
ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್
Job News | ನಾಲ್ಕೊ ಸಂಸ್ಥೆಯಲ್ಲಿ ಬೃಹತ್ ನೇಮಕಾತಿ: ಆಪರೇಟರ್, ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಕಟಣೆಯಲ್ಲಿ ತಿಳಿಸಿರುವಂತೆ 10ನೇ ತರಗತಿ, ಐಟಿಐ, ಗಣಿ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ, ಫಿಟ್ಟರ್ ಹಾಗೂ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.
ಕೇಂದ್ರ ಸರ್ಕಾರದ ಪ್ರಮುಖ ನವರತ್ನ ಕಂಪನಿಗಳಲ್ಲಿ ಒಂದಾದ 'ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್' (NALCO) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆಪರೇಟರ್, ಟೆಕ್ನಿಷಿಯನ್ ಮತ್ತು ಜೂನಿಯರ್ ಫೋರ್‌ಮ್ಯಾನ್ ಸೇರಿದಂತೆ ಒಟ್ಟು 268 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಅರ್ಹ ಉದ್ಯೋಗಾಕಾಂಕ್ಷಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದು. ದೇಶಾದ್ಯಂತ ಎಲ್ಲಿಯಾದರೂ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಜೂನ್ 10ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಆಪರೇಟರ್ ಗ್ರೇಡ್ III, ಮೈನಿಂಗ್ ಮೇಟ್ ಗ್ರೇಡ್ III, ಜೂನಿಯರ್ ಫೋರ್‌ಮ್ಯಾನ್ (ಗಣಿ), ಜೂನಿಯರ್ ಪೋರ್‌ಮ್ಯಾನ್ (ಎಲೆಕ್ಟ್ರಿಕಲ್), ತಂತ್ರಜ್ಞ, ಲ್ಯಾಬೊರೇಟರಿ, ಇನ್ಟ್ಸುಮೆಂಟೇಶನ್, ಜೂನಿಯರ್ ಫೋರ್‌ಮ್ಯಾನ್ ಸೇರಿದಂತೆ ಒಟ್ಟು 268 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ ಮತ್ತು ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಕಟಣೆಯಲ್ಲಿ ತಿಳಿಸಿರುವಂತೆ 10ನೇ ತರಗತಿ, ಐಟಿಐ, ಗಣಿ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ, ಫಿಟ್ಟರ್ ಹಾಗೂ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ಗರಿಷ್ಠ 40 ವರ್ಷ ಮೀರಿರಬಾರದು. ಕೇಂದ್ರ ಸರ್ಕಾರದ ಹಾಗೂ ನಾಲ್ಕೊ ನಿಯಮಾವಳಿಗಳ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ
ಸಾಮಾನ್ಯ ವರ್ಗ, ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 100 ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆನ್‌ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಶುಲ್ಕ ಪಾವತಿ ಮಾಡಬಹುದಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ನಡೆಸಲಾಗುವುದು. ಟ್ರೇಡ್ ಟೆಸ್ಟ್ ಪರೀಕ್ಷೆ ಮೂಲ ದಾಖಲಾತಿಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಬಳಿ ಚಾಲ್ತಿಯಲ್ಲಿರುವ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಹಿ, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಜಾತಿ ಪ್ರಮಾಣಪತ್ರಗಳ ಸ್ಕ್ಯಾನ್ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಅಧಿಕೃತ ಲಿಂಕ್ www.nalcoindia.com ಗೆ ಕ್ಲಿಕ್ ಮಾಡಿ ಆನ್‌ಲೈನ್ ಅರ್ಜಿ ನಮೂನೆಯನ್ನು ನಿಖರವಾಗಿ ಭರ್ತಿ ಮಾಡಿ.
ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಿ. ಕೊನೆಯದಾಗಿ ಅರ್ಜಿ ಫಾರ್ಮ್ ಅನ್ನು ಸಬ್‌ಮಿಟ್ ಮಾಡಿ, ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು. ಆನ್‌ಲೈನ್ ಅರ್ಜಿ ಸಲ್ಲಿಕೆ ಮೇ 21ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನಾಂಕವಾಗಿದೆ ಎಂದು 'ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ʼ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

