
Agniveer Recruitment: 10ನೇ ತರಗತಿ ಪಾಸಾದವರಿಗೆ ಕನ್ನಡದಲ್ಲೂ ಪರೀಕ್ಷೆಗೆ ಅವಕಾಶ
ಹುದ್ದೆಯ ಆಧಾರದ ಮೇಲೆ 8ನೇ, 10ನೇ ಅಥವಾ 12ನೇ ತರಗತಿ ಪಾಸಾಗಿರಬೇಕು. ಜಿಡಿ ಹುದ್ದೆಗೆ 10ನೇ ತರಗತಿಯಲ್ಲಿ ಕನಿಷ್ಠ ಶೇ. 45 ಅಂಕಗಳು ಕಡ್ಡಾಯವಾಗಿ ಪಡೆದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಅರ್ಜಿ ಸಲ್ಲಿಸು ಸಂಪೂರ್ಣ ವಿವರ ಇಲ್ಲಿದೆ.
ಭಾರತೀಯ ಸೇನೆಯು 'ಅಗ್ನಿಪಥ್' ಯೋಜನೆಯಡಿ 2026ನೇ ಸಾಲಿನ ಅಗ್ನಿವೀರ್ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ದೇಶಾದ್ಯಂತ ಸುಮಾರು 25,000ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದ್ದು, ಫೆಬ್ರವರಿ 13ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಯಾವ್ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ ?
ಅಗ್ನಿವೀರ್ ಜನರಲ್ ಡ್ಯೂಟಿ, ತಾಂತ್ರಿಕ, ಕ್ಲರ್ಕ್ ಅಥವಾ ಸ್ಟೋರ್ ಕೀಪರ್ ಹಾಗೂ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 17.5 ವರ್ಷದಿಂದ 22 ವರ್ಷದೊಳಗಿನ ಅವಿವಾಹಿತ ಯುವಕ ಹಾಗೂ ಯುವತಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕಡ್ಡಾಯವಾಗಿ 2005 ಜುಲೈ 1 ರಿಂದ 2009 ಜುಲೈ 1 ರ ನಡುವೆ ಜನಿಸಿರಬೇಕು. ಹುದ್ದೆಯ ಆಧಾರದ ಮೇಲೆ 8ನೇ, 10ನೇ ಅಥವಾ 12ನೇ ತರಗತಿ ಪಾಸಾಗಿರಬೇಕು. ಜಿಡಿ ಹುದ್ದೆಗೆ 10ನೇ ತರಗತಿಯಲ್ಲಿ ಕನಿಷ್ಠ ಶೇ. 45 ಅಂಕಗಳು ಕಡ್ಡಾಯವಾಗಿ ಪಡೆದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಹಂತ-1 : ಜೂ. 1 ರಿಂದ ಜೂ. 15ರವರೆಗೆ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನಡೆಯಲಿದೆ. ಇದು ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ, ಮಲಯಾಳಂ, ತಮಿಳು, ತೆಲುಗು, ಪಂಜಾಬಿ, ಒಡಿಯಾ, ಬಂಗಾಳಿ, ಉರ್ದು, ಗುಜರಾತಿ, ಮರಾಠಿ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಲಭ್ಯವಿರುತ್ತದೆ.
ಹಂತ-2 : ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು. ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುತ್ತದೆ.
ಸಂಬಳ ಮತ್ತು ಸೌಲಭ್ಯಗಳು
ಆಯ್ಕೆಯಾದ ಅಭ್ಯರ್ಥಿಗಲಿಗೆ ಮೊದಲ ವರ್ಷ ಮಾಸಿಕ 30 ಸಾವಿರದಿಂದ ಪ್ರಾರಂಭವಾಗಿ 4ನೇ ವರ್ಷದಲ್ಲಿ ಮಾಸಿಕ 40 ಸಾವಿರದವರೆಗೆ ಏರಿಕೆಯಾಗಲಿದೆ. 4 ವರ್ಷಗಳ ಯಶಸ್ವಿ ಸೇವೆಯ ನಂತರ ಬಡ್ಡಿಯೊಂದಿಗೆ ಸುಮಾರು 10.04 ಲಕ್ಷ ಮೊತ್ತವನ್ನು ತೆರಿಗೆ ರಹಿತವಾಗಿ ನೀಡಲಾಗುತ್ತದೆ. 48 ಲಕ್ಷದ ಜೀವ ವಿಮೆ, ಕ್ಯಾಂಟೀನ್ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತದೆ.
ಶೇ.25 ಅಗ್ನಿವೀರ್ ಸೇನೆಗೆ
ಆಯ್ಕೆಯಾದ ಅಭ್ಯರ್ಥಿಗಳು 4 ವರ್ಷಗಳ ಸೇವೆಯ ನಂತರ, ಪ್ರತಿ ಬ್ಯಾಚ್‌ನ ಶೇ. 25 ಅಗ್ನಿವೀರ್ ಸೈನಿಕರನ್ನು ಅವಶ್ಯಕತೆಗಳ ಆಧಾರದ ಮೇಲೆ ಭಾರತೀಯ ಸೇನೆಗೆ ಶಾಶ್ವತವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?
* ಅರ್ಜಿ ಸಲ್ಲಿಸಲು ಏ.1 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಅಧಿಕೃತ ವೆಬ್‌ಸೈಟ್ joinindianarmy.nic.in ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
* ದಾಖಲಾತಿ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ರೊಫೈಲ್ ರಚಿಸಬೇಕು.
* ನಿಮ್ಮ ಅರ್ಹತೆಗಳ ಆಧಾರದ ಮೇಲೆ ಎರಡು ಅಗ್ನಿವೀರ್ ವಿಭಾಗಗಳನ್ನು ಆಯ್ಕೆಮಾಡಿಕೊಂಡು, ಎಲ್ಲಾ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆಗಳು ಮತ್ತು ಸರಿಯಾದ ಎತ್ತರ ಭರ್ತಿ ಮಾಡಿ
* ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ.
* ನಿಮ್ಮ ಆದ್ಯತೆಯ ಐದು ಪರೀಕ್ಷಾ ಕೇಂದ್ರವನ್ನು ಆಯ್ಕೆಮಾಡಿ.
* ಕ್ರೆಡಿಟ್, ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಪ್ರತಿ ಹುದ್ದೆಗೆ 250 ರೂ. ಪರೀಕ್ಷಾ ಶುಲ್ಕವನ್ನು ಪಾವತಿಸಿ, ನಿಮ್ಮ ಅರ್ಜಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಸಲ್ಲಿಸಿ.

