
ಭಾರತೀಯ ರೈಲ್ವೆ
ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, 10ನೇ ತರಗತಿ ಪಾಸಾದವರಿಗೆ ಸುವರ್ಣ ಅವಕಾಶ: ಸಂಪೂರ್ಣ ವಿವರ ಇಲ್ಲಿದೆ
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಹುದ್ದೆಗಳ ವಿವರ, ಅರ್ಹತೆ, ದೈಹಿಕ ದಕ್ಷತೆ ಪರೀಕ್ಷೆ ಅವಶ್ಯಕತೆಗಳನ್ನು ಈ ವರದಿಯಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಹತ್ತನೇ ತರಗತಿ ಪೂರೈಸಿರುವ ಉದ್ಯೋಗಾಂಕ್ಷಿಗಳಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ದೇಶದಾದ್ಯಂತ ಇರುವ ಆರು ವಲಯಗಳಲ್ಲಿ 21,997 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನಾಂಕ.
ಡ್ರೈವ್ ಟ್ರ್ಯಾಕ್ ಮೇಂಟೇನರ್, ಅಸಿಸ್ಟೆಂಟ್ ಪಾಯಿಂಟ್‌ಮನ್ ಮತ್ತು ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಎಸ್ ಆ್ಯಂಡ್ ಟಿ ಇಲಾಖೆಗಳಲ್ಲಿ ಸಹಾಯಕರಂತಹ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಕೊನೆಯ ಕ್ಷಣದ ಸರ್ವರ್ ಸಮಸ್ಯೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಖಾಲಿ ಹುದ್ದೆಗಳ ವಿವರ, ಅರ್ಹತೆ, ದೈಹಿಕ ದಕ್ಷತೆ ಪರೀಕ್ಷೆ ಅವಶ್ಯಕತೆಗಳನ್ನು ಈ ವರದಿಯಲ್ಲಿ ವಿವರಿಸಲಾಗಿದೆ.
ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯ ಸಂಕ್ಷಿಪ್ತ ಮಾಹಿತಿ ಪರಿಶೀಲಿಸಬೇಕು. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದೈಹಿಕ ದಕ್ಷತೆ ಪರೀಕ್ಷೆ (PET), ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.
ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೇಂದ್ರ ರೈಲ್ವೆ ಮುಂಬೈನಲ್ಲಿ ಟ್ರ್ಯಾಕ್ ನಿರ್ವಹಣೆ, ಪಾಯಿಂಟ್‌ಮನ್, ಸಹಾಯಕ ಹುದ್ದೆ, ಉತ್ತರ ರೈಲ್ವೆ ನವದೆಹಲಿಯಲ್ಲಿ ಎಂಜಿನಿಯರಿಂಗ್, ಎಸ್ ಆ್ಯಂಡ್ ಟಿ, ಮೆಕ್ಯಾನಿಕಲ್ ಹುದ್ದೆಗಳು, ಪಶ್ಚಿಮ ರೈಲ್ವೆ ಮುಂಬೈನಲ್ಲಿ ವಿದ್ಯುತ್, ಸಂಚಾರ ಮತ್ತು ಸೇತುವೆ ಸಹಾಯಕರ ಹುದ್ದೆಗಳು, ಪೂರ್ವ ರೈಲ್ವೆ ಹಾಗೂ ಮೆಟ್ರೋ ರೈಲ್ವೆ ಕೋಲ್ಕತ್ತಾದಲ್ಲಿ ಹಲವು ಹುದ್ದೆಗಳನ್ನು ಒಳಗೊಂಡಿದೆ. ದಕ್ಷಿಣ ರೈಲ್ವೆ ಚೆನ್ನೈ, ಕೇರಳದಲ್ಲಿ ಹಾಗೂ ವಾಯುವ್ಯ ರೈಲ್ವೆ ಜೈಪುರದಲ್ಲಿ ಎಂಜಿನಿಯರಿಂಗ್ ಮತ್ತು ಸಂಚಾರ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10 ನೇ ತರಗತಿ (ಮೆಟ್ರಿಕ್ಯುಲೇಷನ್) ಉತ್ತೀರ್ಣ ಅಥವಾ ಎನ್‌ಸಿವಿಟಿ ಹಾಗೂ ಎಸ್‌ಸಿವಿಟಿಯಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐಟಿಐ ಉತ್ತೀರ್ಣರಾಗಿರಬೇಕು. ಅಪ್ರೆಂಟಿಸ್‌ಗಳಿಗೆ ಎನ್‌ಸಿಟಿವಿಯಿಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಹೊಂದಿರುವ ಅಭ್ಯರ್ಥಿಗಳು ಸಹ ಅರ್ಹರು. ಆದರೆ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಯೋಮಿತಿ
ಅರ್ಜಿ ಸಲ್ಲಿಸಲು ಬಯಸವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿರಬೇಕು, ಗರಿಷ್ಠ 33 ವರ್ಷಗಳು ದಾಟಿರಬಾರದು. ಹಿಂದುಳಿದ ವರ್ಗಗಳಿಗೆ 36 ವರ್ಷಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ೩೮ ವರ್ಷ ಗರಿಷ್ಠ ವಯೋಮಿತಿ.
ವೈದ್ಯಕೀಯ ಮಾನದಂಡಗಳು
ಅಭ್ಯರ್ಥಿಗಳು ರೈಲ್ವೆ ಆಡಳಿತವು ನಡೆಸುವ ವೈದ್ಯಕೀಯ ಫಿಟ್‌ನೆಸ್ (ದೃಷ್ಟಿ ಸಾಮರ್ಥ್ಯ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
* A-2 ಹಾಗೂ A-3: ಉನ್ನತ ದೃಷ್ಟಿ ಮಾನದಂಡಗಳು (ದೂರ ದೃಷ್ಟಿ 6/9).
* B-1 ಹಾಗೂ C-1: ಮಧ್ಯಮ ದೃಷ್ಟಿ ಮತ್ತು ದೈಹಿಕ ಸಾಮರ್ಥ್ಯ ಮಾನದಂಡಗಳು.
* LASIK ಶಸ್ತ್ರಚಿಕಿತ್ಸೆ ಹೊಂದಿರುವ ಅಭ್ಯರ್ಥಿಗಳು A-2 ಮತ್ತು A-3 ವೈದ್ಯಕೀಯ ಗುಣಮಟ್ಟದ ಹುದ್ದೆಗಳಿಗೆ ಅರ್ಹರಲ್ಲ.
ಸಂಬಳ ಮತ್ತು ಪ್ರಯೋಜನಗಳು
ಆಯ್ಕೆಯಾದ ಅಭ್ಯರ್ಥಿಗಳು 7ನೇ ವೇತನ ಆಯೋಗದ ಹಂತ 1ರ ಅಡಿಯಲ್ಲಿ ಸಂಬಳವನ್ನು ಪಡೆಯುತ್ತಾರೆ. ಮೂಲ ವೇತನ ತಿಂಗಳಿಗೆ 18,000 ರೂ. ನಿಗದಿಪಡಿಸಲಾಗಿದ್ದು, ಪ್ರಸ್ತುತ ಮೂಲ ಭತ್ಯೆಯ ಅಂದಾಜು ಶೇ. 50 ತುಟ್ಟಿ ಭತ್ಯೆ, ನಗರವನ್ನು ಅವಲಂಬಿಸಿ ಶೇ.9, ಶೇ18, ಅಥವಾ ಶೇ.27 ಮನೆ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ. ಗ್ರೂಪ್ ಡಿ ಉದ್ಯೋಗಿಗೆ ಸಾಮಾನ್ಯವಾಗಿ ಆರಂಭದಲ್ಲಿ ತಿಂಗಳಿಗೆ 28,000 ರಿಂದ 32,000 ರೂ. ರವರೆಗೆ ಸಂಬಳವಿರುತ್ತದೆ. ಪ್ರಯಾಣಕ್ಕಾಗಿ ರೈಲ್ವೆ ಪಾಸ್, ವೈದ್ಯಕೀಯ ಆರೈಕೆ (ರೈಲ್ವೆ ಆಸ್ಪತ್ರೆ), ಪಿಂಚಣಿ (ಎನ್‌ಪಿಎಸ್) ಒದಗಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ
ನೇಮಕಾತಿ ಮೂರು ಮುಖ್ಯ ಹಂತಗಳನ್ನು ಒಳಗೊಂಡಿದೆ. ಮುಂದಿನ ಹಂತಕ್ಕೆ ಹೋಗಲು ಅಭ್ಯರ್ಥಿಗಳು ಪ್ರತಿ ಹಂತದಲ್ಲೂ ಉತ್ತೀರ್ಣರಾಗಿರಬೇಕು.
ಹಂತ 1: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
* ಅವಧಿ: 90 ನಿಮಿಷಗಳು
* ಒಟ್ಟು ಪ್ರಶ್ನೆಗಳು: 100
* ನಕಾರಾತ್ಮಕ ಅಂಕ: ಪ್ರತಿ ತಪ್ಪು ಉತ್ತರಕ್ಕೆ 1/3 ನೇ ಅಂಕವನ್ನು ಕಡಿತಗೊಳಿಸಲಾಗುತ್ತದೆ.
ಸಾಮಾನ್ಯ ವಿಜ್ಞಾನ (10 ನೇ ತರಗತಿ ಹಂತದ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ) 25 ಅಂಕ, ಗಣಿತ (ಅಂಕಗಣಿತ, ಬೀಜಗಣಿತ, ರೇಖಾಗಣಿತ)25 ಅಂಕ, ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ 30 ಅಂಕ, ಸಾಮಾನ್ಯ ಅರಿವು ಮತ್ತು ಪ್ರಚಲಿತ ವಿದ್ಯಮಾನಗಳು20 ಅಂಕ ಒಟ್ಟು 100 ಅಂಕಗಳಿಗೆ ಪರೀಕ್ಷೆ ನಿಗದಿಪಡಿಸಲಾಗಿದೆ.
ಹಂತ 2: ದೈಹಿಕ ದಕ್ಷತೆ ಪರೀಕ್ಷೆ
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು (ಖಾಲಿ ಹುದ್ದೆಗಳ 1: 3 ) ದೈಹಿಕ ಪರೀಕ್ಷೆಗೆ ಕರೆಯಲಾಗುವುದು.
* ಪುರುಷ ಅಭ್ಯರ್ಥಿಗಳು: 100 ಮೀಟರ್‌ಗೆ 2 ನಿಮಿಷಗಳಲ್ಲಿ ಓಡಬೇಕು. 35 ಕೆ.ಜಿ. ಯನ್ನು ಎತ್ತಿ 4 ನಿಮಿಷ 15 ಸೆಕೆಂಡುಗಳಲ್ಲಿ 1,000 ಮೀಟರ್ ಓಡಬೇಕು.
* ಮಹಿಳಾ ಅಭ್ಯರ್ಥಿಗಳು: 2 ನಿಮಿಷಗಳಲ್ಲಿ 100 ಮೀಟರ್ ಓಡಬೇಕು. 20 ಕೆ.ಜಿ. ಭಾರ ಎತ್ತಿ 5 ನಿಮಿಷ 40 ಸೆಕೆಂಡುಗಳಲ್ಲಿ 1,000 ಮೀಟರ್ ಓಡಬೇಕು.
ಹಂತ 3: ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
CBT ಯಲ್ಲಿನ ಕಾರ್ಯಕ್ಷಮತೆ ಮತ್ತು PET ಯಲ್ಲಿ ಅರ್ಹತೆ ಪಡೆದ ಆಧಾರದ ಮೇಲೆ, ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ
ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿದೆ. ನಿಮ್ಮ ಫಾರ್ಮ್ ಅನ್ನು ಸ್ವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಈ ಹಂತಗಳನ್ನು ಅನುಸರಿಸಿ
ನೋಂದಣಿ: ಅಧಿಕೃತ ಆರ್‌ಆರ್‌ಬಿ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು “CEN 09/2025 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ” ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಬಳಸಿ ಖಾತೆಯನ್ನು ರಚಿಸಿ.
ದೃಢೀಕರಣ: ನಿಮ್ಮ ಗುರುತನ್ನು ಪರಿಶೀಲಿಸಲು ಡಿಜಿಲಾಕರ್ ಅಥವಾ ಆಧಾರ್ ಬಳಸಿ. ಇದು ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಪರಿಶೀಲನೆ ವಿಳಂಬವನ್ನು ತಪ್ಪಿಸುತ್ತದೆ.
ವಿವರಗಳನ್ನು ಭರ್ತಿ ಮಾಡಿ: ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅಂಕಗಳು (ಮೆಟ್ರಿಕ್ಯುಲೇಷನ್/ಐಟಿಐ) ಮತ್ತು ನಿಮ್ಮ ಆದ್ಯತೆಯ ರೈಲ್ವೆ ವಲಯವನ್ನು ಎಚ್ಚರಿಕೆಯಿಂದ ಆರಿಸಿ (ಇದನ್ನು ನಂತರ ಬದಲಾಯಿಸಲಾಗುವುದಿಲ್ಲ).
ಅಪ್‌ಲೋಡ್‌ಗಳು: ಉತ್ತಮ ಗುಣಮಟ್ಟದ ಛಾಯಾಚಿತ್ರ ಮತ್ತು ನಿಮ್ಮ ಸಹಿಯನ್ನು ಅಪ್‌ಲೋಡ್ ಮಾಡಿ. ಉಚಿತ ಪ್ರಯಾಣ ಪಾಸ್ ಬೇಕಾದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಿ.
ಶುಲ್ಕ ಪಾವತಿ: ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಅಗತ್ಯ ಶುಲ್ಕವನ್ನು ಪಾವತಿಸಿ.
ಅಂತಿಮ ಸಲ್ಲಿಕೆ: ಅರ್ಜಿ ನಮೂನೆಯನ್ನು ವೀಕ್ಷಿಸಿ ಮತ್ತು ಸಲ್ಲಿಸಿ. ಅರ್ಜಿಯನ್ನು ಮುದ್ರಿಸಿಕೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

