
ಮೇ 10ರಂದು RGUHS, KSSIDC, BWSSB ಹಾಗೂ ಕೃಷಿ ಮಾರುಕಟ್ಟೆ ಇಲಾಖೆಗಳ ವಿವಿಧ ಹುದ್ದೆಗಳಿಗೆ ಸಾಮಾನ್ಯ ಜ್ಞಾನ (GK) ಮತ್ತು ವಿಷಯಾಧಾರಿತ ಲಿಖಿತ ಪರೀಕ್ಷೆಗಳು ಆಯೋಜನೆಯಾಗಿವೆ.
ಕೆಇಎ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಅಕ್ರಮ ತಡೆಗೆ '5ನೇ ಆಯ್ಕೆ' ಅಸ್ತ್ರ ಪ್ರಯೋಗ !
ಮೇ 10ರಂದು RGUHS, KSSIDC, BWSSB ಹಾಗೂ ಕೃಷಿ ಮಾರುಕಟ್ಟೆ ಇಲಾಖೆಗಳ ವಿವಿಧ ಹುದ್ದೆಗಳಿಗೆ ಸಾಮಾನ್ಯ ಜ್ಞಾನ (GK) ಮತ್ತು ವಿಷಯಾಧಾರಿತ ಲಿಖಿತ ಪರೀಕ್ಷೆಗಳು ಆಯೋಜನೆಯಾಗಿವೆ.
ರಾಜ್ಯದ ವಿವಿಧ ನಿಗಮ-ಮಂಡಳಿಗಳ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಲಿಖಿತ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದೆ. ಇದರ ಬೆನ್ನಲ್ಲೇ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿರುವ ಪ್ರಾಧಿಕಾರವು, ಒಎಂಆರ್ ಮಾದರಿಯಲ್ಲಿ ಮಹತ್ವದ ಬದಲಾವಣೆ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಸೇರಿ ವಿವಿಧ ಇಲಾಖೆಗಳ ನೇಮಕಾತಿಗೆ ಈ ಪರೀಕ್ಷೆಗಳು ನಡೆಯಲಿವೆ.
ಯಾವಾಗ, ಯಾವ ಪರೀಕ್ಷೆ?
ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಸೇರಿದಂತೆ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳ ದಿನಾಂಕಗಳು ಈ ಕೆಳಗಿನಂತಿವೆ. ಏಪ್ರಿಲ್ 26 ರಂದು KSSIDC ಮತ್ತು BWSSB ಯಲ್ಲಿನ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಮತ್ತು ಅಸಿಸ್ಟೆಂಟ್ ಇಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ.
ಮೇ 10ರಂದು RGUHS, KSSIDC, BWSSB ಹಾಗೂ ಕೃಷಿ ಮಾರುಕಟ್ಟೆ ಇಲಾಖೆಗಳ ವಿವಿಧ ಹುದ್ದೆಗಳಿಗೆ ಸಾಮಾನ್ಯ ಜ್ಞಾನ (GK) ಮತ್ತು ವಿಷಯಾಧಾರಿತ ಲಿಖಿತ ಪರೀಕ್ಷೆಗಳು ಆಯೋಜನೆಯಾಗಿವೆ.
ಅಕ್ರಮ ತಡೆಗೆ 'ಫೇಶಿಯಲ್ ರೆಕಗ್ನಿಷನ್' ಕಡ್ಡಾಯ
ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೆಇಎ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ (ಐಎಎಸ್), "ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ತಡೆಗಟ್ಟಲು ಮುಖಬೆಲೆ ಗುರುತಿಸುವಿಕೆ (Facial Recognition) ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ, ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಕನಿಷ್ಠ 2 ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು," ಎಂದು ತಿಳಿಸಿದ್ದಾರೆ.
ಏನಿದು '5ನೇ ಆಯ್ಕೆ' ನಿಯಮ?
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬ್ಲಾಂಕ್ (ಖಾಲಿ) ಒಎಂಆರ್ ಶೀಟ್ ನೀಡಿ, ಬಳಿಕ ಮಧ್ಯವರ್ತಿಗಳ ಮೂಲಕ ಅಕ್ರಮವೆಸಗುವ ಜಾಲಗಳಿಗೆ ಬ್ರೇಕ್ ಹಾಕಲು ಕೆಇಎ ಹೊಸ ಮಾದರಿ ಪರಿಚಯಿಸಿದೆ. ಈ ಹಿಂದೆ ಒಎಂಆರ್ ಶೀಟ್‌ನಲ್ಲಿ ಉತ್ತರ ಗುರುತಿಸಲು ಕೇವಲ ನಾಲ್ಕು ಆಯ್ಕೆಗಳು (A, B, C, D) ಮಾತ್ರ ಇರುತ್ತಿದ್ದವು. ಆದರೆ, ಇನ್ನು ಮುಂದೆ ಐದನೇ ವೃತ್ತದ ಆಯ್ಕೆಯನ್ನು ಕಡ್ಡಾಯವಾಗಿ ನೀಡಲಾಗುತ್ತದೆ.
ಯಾವುದೇ ಪ್ರಶ್ನೆಗೆ ಉತ್ತರಿಸಲು ಅಭ್ಯರ್ಥಿ ಇಚ್ಛಿಸದಿದ್ದರೆ, ಆ ಪ್ರಶ್ನೆಯನ್ನು ಹಾಗೆಯೇ ಖಾಲಿ ಬಿಡುವಂತಿಲ್ಲ. ಬದಲಾಗಿ ಕಡ್ಡಾಯವಾಗಿ ಆ 5ನೇ ವೃತ್ತವನ್ನು ಶೇಡ್ ಮಾಡಬೇಕು. ಇದಕ್ಕಾಗಿ ಪರೀಕ್ಷೆಯ ಅಂತಿಮ ಬೆಲ್ ಆದ ಬಳಿಕ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 5 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಉತ್ತರಿಸದಿದ್ದರೆ ನೆಗೆಟಿವ್ ಮಾರ್ಕಿಂಗ್ ಎಚ್ಚರ!
ಹೊಸ ನಿಯಮದ ಪ್ರಕಾರ, ಅಭ್ಯರ್ಥಿಯು ಉತ್ತರವನ್ನು ಗುರುತಿಸದೆ ಹಾಗೂ 5ನೇ ವೃತ್ತವನ್ನೂ ಶೇಡ್ ಮಾಡದೆ ಪ್ರಶ್ನೆಯನ್ನು ಸಂಪೂರ್ಣವಾಗಿ ಖಾಲಿ ಬಿಟ್ಟರೆ, ಆ ಪ್ರಶ್ನೆಗೆ ನಿಗದಿತವಾಗಿರುವ ಅಂಕದ 1/4 ರಷ್ಟು (0.25) ಅಂಕಗಳನ್ನು ದಂಡವಾಗಿ ಕಡಿತಗೊಳಿಸಲಾಗುತ್ತದೆ. ಹೀಗಾಗಿ, ಅಭ್ಯರ್ಥಿಗಳು ಪ್ರತಿಯೊಂದು ಪ್ರಶ್ನೆಗೂ ಕಡ್ಡಾಯವಾಗಿ ಪ್ರತಿಕ್ರಿಯಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜತೆಗೆ, ತಪ್ಪು ಉತ್ತರಗಳಿಗೂ ನೆಗೆಟಿವ್ ಮಾರ್ಕಿಂಗ್ ಅನ್ವಯವಾಗಲಿದೆ.
ಹೆಚ್ಚಿನ ಮಾಹಿತಿಗೆ ಹಾಗೂ ಅಧಿಕೃತ ಅಧಿಸೂಚನೆಗಳಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

