KPSC Result | Candidates from the same center pass in a row?
x

ಕೆಪಿಎಸ್‌ಸಿ ಪ್ರಕಟಿಸಿರುವ ಪಟ್ಟಿಯಲ್ಲಿರುವ ಒಂದೇ ಸಾಲಿನ ನೋಂದಣಿ ಸಂಖ್ಯೆ 

KPSC Result| ಒಂದೇ ಕೇಂದ್ರದ ಅಭ್ಯರ್ಥಿಗಳು ಸಾಲು ಸಾಲಾಗಿ ಪಾಸ್?

ಕೆಎಎಸ್‌ ಮುಖ್ಯಪರೀಕ್ಷೆಯಿಂದ ವ್ಯಕ್ತಿಗತ ಪರೀಕ್ಷೆಗೆ ಪ್ರಕಟಿಸಿರುವ ಪಟ್ಟಿಯಲ್ಲಿ ಒಂದೇ ಕೊಠಡಿ, ಒಂದೇ ಕೇಂದ್ರದ ನೋಂದಣಿ ಸಂಖ್ಯೆ ಪ್ರಕಟವಾಗಲು ಸಾಧ್ಯವೇ ಎಂದು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿ ಸಂಘಟನೆಗಳು ಅನುಮಾನ ವ್ಯಕ್ತಪಡಿಸಿವೆ.


Click the Play button to hear this message in audio format

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪ್ರಕಟಿಸಿದೆ. ಆದರೆ, ಈ ಪಟ್ಟಿಯಲ್ಲಿ ಒಂದೇ ಪರೀಕ್ಷಾ ಕೇಂದ್ರದ ನೋಂದಣಿ ಸಂಖ್ಯೆಗಳು ಪ್ರಕಟವಾಗಿರುವುದಕ್ಕೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸ್ಪರ್ಧಾರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದು, "ಕೆಎಎಸ್‌ ಮುಖ್ಯಪರೀಕ್ಷೆಯಿಂದ ವ್ಯಕ್ತಿಗತ ಪರೀಕ್ಷೆಗೆ ಪ್ರಕಟಿಸಿರುವ ಪಟ್ಟಿಯಲ್ಲಿ ಒಂದೇ ಕೊಠಡಿ, ಒಂದೇ ಕೇಂದ್ರದ ನೋಂದಣಿ ಸಂಖ್ಯೆ ಪ್ರಕಟವಾಗಲು ಸಾಧ್ಯವೇ?" ಎಂದು ಪ್ರಶ್ನಿಸಿದೆ.

ಏನಿದು ಆರೋಪ?

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2024ರ ಫೆ. 26ರಂದು 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಇಂಗ್ಲಿಷ್‌ನಿಂದ ಕನ್ನಡಕ್ಕೆ ಸರಿಯಾಗಿ ಅನುವಾದವಾಗಿಲ್ಲ ಎಂದು ಎರಡು ಬಾರಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಿತ್ತು. 2025ರ ಮೇ 3ರಿಂದ 9ರವರೆಗೂ ಮುಖ್ಯ ಪರೀಕ್ಷೆಯನ್ನು ನಡೆಸಿತ್ತು. ಇದೀಗ ಸೋಮವಾರ (ಮಾ. 3) ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಈ ಪಟ್ಟಿಯ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸ್ಪರ್ಧಾರ್ಥಿಗಳು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಸಂಘಟನೆ ಹೇಳುವುದೇನು?

ʼಆಕ್ಸಾʼ ಸಂಘಟನೆ ತನ್ನ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಕಟವಾಗಿರುವ ಪಟ್ಟಿಯಲ್ಲಿ ನೋಂದಣಿ ಸಂಖ್ಯೆಗಳಾದ 250002755, 250002756, 250002757, 250002759, 250002762, 250002764, 250002766, 250002769, 250002770, 250002772, 250002773, 250002788 ಹಾಗೂ 250002798 ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ಇವು ಒಂದೇ ಕೇಂದ್ರದ ಸಂಖ್ಯೆಗಳಾಗಿರಬಹುದು, ಈ ರೀತಿಯಾಗಿ ಅನುಕ್ರಮ ಸಂಖ್ಯೆಗಳು ಬರಲು ಸಾಧ್ಯವಿಲ್ಲ ಎಂದು ಆರೋಪ ಮಾಡಿದೆ.

ʼಎಕ್ಸ್‌ʼ ನಲ್ಲಿ ಕೆಪಿಎಸ್‌ಸಿ ಫಲಿತಾಂಶದ ಸದ್ದು

ʼಎಕ್ಸ್‌ʼ ನಲ್ಲಿ ಕೆಪಿಎಸ್‌ಸಿ ಫಲಿತಾಂಶದ ಸದ್ದು

ಸಾಮಾಜಿಕ ಜಾಲತಾಣದಲ್ಲಿ ʼನೆಟ್‌ ಜೀರೋʼ ಎಂಬ ಖಾತೆಯಲ್ಲಿ ಈ ಕುರಿತು ಪ್ರಕಟಿಸಿದ್ದು, "ಪಟ್ಟಿಯಲ್ಲಿ 780 ರಿಂದ 797 ಸೀರಿಯಲ್‌ ನಂಬರ್‌ನಲ್ಲಿ 250004809, 250004810, 250004811, 250004812, 250004813, 250004814, 250004815, 250004816, 250004818, 250004819, 250004823, 250004826, 250004828, 250004836, 250004838, 250004843, 250004844, 250004845 ಹಾಗೂ 812 ರಿಂದ 820 ರವರೆಗೆ 250004900, 250004902, 250004903, 250004905, 250004907, 250004910, 250004915, 250004916, 250004919, ಮತ್ತು 824 ರಿಂದ 831 ರವರೆಗೆ 250004960, 250004961, 250004962, 250004963, 250004964, 250004965 ಹಾಗೂ 250004969 ನೋಂದಣಿ ಸಂಖ್ಯೆಗಳಿರುವುದು ಅನುಮಾನ ಮೂಡಿಸಿದೆ" ಎಂದು ತಿಳಿಸಿದ್ದಾರೆ.

ಕೆಪಿಎಸ್‌ಸಿ ಸಾಲು ಸಾಲು ವಿವಾದ

ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವ ಬದಲು ಸದಾ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. "ಅಧಿಸೂಚನೆ ಹೊರಡಿಸಿ ಒಂದು ವರ್ಷದೊಳಗೆ ಫಲಿತಾಂಶ ನೀಡಬೇಕು" ಎಂದು ವಿದ್ಯಾರ್ಥಿಗಳು ಆಗ್ರಹಿಸಿದರೂ 2-3 ವರ್ಷ ಸಮಯ ತೆಗೆದುಕೊಳ್ಳುತ್ತಿದೆ. 2024ರ ಆರಂಭದಲ್ಲಿ ಅಧಿಸೂಚನೆ ಹೊರಡಿಸಿದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಎರಡು ವರ್ಷಗಳ ನಂತರ ಸೋಮವಾರ (ಮಾ. 2) ಮುಖ್ಯಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಇನ್ನು ವ್ಯಕ್ತಿಗತ ಪರೀಕ್ಷೆ ನಡೆಸಿ, ಅಂತಿಮ ಫಲಿತಾಂಶ ಪ್ರಕಟಿಸುವಾಗ ಮತ್ತಷ್ಟು ತಿಂಗಳು ಕಳೆಯುತ್ತದೆ ಎಂಬುದು ಸ್ಪರ್ಧಾರ್ಥಿಗಳ ಅಳಲು.

ಹಿಂದಿನ ವಿವಾದಗಳೇನು?

ಕಾರ್ಯದರ್ಶಿ, ಅಧ್ಯಕ್ಷರ ವಿವಾದ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರ ಸಾಹುಕಾರ್‌ ಹಾಗೂ ಈ ಹಿಂದೆ ಕಾರ್ಯದರ್ಶಿಯಾಗಿದ್ದ ಕೆ.ಎಸ್‌. ಲತಾಕುಮಾರಿ ನಡುವೆ ಆಡಳಿತಾತ್ಮಕ ವಿವಾದ ನಡೆದಿತ್ತು. "ಸರ್ಕಾರದ ಆದೇಶ ಹಾಗೂ ನಿಯಮಗಳನ್ನು ಕಾರ್ಯದರ್ಶಿ ಉಲ್ಲಂಘಿಸುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕು" ಎಂದು ಅಧ್ಯಕ್ಷರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇನ್ನು ರಾಜ್ಯಪಾಲರಿಗೆ ಪತ್ರ ಬರೆದಿದ್ದ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ, "ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಕ್ರಮ ಕೈಗೊಳ್ಳಬೇಕು" ಎಂದು ಮನವಿ ಮಾಡಿದ್ದರು.

ಎರಡು ಬಾರಿ ಪೂರ್ವಭಾವಿ ಪರೀಕ್ಷೆ: 2024ರಲ್ಲಿ ಕೆಎಎಸ್‌ಗೆ ಅಧಿಸೂಚನೆ ಹೊರಡಿಸಿದ್ದ ಕೆಪಿಎಸ್‌ಸಿ, ಪೂರ್ವಭಾವಿ ಪರೀಕ್ಷೆಯಲ್ಲಿ ಮಾಡಿದ್ದ ಅನುವಾದದ ಎಡವಟ್ಟಿನಿಂದ ಆಗಸ್ಟ್‌ 27 ಹಾಗೂ ಡಿಸೆಂಬರ್‌ 29 ರಂದು ಎರಡು ಬಾರಿ ಪರೀಕ್ಷೆ ನಡೆಸಿತ್ತು. ಸಿಎಂ ಸಿದ್ದರಾಮಯ್ಯ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್ಸಿಗೆ ಸೂಚನೆ ನೀಡಿದ್ದೇನೆ,” ಎಂದು ತಿಳಿಸಿದ್ದರು. ಈ ಕುರಿತು ಕನ್ನಡ ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಬಂಡಲ್‌ ಓಪನ್‌: ಕೆಪಿಎಸ್‌ಸಿ ಮೇ 3ರಿಂದ 9 ರವರೆಗೆ ಮುಖ್ಯಪರೀಕ್ಷೆ ನಿಗದಿಪಡಿಸಿತ್ತು. ಸೋಮವಾರ (ಮೇ 5) ತಲಾ 125 ಅಂಕಗಳ ಎರಡು ಪ್ರಶ್ನೆಗಳನ್ನೊಳಗೊಂಡ ಪ್ರಬಂಧ ಪತ್ರಿಕೆಯ ಪರೀಕ್ಷೆ ನಡೆದಿದೆ. ಮೈಸೂರು ರಸ್ತೆಯ ಕಸ್ತೂರಬಾ ನಗರದ ಬಿಬಿಎಂಪಿ ಸಂಯುಕ್ತ ಪಿಯು ಕಾಲೇಜಿನ ಕೊಠಡಿ ಸಂಖ್ಯೆ 4ರಲ್ಲಿ ಪ್ರಶ್ನೆಪತ್ರಿಕೆ ಬಂಡಲ್‌ ಮೊದಲೇ ಓಪನ್‌ ಆಗಿರುವುದನ್ನು ಗುರುತಿಸಿದ ಅಭ್ಯರ್ಥಿಗಳು ಈ ಕುರಿತು ದೂರು ನೀಡಿದ್ದರು ಹಾಗೂ ಅದಕ್ಕೆ ಆ ಕಾಲೇಜಿನ ಪ್ರಾಂಶುಪಾಲರು ಸ್ವೀಕೃತಿ ಮೊಹರು ಹಾಕಿದ್ದರು. ಆದರೆ ಈ ಆರೋಪವನ್ನು ಕೆಪಿಎಸ್‌ಸಿ ನಿರಾಕರಿಸಿತ್ತು.

ಎಇ ಪಟ್ಟಿ ಪ್ರಕಟಿಸಿದ್ದಕ್ಕೆ ಹೈಕೋರ್ಟ್‌ ಚಾಟಿ: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ರಚಿಸಿದ್ದ ಐವರು ಸದಸ್ಯರ ಉಪ ಸಮಿತಿಯು ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವಾಗಲೇ, ನೇಮಕಾತಿ ಪಟ್ಟಿಯನ್ನು ಕೆಪಿಎಸ್‌ಸಿ ರಾಜ್ಯ ಸರ್ಕಾರಕ್ಕೆ ಹೇಗೆ ಕಳುಹಿಸಿತ್ತು? ಅದನ್ನು ಆಧರಿಸಿ ಸರ್ಕಾರವು ಆತುರದಲ್ಲಿ ನೇಮಕಾತಿ ಆದೇಶ ನೀಡಿರುವುದು ಏಕೆ? ಎಂಬುದರ ಬಗ್ಗೆ ವಿವರಣೆ ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು.

Read More
Next Story