
ಸಾಂದರ್ಭಿಕ ಚಿತ್ರ
NCC ವಿಶೇಷ ಪ್ರವೇಶ -2026: ಪರೀಕ್ಷೆಯಿಲ್ಲದೆ ಅಧಿಕಾರಿಯಾಗಲು ಸುವರ್ಣಾವಕಾಶ, 18 ಲಕ್ಷದವರೆಗೆ ವೇತನ!
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ. 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. ಎನ್‌ಸಿಸಿ 'C' ಪ್ರಮಾಣ ಪತ್ರದಲ್ಲಿ ಕನಿಷ್ಠ 'ಬಿ' ಗ್ರೇಡ್ ಪಡೆದಿರಬೇಕು.
ಭಾರತೀಯ ಸೇನೆಯು 2026 ಅಕ್ಟೋಬರ್ ತಿಂಗಳಿಂದ ಆರಂಭಿಸಲಿರುವ ತನ್ನ 124ನೇ NCC ವಿಶೇಷ ನೇಮಕಾತಿಗೆ ಅಧಿಕೃತ ಚಾಲನೆ ನೀಡಿದೆ. ಈ ವಿಶೇಷ ಪ್ರವೇಶದ ವಿಶೇಷತೆಯೆಂದರೆ, ಅಭ್ಯರ್ಥಿಗಳು ಯಾವುದೇ ಲಿಖಿತ ಪರೀಕ್ಷೆ (CDSE) ಎದುರಿಸುವ ಅಗತ್ಯವಿಲ್ಲ. ನೇರವಾಗಿ ಸಂದರ್ಶನದ ಮೂಲಕ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಬಹುದಾಗಿದೆ.
ಒಟ್ಟು 76 ಶಾರ್ಟ್ ಸರ್ವಿಸ್ ಕಮಿಷನ್ (SSC) ಹುದ್ದೆಗಳಲ್ಲಿ 70 ಹುದ್ದೆಗಳು ಪುರುಷರಿಗೆ, 6 ಹುದ್ದೆಗಳು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ. 16 ಕೊನೆಯ ದಿನಾಂಕವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕ್ಟೋಬರ್ ತಿಂಗಳಲ್ಲಿ ಚೆನ್ನೈನಲ್ಲಿ 49 ವಾರಗಳ ತರಬೇತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ. 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದ್ದು, ಎನ್‌ಸಿಸಿ 'C' ಪ್ರಮಾಣ ಪತ್ರದಲ್ಲಿ ಕನಿಷ್ಠ 'ಬಿ' ಗ್ರೇಡ್ ಪಡೆದಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸುವವರು ಜುಲೈ 1, 2026ಕ್ಕೆ ಅನ್ವಯವಾಗುವಂತೆ 19 ರಿಂದ 25 ವರ್ಷಗಳ ಒಳಗಿರಬೇಕು. (ಜುಲೈ 2, 2001 ಮತ್ತು ಜುಲೈ 1, 2007 ರ ನಡುವೆ ಜನಿಸಿರಬೇಕು). ಅವಿವಾಹಿತ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ವೇತನ ಮತ್ತು ಸೌಲಭ್ಯಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ 56,100 ಸ್ಟೈಫಂಡ್ ನೀಡಲಾಗುತ್ತದೆ. ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಂತರ ವಾರ್ಷಿಕ ಸುಮಾರು 17 ರಿಂದ 18 ಲಕ್ಷ ರೂ. ವೇತನ ಸಿಗಲಿದ್ದು, ಮಿಲಿಟರಿ ಸೇವಾ ವೇತನ (MSP), ಉಡುಗೆ ಭತ್ಯೆ, ಸಾರಿಗೆ ಮತ್ತು ಕ್ಷೇತ್ರ ಪ್ರದೇಶ ಭತ್ಯೆಗಳು ಲಭ್ಯವಿರುತ್ತವೆ. 1.25 ಕೋಟಿವರೆಗಿನ ಆರ್ಮಿ ಗ್ರೂಪ್ ವಿಮೆ ಸೌಲಭ್ಯ ದೊರೆಯಲಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಎನ್‌ಸಿಸಿ ‘ಸಿ’ ಪ್ರಮಾಣಪತ್ರಕ್ಕೆ (ಗರಿಷ್ಠ 50 ಅಂಕಗಳು) ಮತ್ತು ಪದವಿ (ಗರಿಷ್ಠ 50 ಅಂಕಗಳು) ಅನ್ನು ಒಟ್ಟುಗೂಡಿಸಿ 100 ರಲ್ಲಿ ಬೋನಸ್ ಅಂಕಗಳ ಆಧಾರದ ಮೇಲೆ ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಎನ್‌ಸಿಸಿ ‘ಎ’ ದರ್ಜೆಗೆ 50 ಅಂಕಗಳು ಮತ್ತು ‘ಬಿ’ ದರ್ಜೆಗೆ 25 ಅಂಕಗಳು ಸಿಗುತ್ತವೆ. ಮೇ 2026 ರ ಮೊದಲ ವಾರದಲ್ಲಿ ಶಾರ್ಟ್‌ಲಿಸ್ಟ್ ಮಾಡುವ ನಿರೀಕ್ಷೆಯಿದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮೇ ಅಥವಾ ಜೂನ್‌ನಲ್ಲಿ ಪ್ರಯಾಗ್‌ರಾಜ್, ಭೋಪಾಲ್, ಬೆಂಗಳೂರು ಅಥವಾ ಜಲಂಧರ್‌ನಲ್ಲಿರುವ ಆಯ್ಕೆ ಕೇಂದ್ರಗಳಲ್ಲಿ 5 ದಿನಗಳ ಸಂದರ್ಶನಕ್ಕೆ ಹಾಜರಾಗುತ್ತಾರೆ. ಎರಡು ಹಂತಗಳ ಸಂದರ್ಶನ ಹೊಂದಿದ್ದು, ಹಂತ I ರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಹಂತ II ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ಉತ್ತಿರ್ಣರಾದವರಿಗೆ ವೈದ್ಯಕೀಯ ತಪಾಸಣೆ ನಡೆಸಿ ಅಂತಿಮವಾಗಿ ಅರ್ಹರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಅಧಿಕೃತ ವೆಬ್‌ಸೈಟ್ www.joinindianarmy.nic.in ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

