾರ ಮೀಸಲಾತಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಹತೆ ಮತ್ತು ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ನಗರ, ಪಟ್ಟಣ ಅಥವಾ ಪ್ರಾದೇಶಿಕ ಯೋಜನೆಯಲ್ಲಿ ಬಿ.ಇ (ಸಿವಿಲ್), ಬಿ.ಆರ್ಕ್ ಅಥವಾ ಎಂ.ಇ, ಎಂ.ಆರ್ಕ್ ಪದವಿ ಹೊಂದಿರುವುದು ಕಡ್ಡಾಯ. ಕಂಪ್ಯೂಟರ್ ಜ್ಞಾನದ ಜತೆಗೆ ಗುಜರಾತಿ ಅಥವಾ ಹಿಂದಿ ಭಾಷೆಯ ಪರಿಚಯವಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು. ಸರ್ಕಾರಿ ನಿಯಮದಂತೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಐದು ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ.
ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ 3 ವರ್ಷಗಳ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 17,500 ರೂ. ಗೌರವಧನ ನೀಡಲಾಗುತ್ತದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ 7ನೇ ವೇತನ ಆಯೋಗದ ಅನ್ವಯ ವೇತನ ಪರಿಷ್ಕರಣೆಯಾಗಲಿದೆ. ಜತೆಗೆ ಮನೆಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಒಟ್ಟು ನಾಲ್ಕು ಹಂತಗಳಲ್ಲಿ ಆಯ್ಕೆ ಮಾಡಲಾಗುವುದು. ಮೊದಲಿಗೆ ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ವೈಯಕ್ತಿಕ ಸಂದರ್ಶನ ಹಾಗೂ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಪಾಲಿಕೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 500 ರೂ. ಹಿಂದುಳಿದ ವರ್ಗದ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 400 ರೂ. ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಏ.15 ಕೊನೆಯ ದಿನಾಂಕವಾಗಿದೆ.

