Job News | Central Government Jobs for B.Sc, Diploma Graduates: Ample Opportunities at RCFL
x

ಸಾಂದರ್ಭಿಕ ಚಿತ್ರ

Job News | ಬಿ.ಎಸ್ಸಿ, ಡಿಪ್ಲೊಮಾ ಪದವೀಧರರಿಗೆ ಕೇಂದ್ರ ಸರ್ಕಾರಿ ಉದ್ಯೋಗ: RCFL ನಲ್ಲಿ ಅವಕಾಶ

ಆರ್‌ಸಿಎಫ್‌ಎಲ್‌ ನೇಮಕಾತಿಗೆ ಯಾವುದೇ ಸಂದರ್ಶನ ಇರುವುದಿಲ್ಲ. 200 ಅಂಕಗಳ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ಇರಲಿದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುವುದು.


Click the Play button to hear this message in audio format

ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿರುವ 'ನವರತ್ನ' ಕಂಪನಿ ರಾಷ್ಟ್ರೀಯ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಲಿಮಿಟೆಡ್ (RCFL), ಖಾಲಿ ಇರುವ ಆಪರೇಟರ್ (ರಾಸಾಯನಿಕ) ತರಬೇತಿ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಬಿ.ಎಸ್ಸಿ (ರಸಾಯನಶಾಸ್ತ್ರ) ಮತ್ತು ಕೆಮಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಪದವೀಧರರಿಗೆ ಇದು ವೃತ್ತಿಜೀವನ ಆರಂಭಿಸಲು ಅತ್ಯುತ್ತಮ ಅವಕಾಶವಾಗಿದೆ.

ಒಟ್ಟು ಹುದ್ದೆಗಳೆಷ್ಟು ?

ಒಟ್ಟು 188 ಆಪರೇಟರ್ (ರಾಸಾಯನಿಕ) ತರಬೇತಿ ಹುದ್ದೆಗಳಿದ್ದು, ಸಾಮಾನ್ಯ ವರ್ಗಕ್ಕೆ 85, ಹಿಂದುಳಿದ ವರ್ಗಗಳಿಗೆ 50, ಪರಿಶಿಷ್ಟ ಜಾತಿಗೆ 18, ಪರಿಶಿಷ್ಟ ಪಂಗಡಕ್ಕೆ 17 ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 18 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ಅರ್ಹತೆ ಮತ್ತು ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ (ರಸಾಯನಶಾಸ್ತ್ರ)ದ ಜೊತೆಗೆ NCVT ಪ್ರಮಾಣಪತ್ರ ಹೊಂದಿರಬೇಕು ಅಥವಾ ಕೆಮಿಕಲ್ ಎಂಜಿನಿಯರಿಂಗ್‌ ಅಥವಾ ತಂತ್ರಜ್ಞಾನದಲ್ಲಿ 3 ವರ್ಷದ ಡಿಪ್ಲೊಮಾ ಮುಗಿಸಿರಬೇಕು. ಕನಿಷ್ಠ ಶೇ. 55 ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ. ಫೆ.1 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ನಿಗದಿಪಡಿಸಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ವಿನಾಯಿತಿ ನೀಡಲಾಗಿದೆ.

ಆಕರ್ಷಕ ಸಂಬಳ ಮತ್ತು ಸೌಲಭ್ಯಗಳು

ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ 6 ತಿಂಗಳು ತರಬೇತಿ ಅವಧಿಯಲ್ಲಿ ತಿಂಗಳಿಗೆ 22 ಸಾವಿರ ರೂ. ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿ ಯಶಸ್ವಿಯಾಗಿ ಮುಗಿಸಿದ ನಂತರ, ಇವರು 22,000 – 60,000 ರೂ. ವೇತನ ಶ್ರೇಣಿಗೆ ನಿಯೋಜನೆಗೊಳ್ಳಲಿದ್ದಾರೆ. ಭತ್ಯೆಗಳು ಸೇರಿದಂತೆ ಆರಂಭಿಕ ಹಂತದಲ್ಲೇ ತಿಂಗಳಿಗೆ ಅಂದಾಜು 47,800 ರೂ. ವೇತನ ಲಭ್ಯವಿರುತ್ತದೆ. ಜತೆಗೆ ಉಚಿತ ವೈದ್ಯಕೀಯ ಸೌಲಭ್ಯ, ವಸತಿ ಮತ್ತು ವಿಮಾ ಸೌಲಭ್ಯಗಳೂ ಇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಈ ನೇಮಕಾತಿಗೆ ಯಾವುದೇ ವೈಯಕ್ತಿಕ ಸಂದರ್ಶನ ಇರುವುದಿಲ್ಲ. 200 ಅಂಕಗಳ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುವುದು. ಕೌಶಲ್ಯ ಪರೀಕ್ಷೆ ಕೇವಲ ಅರ್ಹತಾ ಪರೀಕ್ಷೆಯಾಗಿದ್ದು, ಪ್ರಾಯೋಗಿಕ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಒಟ್ಟಾರೆ ಅಂಕಗಳ ಆಧಾರದ ಮೇಲೆ ಅಂತಿಮ ಪಟ್ಟಿ ತಯಾರಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಯಾವಾಗ ?

ಅರ್ಜಿ ಸಲ್ಲಿಸಲು ಏ.11ರಿಂದ ಅವಕಾಶ ನೀಡಲಾಗಿದ್ದು, ಏ. 27 ಸಂಜೆ 5 ಗಂಟೆವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಾಮಾನ್ಯ ವರ್ಗ, ಹಿಂದುಳಿದ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 700 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು ಮತ್ತು ಮಾಜಿ ಸೈನಿಕರಿಗೆ ಯಾವುದೇ ಪರೀಕ್ಷಾ ಶುಲ್ಕವಿಲ್ಲ. ಆಸಕ್ತರು RCFL ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

Read More
Next Story