
ಸಾಂದರ್ಭಿಕ ಚಿತ್ರ
ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಆರ್‌ಬಿಐ ಅಸಿಸ್ಟೆಂಟ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ
ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮದಂತೆ ಆಕರ್ಷಕ ವೇತನ ಪ್ಯಾಕೇಜ್ ಸಿಗಲಿದ್ದು, ಆರಂಭಿಕ ಮೂಲ ವೇತನ ತಿಂಗಳಿಗೆ 29 ಸಾವಿರ ರೂ. ಮನೆ ಬಾಡಿಗೆ ಭತ್ಯೆ ಹೊರತುಪಡಿಸಿ 58,514 ರೂ. ಲಭ್ಯವಾಗಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಹಿ ಸುದ್ದಿ ನೀಡಿದೆ. 2026ನೇ ಸಾಲಿನ ಸಹಾಯಕ (Assistant) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಒಟ್ಟು 650 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮಾ.8 ಕೊನೆಯ ದಿನಾಂಕವಾಗಿದೆ.
ಒಟ್ಟು ಹುದ್ದೆಗಳೆಷ್ಟು ?
ಆರ್‌ಬಿಐನಲ್ಲಿ ಒಟ್ಟು 650 ಸಹಾಯಕ ಹುದ್ದೆಗಳಿದ್ದು, ಬೆಂಗಳೂರು ಕಚೇರಿಯಲ್ಲಿ 24 ಹುದ್ದೆಗಳು ಖಾಲಿ ಇವೆ. ಸಾಮಾನ್ಯ ವರ್ಗಕ್ಕೆ 346, ಹಿಂದುಳಿದ ವರ್ಗಗಳಿಗೆ 99, ಪರಿಶಿಷ್ಟ ಜಾತಿಗೆ 110, ಪರಿಶಿಷ್ಟ ಪಂಗಡಕ್ಕೆ 37 ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 58 ಹುದ್ದೆಗಳನ್ನು ಮೀಸಲಿಡಲಾಗಿದೆ.
ವೇತನ ಮತ್ತು ಸೌಲಭ್ಯಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮದಂತೆ ಆಕರ್ಷಕ ವೇತನ ಪ್ಯಾಕೇಜ್ ಸಿಗಲಿದ್ದು, ಆರಂಭಿಕ ಮೂಲ ವೇತನ ತಿಂಗಳಿಗೆ 29 ಸಾವಿರ ರೂ. ಮನೆ ಬಾಡಿಗೆ ಭತ್ಯೆ ಹೊರತುಪಡಿಸಿ 58,514 ರೂ. ಲಭ್ಯವಾಗಲಿದ್ದು, ಡಿಎ, ಎಚ್‌ಆರ್‌ಎ, ಸಾರಿಗೆ ಭತ್ಯೆ, ವೈದ್ಯಕೀಯ ಸೌಲಭ್ಯ ಮತ್ತು ಪಿಂಚಣಿ ಸೌಲಭ್ಯಗಳು ಇರುತ್ತವೆ.
ಅರ್ಹತಾ ಮಾನದಂಡಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಕನಿಷ್ಠ ಶೇ. 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳು ಉತ್ತಿರ್ಣರಾಗಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿರಬೇಕು. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಯೋಮಿತಿ
ಫೆಬ್ರವರಿ 1ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷಗಳು ನಿಗದಿಪಡಿಸಿದ್ದು, ಮೀಸಲಾತಿ ವರ್ಗದವರಿಗೆ ನಿಯಮದಂತೆ ವಯೋಮಿತಿ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ
ನೇಮಕಾತಿಯನ್ನು ಮೂರು ಹಂತಗಳಲ್ಲಿ ಮಾಡಲಾಗುತ್ತಿದ್ದು, ಏ.11 ಪೂರ್ವಭಾವಿ ಪರೀಕ್ಷೆ, ಜೂ.7 ಮುಖ್ಯ ಪರೀಕ್ಷೆ ಹಾಗೂ ಸ್ಥಳೀಯ ಭಾಷೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳು ಆರ್‌ಬಿಐ ಅಧಿಕೃತ ವೆಬ್‌ಸೈಟ್ www.rbi.org.in ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ 450 ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 50 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ವಿವಿಧ ಹಂತಗಳು
* ಅಧಿಕೃತ ಆರ್‌ಬಿಐ ನೇಮಕಾತಿ ಪುಟಕ್ಕೆ ಭೇಟಿ ನೀಡಿ ಮತ್ತು “ಸಹಾಯಕ ಹುದ್ದೆಗೆ ನೇಮಕಾತಿ ಪ್ಯಾನಲ್ ವರ್ಷ 2025” ಲಿಂಕ್ ಅನ್ನು ಹುಡುಕಿ.
* “ಹೊಸ ನೋಂದಣಿ” ಮೇಲೆ ಕ್ಲಿಕ್ ಮಾಡಿ ಮತ್ತು ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಪಡೆಯಲು ನಿಮ್ಮ ಹೆಸರು, ಸಂಪರ್ಕ ವಿವರಗಳು ಮತ್ತು ಇಮೇಲ್ ಐಡಿಯನ್ನು ನಮೂದಿಸಿ.
* ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ ಮತ್ತು ವೈಯಕ್ತಿಕ ವಿವರಗಳು ಮತ್ತು ಶೈಕ್ಷಣಿಕ ಅರ್ಹತೆಗಳೊಂದಿಗೆ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
* ನೀವು ಅರ್ಜಿ ಸಲ್ಲಿಸಲು ಬಯಸುವ ಆರ್‌ಬಿಐ ಕಚೇರಿಯನ್ನು ಆಯ್ಕೆ ಮಾಡಿ (ನೀವು ಒಂದು ಕಚೇರಿಗೆ ಮಾತ್ರ ಅರ್ಜಿ ಸಲ್ಲಿಸಬಹುದು) ಮತ್ತು ಅದೇ ರಾಜ್ಯದೊಳಗಿನ ನಿಮ್ಮ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿ.
* ಛಾಯಾಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
* ನಿಮ್ಮ ವಿವರಗಳನ್ನು ಮೌಲ್ಯೀಕರಿಸಿ ಮತ್ತು ಅಂತಿಮ ಸಲ್ಲಿಕೆಗೆ ಮೊದಲು ಸಂಪೂರ್ಣ ಅರ್ಜಿಯನ್ನು ಓದಿಕೊಳ್ಳಿ.
* ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, IMPS ಅಥವಾ ಮೊಬೈಲ್ ವ್ಯಾಲೆಟ್‌ಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಿ.
* ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರವೇ “ನೋಂದಣಿ ಪೂರ್ಣಗೊಳಿಸಿ” ಕ್ಲಿಕ್ ಮಾಡಿ, ನಂತರ ಇ-ರಶೀದಿ ಮತ್ತು ಅರ್ಜಿ ನಮೂನೆಯನ್ನು ತೆಗೆದುಕೊಳ್ಳಿ.

