
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗ
KEA Exam | ಪರೀಕ್ಷೆ ಮುಗಿದ ಒಂದೇ ಗಂಟೆಯಲ್ಲಿ ಓಎಂಆರ್ ಶೀಟ್ ಪ್ರಕಟ; ಕೆಪಿಎಸ್‌ಸಿಗೂ ಕೆಇಎ ಅನುಸರಿಸಲು ಒತ್ತಾಯ
ಬೆಂಗಳೂರಿನ 2 ಮತ್ತು ಧಾರವಾಡದ 3 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಮುಗಿದ ತಕ್ಷಣವೇ ಆಯಾ ಕೇಂದ್ರಗಳಿಂದ ಓಎಂಆರ್ ಉತ್ತರ ಪತ್ರಿಕೆಗಳನ್ನು ತಂದು ಸ್ಕ್ಯಾನ್ ಮಾಡಲಾಯಿತು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹೊಸ ದಾಖಲೆ ಬರೆದಿದೆ.
ಶುಕ್ರವಾರ ನಡೆದ ಲಿಖಿತ ಪರೀಕ್ಷೆ ಮುಗಿದ ಕೇವಲ ಒಂದು ಗಂಟೆಯಲ್ಲೇ ಅಭ್ಯರ್ಥಿಗಳ ಎಲ್ಲಾ ಓಎಂಆರ್ (OMR) ಶೀಟ್‌ಗಳನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಪಾರದರ್ಶಕತೆಗೆ ಸಾಕ್ಷಿಯಾಗಿದೆ.
ಬೆಂಗಳೂರಿನ 2 ಮತ್ತು ಧಾರವಾಡದ 3 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಗಳಲ್ಲಿ ಪರೀಕ್ಷೆಗಳು ನಡೆದವು. ಪರೀಕ್ಷೆ ಮುಗಿದ ತಕ್ಷಣವೇ ಆಯಾ ಕೇಂದ್ರಗಳಿಂದ ಓಎಂಆರ್ ಉತ್ತರ ಪತ್ರಿಕೆಗಳನ್ನು ತಂದು ಸ್ಕ್ಯಾನ್ ಮಾಡಲಾಯಿತು. ಬಳಿಕ ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಪರೀಕ್ಷಾ ಕೇಂದ್ರವಾರು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ.
"ಪರೀಕ್ಷೆ ಮುಗಿದ ಕ್ಷಣದಿಂದಲೇ ಕಾರ್ಯಪ್ರವೃತ್ತರಾದ ತಂಡವು ದಾಖಲೆ ಸಮಯದಲ್ಲಿ ಸ್ಕ್ಯಾನಿಂಗ್ ಪ್ರಕ್ರಿಯೆ ಮುಗಿಸಿದೆ. ಯಾರು ಬೇಕಾದರೂ ಈಗ ವೆಬ್‌ಸೈಟ್‌ನಲ್ಲಿ ತಮ್ಮ ಉತ್ತರ ಪತ್ರಿಕೆಗಳನ್ನು ವೀಕ್ಷಿಸಬಹುದು. ಇದು ಕೆಇಎ ಅಳವಡಿಸಿಕೊಂಡಿರುವ ಅತ್ಯಂತ ಪಾರದರ್ಶಕ ಕ್ರಮವಾಗಿದೆ" ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯಬಹುದಾದ ಅಕ್ರಮಗಳಿಗೆ ಕಡಿವಾಣ ಹಾಕಲು ಮತ್ತು ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿಸಲು ಕೆಇಎ ಕೈಗೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಇದೇ ಕ್ರಮವನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

