Want to wear a blue uniform and soar in the sky? Apply today for Agniveer recruitment in the Air Force
x
ಭಾರತೀಯ ವಾಯುಸೇನೆ (ಸಾಂದರ್ಭಿಕ ಚಿತ್ರ)

ನೀಲಿ ಸಮವಸ್ತ್ರ ಧರಿಸಿ ಆಕಾಶದಲ್ಲಿ ಹಾರಾಡಬೇಕೇ? ವಾಯುಪಡೆಯಲ್ಲಿ ಅಗ್ನಿವೀರ್ ನೇಮಕಾತಿಗೆ ಇಂದೇ ಅರ್ಜಿ ಸಲ್ಲಿಸಿ

ನೇಮಕಾತಿಯನ್ನು ಕೇಂದ್ರ ವಾಯುಪಡೆ ಆಯ್ಕೆ ಮಂಡಳಿ (CASB) ನಡೆಸುತ್ತದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ನ್ಯಾಯಯುತ, ಪಾರದರ್ಶಕ ಮತ್ತು ಅರ್ಹತೆ ಆಧಾರಿತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Click the Play button to hear this message in audio format

ನೀಲಿ ಸಮವಸ್ತ್ರ ಧರಿಸಿ ಆಕಾಶದಲ್ಲಿ ಹಕ್ಕಿಯಂತೆ ಹಾರಾಡಬೇಕು ಎಂದು ಕನಸುಕಾಣುತ್ತಿರುವ ಯುವಕರಿಗೆ ಭಾರತೀಯ ವಾಯುಪಡೆ (IAF) ಸುವರ್ಣ ಅವಕಾಶ ನೀಡಿದೆ. ಅಗ್ನಿಪಥ ಯೋಜನೆಯಡಿಯಲ್ಲಿ ಅಧಿಸೂಚೆನೆ ಹೊರಡಿಸಿದ್ದು, ಫೆ.8ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

ಯುವ ಆಕಾಂಕ್ಷಿಗಳು ವಿಶ್ವ ದರ್ಜೆಯ ವಾಯುಪಡೆಗೆ ಸೇರಲು ಇದೊಂದು ಅವಕಾಶವಾಗಿದ್ದು, ಸಂಬಳ, ಸಮಗ್ರ ವಿಮಾ ರಕ್ಷಣೆ ಮತ್ತು ಸೇವಾ ನಿಧಿ ಪ್ಯಾಕೇಜ್ ಮೂಲಕ ಸುರಕ್ಷಿತ ಭವಿಷ್ಯವೂ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತೀಯ ವಾಯುಪಡೆಯು ಭಾರತೀಯ ಸಶಸ್ತ್ರ ಪಡೆಗಳ ವಾಯುಪಡೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಪ್ರಾಬಲ್ಯಕ್ಕೆ ಹೆಸರುವಾಸಿ. ಈ ನೇಮಕದ ಅಡಿಯಲ್ಲಿ, ಆಯ್ಕೆಯಾದ ಅಭ್ಯರ್ಥಿಗಳನ್ನು ನಾಲ್ಕು ವರ್ಷಗಳ ಅವಧಿಗೆ "ಅಗ್ನಿವೀರವಾಯು" ಎಂದು ದಾಖಲಿಸಲಾಗುತ್ತದೆ. ನೇಮಕಾತಿಯನ್ನು ಕೇಂದ್ರ ವಾಯುಪಡೆ ಆಯ್ಕೆ ಮಂಡಳಿ (CASB) ನಡೆಸುತ್ತದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ನ್ಯಾಯಯುತ, ಪಾರದರ್ಶಕ ಮತ್ತು ಅರ್ಹತೆ ಆಧಾರಿತವಾಗಿದೆ ಎಂದು ತಿಳಿಸಿದೆ.

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ. 50 ಅಂಕಗಳೊಂದಿಗೆ ಮತ್ತು ಇಂಗ್ಲಿಷ್‌ನಲ್ಲಿ ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಎಂಜಿನಿಯರಿಂಗ್‌ನಲ್ಲಿ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್ಸ್ಟ್ರುಮೆಂಟೇಶನ್, ಮಾಹಿತಿ ತಂತ್ರಜ್ಞಾನ) ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಶೇ. 50 ಮತ್ತು ಇಂಗ್ಲಿಷ್‌ನಲ್ಲಿ ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ವಯೋಮಿತಿ

ಅರ್ಜಿ ಸಲ್ಲಸುವ ಅಭ್ಯರ್ಥಿಗಳು ಕನಿಷ್ಠ 17.5 ವರ್ಷ ಹಾಗೂ ಗರಿಷ್ಠ 21 ವರ್ಷಗಳೊಳಗಿರಬೇಕು. ಜನವರಿ 1, 2006 ರಿಂದ ಜುಲೈ 1, 2009 ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ವೈದ್ಯಕೀಯ ಮತ್ತು ದೈಹಿಕ ಮಾನದಂಡಗಳು

* ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕನಿಷ್ಠ 152 ಸೆಂ.ಮೀ ಎತ್ತರ ಇರಬೇಕು. ಉತ್ತರಾಖಂಡದ ಈಶಾನ್ಯ, ಗುಡ್ಡಗಾಡು ಪ್ರದೇಶಗಳ ಅಭ್ಯರ್ಥಿಗಳು 147 ಸೆಂ.ಮೀ ಹಾಗೂ ಲಕ್ಷದ್ವೀಪದ ಅಭ್ಯರ್ಥಿಗಳು 150 ಸೆಂ.ಮೀ. ಎತ್ತ ಹೊಂದಿರಬೇಕು.

* ಪುರುಷ ಅಭ್ಯರ್ಥಿಗಳು ತಮ್ಮ ಎದೆಯ ಸುತ್ತಳತೆಯನ್ನು ಕನಿಷ್ಠ 5 ಸೆಂ.ಮೀ. ವಿಸ್ತರಣೆ ಮಾಡಬೇಕು.

* ಸಾಮಾನ್ಯವಾಗಿ 6 ಮೀಟರ್‌ನಿಂದ ಪಿಸುಮಾತು ಕೇಳಲು ಸಾಧ್ಯವಾಗುವಂತಹ ಶ್ರವಣಶಕ್ತಿ ಹೊಂದಿರಬೇಕು.

* ಪ್ರತಿ ಕಣ್ಣಿಗೆ 6/12, 6/6 ದೃಷ್ಟಿ ಹೊಂದಿರಬೇಕು. ಲಸಿಕ್ ಅಥವಾ ಪಿಆರ್‌ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವವರು ಅರ್ಜಿ ಸಲ್ಲಿಸಲು ಅನುಮತಿ ಇಲ್ಲ.

* ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿ ತೂಕ ಹೊಂದಿರಬೇಕು.

ಸಂಬಳ ಮತ್ತು ಭತ್ಯೆ

ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗ್ನಿಪಥ ಯೋಜನೆಯಡಿ ವಿಶೇಷ ಪ್ಯಾಕೇಜ್‌ ಘೋಷಿಸಲಾಗಿದ್ದು, ಅಭ್ಯರ್ಥಿಯ ಅಧಿಕಾರಾವಧಿಯಲ್ಲಿ ಪ್ರತಿ ವರ್ಷ ಹೆಚ್ಚಾಗುವ ಕಸ್ಟಮೈಸ್ಡ್​ ಮಾಡಿದ ಪ್ಯಾಕೇಜ್ ನೀಡಲಾಗುತ್ತದೆ. ಒಟ್ಟು ಪ್ಯಾಕೇಜ್ ಮೊದಲ ವರ್ಷದಲ್ಲಿ ತಿಂಗಳಿಗೆ 30 ಸಾವಿರ ರೂ. ರಿಂದ ಪ್ರಾರಂಭವಾಗುತ್ತದೆ ಮತ್ತು ನಾಲ್ಕನೇ ವರ್ಷದಲ್ಲಿ ತಿಂಗಳಿಗೆ 40 ಸಾವಿರವರೆಗೆ ಹೆಚ್ಚಾಗುತ್ತದೆ.

* 1 ನೇ ವರ್ಷದ ಒಟ್ಟು 30 ಸಾವಿರ ಮೊತ್ತದಲ್ಲಿ 21 ಸಾವಿರ ಪಡೆಯಬಹುದಾಗಿದ್ದು, ಉಳಿದ 9 ಸಾವಿರ ಹಣವನ್ನು ಅಗ್ನಿವೀರ್ ನಿಧಿಗೆ ಕೊಡುಗೆಯಾಗಿ ನೀಡಲಾಗುತ್ತದೆ.

* 2ನೇ ವರ್ಷ ಒಟ್ಟು 33 ಸಾವಿರ ಮೊತ್ತದಲ್ಲಿ 23 ಸಾವಿರ ಪಡೆಯಬಹುದಾಗಿದ್ದು, 9 ಸಾವಿರ ನಿಧಿಗೆ ಕೊಡಲಾಗುತ್ತದೆ.

* 3ನೇ ವರ್ಷದಲ್ಲಿ ಒಟ್ಟು 36,500 ರೂ. ಸಂಬಳದಲ್ಲಿ 25,550 ರೂ. ಸಂಬಳ ಪಡೆಯಲಿದ್ದು, 10,950 ರೂ. ನಿಧಿಗೆ ವರ್ಗಾಯಿಸಲಾಗುತ್ತದೆ.

* 4ನೇ ವರ್ಷದಲ್ಲಿ 40 ಸಾವಿರ ಸಂಬಳ ದೊರೆಯಲಿದ್ದು, 28 ಸಾವಿರ ಸಂಬಳ ಪಡೆಯಲಿದ್ದು, 12 ಸಾವಿರ ನಿಧಿಗೆ ನೀಡಲಾಗುವುದು.

ಸೇವಾ ನಿಧಿ ಪ್ಯಾಕೇಜ್ 4 ವರ್ಷಗಳ ಅವಧಿ ಪೂರ್ಣಗೊಂಡ ನಂತರ, ಅಭ್ಯರ್ಥಿಗಳು ಸುಮಾರು 10.04 ಲಕ್ಷಗಳ ಒಂದು ಬಾರಿಯ ಸೇವಾ ನಿಧಿ ಪ್ಯಾಕೇಜ್ ಪಡೆಯುತ್ತಾರೆ. ಈ ಮೊತ್ತವು ಕಾರ್ಪಸ್ ನಿಧಿಗೆ ನಿಮ್ಮ ಕೊಡುಗೆ, ಕೇಂದ್ರ ಸರ್ಕಾರದ ಕೊಡುಗೆ ಮತ್ತು ಸಂಗ್ರಹವಾದ ಬಡ್ಡಿಯನ್ನು ಒಳಗೊಂಡಿದೆ. ಮುಖ್ಯವಾಗಿ ಈ ಮೊತ್ತವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ.

ಹೆಚ್ಚುವರಿ ಭತ್ಯೆಗಳು ಮತ್ತು ಸವಲತ್ತುಗಳು

ಮಾಸಿಕ ಸಂಬಳದ ಜೊತೆಗೆ, ಅಗ್ನಿವೀರ್‌ ಸಿಬ್ಬಂದಿ ಐಎಎಫ್‌ ನಿಯಮಗಳ ಪ್ರಕಾರ ಅಪಾಯ ಮತ್ತು ಕಷ್ಟ ಭತ್ಯೆಗಳು, ಉಡುಗೆ ತೊಡುಗೆ ಭತ್ಯೆ ಮತ್ತು ಪ್ರಯಾಣ ಭತ್ಯೆಗೆ ಅರ್ಹರಾಗಿರುತ್ತಾರೆ. ಸೇವಾ ಅವಧಿಯಲ್ಲಿ ಕ್ಯಾಂಟೀನ್ ಸೌಲಭ್ಯಗಳು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಭಾರತೀಯ ವಾಯುಪಡೆಯ ಅಗ್ನಿವೀರ್ ವಾಯು ಆಯ್ಕೆ ಕಠಿಣವಾಗಿದೆ. ನಿಮ್ಮ ಮಾನಸಿಕ ಸಾಮರ್ಥ್ಯ, ದೈಹಿಕ ಸಹಿಷ್ಣುತೆ ಮತ್ತು ವೈದ್ಯಕೀಯ ಫಿಟ್‌ನೆಸ್‌ ಪರೀಕ್ಷಿಸಲು ಇದನ್ನು ಮೂರು ವಿಭಿನ್ನ ಹಂತಗಳಾಗಿ ವಿಂಗಡಿಸಲಾಗಿದೆ.

ಹಂತ I: ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆಯು 60 ನಿಮಿಷಗಳನ್ನು ಹೊಂದಿದ್ದು, ದ್ವಿತೀಯ ಪಿಯುಸಿ ಮಟ್ಟದ ಇಂಗ್ಲಿಷ್, ಭೌತಶಾಸ್ತ್ರ ಮತ್ತು ಗಣಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ವಿಜ್ಞಾನವನ್ನು ಹೊರತುಪಡಿಸಿ ಇತರ ವಿಷಯಗಳಿಗೆ 45 ನಿಮಿಷಗಳಲ್ಲಿ ಇಂಗ್ಲಿಷ್ ಮತ್ತು ತಾರ್ಕಿಕತೆ ಮತ್ತು ಸಾಮಾನ್ಯ ಜ್ಞಾನದ ಪ್ರಶ್ನೆಗಳಿರುತ್ತವೆ. ಪ್ರತಿ ಸರಿಯಾದ ಉತ್ತರಕ್ಕೆ ಒಂದು ಅಂಕ. ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಹಂತ II: ದೈಹಿಕ ಸಾಮರ್ಥ್ಯ

ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ 1600 ಮೀಟರ್‌ ಓಟವನ್ನು ಪುರುಷರು 7 ನಿಮಿಷ ಹಾಗೂ ಮಹಿಳೆಯರು 8 ನಿಮಿಷಗಳೊಳಗೆ ಪೂರ್ಣಗೊಳಿಸಬೇಕು. ಪುರುಷರು ಮೂರು ನಿಮಿಷದಲ್ಲಿ 10 ಪುಷ್-ಅಪ್‌ಗಳು, 10 ಸಿಟ್-ಅಪ್‌ಗಳು ಮತ್ತು 20 ಸ್ಕ್ವಾಟ್‌ಗಳು ಮಾಡಬೇಕು. ಮಹಿಳಾ ಅಭ್ಯರ್ಥಿಗಳು 2.5 ನಿಮಿಷದಲ್ಲಿ 10 ಸಿಟ್-ಅಪ್‌ಗಳು ಮತ್ತು 15 ಸ್ಕ್ವಾಟ್‌ಗಳು ಮಾಡಬೇಕು.

ಹಂತ III: ವೈದ್ಯಕೀಯ ಪರೀಕ್ಷೆ

ಅರ್ಹತಾ ಅಭ್ಯರ್ಥಿಗಳು ಗೊತ್ತುಪಡಿಸಿದ ವಾಯುಪಡೆಯ ವೈದ್ಯಕೀಯ ತಂಡಗಳಲ್ಲಿ ಸಮಗ್ರ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ರಕ್ತದ ಹೆಮೋಗ್ರಾಮ್, ಮೂತ್ರ ಪರೀಕ್ಷೆ, ಎಕ್ಸ್-ರೇ, ಇಸಿಜಿ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸಾ ವೈದ್ಯಕೀಯ ತಪಾಸಣೆಗಳು ಸೇರಿವೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

* ಅಭ್ಯರ್ಥಿಗಳು 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು, ಇತ್ತೀಚಿನ ಪಾಸ್‌ಪೋರ್ಟ್ ಫೋಟೋ, ಸಹಿ ಮತ್ತು ಎಡಗೈ ಹೆಬ್ಬೆರಳಿನ ಗುರುತನ್ನು ಸ್ಕ್ಯಾನ್ ಮಾಡಿ.

* ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ, “ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ” ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ಭೇಟಿ ನೀಡಿ.

* ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿ. ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಿಮ್ಮ ಇಮೇಲ್‌ಗೆ ಕಳುಹಿಸಲಾಗುತ್ತದೆ.

* ಅರ್ಜಿಯನ್ನು ಭರ್ತಿ ಮಾಡಿ, ಲಾಗಿನ್ ಮಾಡಿ ಮತ್ತು ನಿಮ್ಮ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರದ ಪ್ರಕಾರ ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ಸಂವಹನ ವಿವರಗಳನ್ನು ನಿಖರವಾಗಿ ನಮೂದಿಸಿ.

* ದಾಖಲೆಗಳನ್ನು ಅಪ್‌ಲೋಡ್ ಮಾಡಿ. ನಿಮ್ಮ ಫೋಟೋ (10-50 KB) ಇರಬೇಕು. ಸಹಿ, ಹೆಬ್ಬೆರಳಿನ ಗುರುತನ್ನು ಮತ್ತು ಪೋಷಕರ ಸಹಿ (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ) ಸ್ಕ್ಯಾನ್ ಮಾಡಿದ ಅಪ್‌ಲೋಡ್ ಮಾಡಿ.

* ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಬಳಸಿ 550 ರೂ. ಜೊತೆಗೆ ಜಿಎಸ್‌ಟಿ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು.

* ಅಂತಿಮವಾಗಿ ನಿಮ್ಮ ಅರ್ಜಿಯನ್ನು ವೀಕ್ಷಿಸಿ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Read More
Next Story