Job News | Dreaming of becoming a civil judge? You have a golden opportunity! Complete details are here
x

ಸಾಂದರ್ಭಿಕ ಚಿತ್ರ (ಎಐ ಆಧಾರಿತ ಚಿತ್ರ)

Job News | ಸಿವಿಲ್‌ ಜಡ್ಜ್‌ ಆಗುವ ಕನಸೇ? ನಿಮಗಿಲ್ಲಿದೆ ಸುವರ್ಣಾವಕಾಶ! ಇಲ್ಲಿದೆ ವಿವರ

ನ್ಯಾಯಾಲಯವು ಒಟ್ಟು 90 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲಿದ್ದು, ಇದರಲ್ಲಿ 15 ಹೊಸ ಹುದ್ದೆಗಳು ಮತ್ತು 75 ಬ್ಯಾಕ್‌ಲಾಗ್ (ಉಳಿಕೆ) ಹುದ್ದೆಗಳು ಸೇರಿವೆ.


Click the Play button to hear this message in audio format

ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನಾಂಕವಾಗಿದೆ.

ನ್ಯಾಯಾಲಯವು ಒಟ್ಟು 90 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಯನ್ನು ನಡೆಸಲಿದ್ದು, ಇದರಲ್ಲಿ 15 ಹೊಸ ಹುದ್ದೆಗಳು ಮತ್ತು 75 ಬ್ಯಾಕ್‌ಲಾಗ್ (ಉಳಿಕೆ) ಹುದ್ದೆಗಳು ಸೇರಿವೆ. ಈ ನೇಮಕಾತಿ ಪ್ರಕ್ರಿಯೆಯು ಉಚ್ಚ ನ್ಯಾಯಾಲಯದ ಮುಂದೆ ಬಾಕಿ ಇರುವ ವಿವಿಧ ರಿಟ್ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಲಾಗಿದೆ.

ಅರ್ಹತೆ ಮತ್ತು ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದಿರಬೇಕು. ಜೊತೆಗೆ, ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲರಾಗಿ ಅಥವಾ ಸರ್ಕಾರಿ ನ್ಯಾಯವಾದಿಯಾಗಿ ಕನಿಷ್ಠ ಮೂರು ವರ್ಷಗಳ ನಿರಂತರ ವೃತ್ತಿ ಅನುಭವ ಹೊಂದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 43 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಮಾಜಿ ಸೈನಿಕರಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ವಯೋಮಿತಿ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ

ನೇಮಕಾತಿಯು ಮೂರು ಹಂತದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಪೂರ್ವಭಾವಿ ಪರೀಕ್ಷೆಯು 100 ಅಂಕಗಳ ವಸ್ತುನಿಷ್ಠ ಮಾದರಿಯ ಪರೀಕ್ಷೆಯಾಗಿದ್ದು, ಮುಖ್ಯ ಲಿಖಿತ ಪರೀಕ್ಷೆಯಲ್ಲಿ ಭಾಷಾಂತರ, ಕಾನೂನು ಪತ್ರಿಕೆಗಳು, ಸಿವಿಲ್ ಮತ್ತು ಕ್ರಿಮಿನಲ್ ತೀರ್ಪು ಬರೆಯುವ ಕೌಶಲ್ಯ ಪರೀಕ್ಷೆ ಒಳಗೊಂಡಿರುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಅಂತಿಮವಾಗಿ ಮೌಖಿಕ ಸಂದರ್ಶನ ನಡೆಯಲಿದೆ. ಇದರ ಜತೆಗೆ 25 ಅಂಕಗಳ ಕಂಪ್ಯೂಟರ್ ಜ್ಞಾನದ ಪರೀಕ್ಷೆಯನ್ನು ನಡೆಸಲಾಗುವುದು. ಈ ಅಂಕಗಳು ಅಂತಿಮ ಆಯ್ಕೆಯ ಒಟ್ಟು ಅಂಕಗಳಿಗೆ ಸೇರ್ಪಡೆಯಾಗುವುದಿಲ್ಲ, ಆದರೆ ಅಭ್ಯರ್ಥಿಯ ಅರ್ಹತೆಯನ್ನು ನಿರ್ಧರಿಸಲು ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪರಿವೀಕ್ಷಣ ಅವಧಿ ಮತ್ತು ತರಬೇತಿ

ಆಯ್ಕೆಯಾದ ಅಭ್ಯರ್ಥಿಯು, ಪ್ರಾರಂಭದಲ್ಲಿ ಎರಡು ವರ್ಷಗಳ ಅವಧಿಗೆ ಅಥವಾ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ ಮತ್ತು ನೇಮಕಗೊಂಡ ಅಭ್ಯರ್ಥಿಗಳು ನ್ಯಾಯಾಲಯದ ಪೀಠವನ್ನು ವಹಿಸಿಕೊಳ್ಳುವುದಕ್ಕೂ ಮೊದಲು, ಒಂದು ವರ್ಷಕ್ಕಿಂತ ಕಡಿಮೆಯಲ್ಲದ ಅವಧಿಯ ತರಬೇತಿಯನ್ನು ಕಡ್ಡಾಯವಾಗಿ ಪಡೆಯಬೇಕು. 1974 ರ ಅನುಸಾರವಾಗಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗತಕ್ಕದ್ದು ಎಂದು ಸೂಚಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ ?

ಅಭ್ಯರ್ಥಿಯು https://judiciary.karnataka.gov.in//ತಾಣಕ್ಕೆ ಭೇಟಿ ನೀಡಿ, ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳು ಎಲ್ಲಾ ರೀತಿಯಲ್ಲೂ ಸರಿಯಾಗಿದೆಯೆಂದು ಖಚಿತಪಡಿಸಿಕೊಂಡ ನಂತರ ಅರ್ಜಿಯನ್ನು ಸಲ್ಲಿಸತಕ್ಕದ್ದು. ಆನ್‌ಲೈನ್ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಯು ಅಂತಿಮವಾಗಿ ಅರ್ಜಿಯನ್ನು ಸಲ್ಲಿಸುವ ಮೊದಲು, ಒದಗಿಸಿದ ಮಾಹಿತಿಯು ಎಲ್ಲಾ ರೀತಿಯಲ್ಲೂ ಸರಿಯಾಗಿದೆಯೇ ಹಾಗೂ ಅಗತ್ಯ ಶುಲ್ಕವನ್ನು ಪಾವತಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಜಿಯ ಪ್ರತಿಯನ್ನು ಸಹ ಮುದ್ರಣ ಮಾಡಿಟ್ಟುಕೊಳ್ಳಬೇಕು.

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಗೆ 1 ಸಾವಿರ ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-I ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 500 ರೂ. ಶುಲ್ಕವನ್ನು ಸಂದಾಯ ಮಾಡತಕ್ಕದ್ದು. ಒಮ್ಮೆ ಸಂದಾಯ ಮಾಡಿದ ಶುಲ್ಕವನ್ನು ಯಾವುದೇ ಸಂದರ್ಭಗಳಲ್ಲೂ ಮರುಪಾವತಿಸುವುದಿಲ್ಲ. ನಿಗದಿತ ಶುಲ್ಕವನ್ನು ಪಾವತಿಸದೇ ಹಾಗೂ ನಿಗದಿತ ದಿನಾಂಕದಂದು ಅಂತಿಮವಾಗಿ ಸಲ್ಲಿಸಲಾಗದ ಅರ್ಜಿಗಳನ್ನು ಅಪೂರ್ಣವಾದ ಅರ್ಜಿಗಳು ಎಂದು ಪರಿಗಣಿಸಲಾಗುವುದು ಮತ್ತು ಅಂತಹ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸಿವಿಲ್ ನ್ಯಾಯಾಧೀಶರುಗಳ ನೇಮಕಾತಿ ಸಮಿತಿಯ ಮಹಾವಿಲೇಖನಾಧಿಕಾರಿ ಹಾಗೂ ಕಾರ್ಯದರ್ಶಿ ನ್ಯಾ. ಕೆ.ಎಸ್. ಭರತ್ ಕುಮಾರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story