
ಸಾಂದರ್ಭಿಕ ಚಿತ್ರ
NWKRTC | ನೇಮಕಾತಿ ಪರೀಕ್ಷೆ ಏ.10ಕ್ಕೆ ಮುಂದೂಡಿಕೆ, ಕೆಇಎ ಹೇಳಿದ್ದೇನು?
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಏ.9 ರಂದು ಉಪ ಚುನಾವಣೆ ನಡೆಯುವುದರಿಂದ ಸ್ಪರ್ಧಾರ್ಥಿಗಳು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಇಎ ತಿಳಿಸಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 9ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಹೆಚ್. ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಇಎ, ಏಪ್ರಿಲ್ 9ರಂದು ವಿವಿಧ ಹುದ್ದೆಗಳಿಗೆ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಈ ಮೊದಲು ತಿಳಿಸಲಾಗಿತ್ತು. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದರಿಂದ ಸ್ಪರ್ಧಾರ್ಥಿಗಳು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಏಪ್ರಿಲ್ 10ರಂದು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಆದೇಶ ಪತ್ರ
ಈ ಕುರಿತು ಗುರುವಾರ (ಮಾ.26) ಪ್ರಕಟಣೆ ಹೊರಡಿಸಿರುವ ಅವರು, ಸಹಾಯಕ ಆಡಳಿತಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ ಸೇರಿದಂತೆ ಗ್ರೇಡ್-2 ಅಧಿಕಾರಿ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಬಹುದು. ಸದ್ಯದಲ್ಲೇ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಕೋರಲಾಗಿದೆ.
ಯಾವ್ಯಾವ ಹುದ್ದೆಗಳಿಗೆ ಪರೀಕ್ಷೆ?
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ಸಹಾಯಕ ಆಡಳಿತಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ಕಾನೂನು ಅಧಿಕಾರಿ, ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಸಹಾಯಕ ತಾಂತ್ರಿಕ ಶಿಲ್ಪಿ ಮತ್ತು ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಗಳಿಗೆ ಏಪ್ರಿಲ್ 10ರಂದು ಬೆಳಿಗ್ಗೆ 10.30ರಿಂದ 12.30ರವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2.30ರಿಂದ 4.30ರವರೆಗೆ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ನಡೆಯಲಿದೆ. ಎರಡು ಪತ್ರಿಕೆಗಳಲ್ಲಿ ತಲಾ 100 ಪ್ರಶ್ನೆಗಳಿದ್ದು, ಒಟ್ಟು 300 ಅಂಕಗಳನ್ನು ನಿಗದಿಪಡಿಸಲಾಗಿದೆ.
ಋಣಾತ್ಮಕ ಅಂಕಗಳು
ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳನ್ನು ತಪಾಸಣೆ ಹಾಗೂ ಮುಖಚಹರೆ ಪರಿಶೀಲಿಸಿ ಪ್ರವೇಶ ನೀಡುವುದರಿಂದ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರತಕ್ಕದ್ದು. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4ರಷ್ಟು (0.75) ಅಂಕಗಳನ್ನು ಕಡಿತಗೊಳಿಸಲಾಗುವುದು. ಉತ್ತರಿಸದ ಪ್ರಶ್ನೆಗಳಿಗೆ ಐದನೇ ಆಯ್ಕೆಯ ವೃತ್ತವನ್ನು ಶೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷಗಳನ್ನು ನೀಡಲಾಗುವುದು. ಯಾವುದೇ ಆಯ್ಕೆಯನ್ನು ಅಥವಾ ವೃತ್ತವನ್ನು ಶೇಡ್ ಮಾಡದಿದ್ದರೆ, ಅಂತಹ ಪ್ರತಿ ಪ್ರಶ್ನೆಗೆ 1/4ರಷ್ಟು (0.75) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

