
ಬಿಇಎಲ್ ನೇಮಕಾತಿ 2026| ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಒಟ್ಟು 12 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿದ್ದು, ಸಾಮಾನ್ಯ ವರ್ಗಕ್ಕೆ 3, ಹಿಂದುಳಿದ ವರ್ಗಗಳಿಗೆ 4, ಪರಿಶಿಷ್ಟ ಜಾತಿಗೆ 3, ಪರಿಶಿಷ್ಟ ಪಂಗಡಕ್ಕೆ 1 ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ 1 ಹುದ್ದೆ ಮೀಸಲಿರಿಸಲಾಗಿದೆ.
ರಕ್ಷಣಾ ಸಚಿವಾಲಯದ ಅಡಿಯಲ್ಲಿನ ನವರತ್ನ ಸಾರ್ವಜನಿಕ ವಲಯದ ಉದ್ದಿಮೆಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಕೇರಳದಲ್ಲಿನ 'ಕೆ-ಫೋನ್' (K-FON) ಯೋಜನೆಗಾಗಿ ಗುತ್ತಿಗೆ ಆಧಾರದ ಮೇಲೆ ಪ್ರಾಜೆಕ್ಟ್ ಎಂಜಿನಿಯರ್-I ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾ.9 ರಂದು ಕೊನೆಯ ದಿನಾಂಕವಾಗಿದೆ.
ಒಟ್ಟು 12 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿದ್ದು, ಸಾಮಾನ್ಯ ವರ್ಗಕ್ಕೆ 3, ಹಿಂದುಳಿದ ವರ್ಗಗಳಿಗೆ 4, ಪರಿಶಿಷ್ಟ ಜಾತಿಗೆ 3, ಪರಿಶಿಷ್ಟ ಪಂಗಡಕ್ಕೆ 1 ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ 1 ಹುದ್ದೆ ಮೀಸಲಿರಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭದಲ್ಲಿ 3 ವರ್ಷ ಅವಧಿ ನಿಗದಿಪಡಿಸಿದ್ದು, ಗರಿಷ್ಠ 4 ವರ್ಷದವರೆಗೆ ವಿಸ್ತರಿಸುವ ಸಾಧ್ಯತೆ ಇದೆ.
ವೇತನ ಮತ್ತು ಭತ್ಯೆಗಳು
ಪ್ರಾಜೆಕ್ಟ್ ಎಂಜಿನಿಯರ್-I ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷ 40 ಸಾವಿರ, ಎರಡನೇ ವರ್ಷ 45 ಸಾವಿರ, ಮೂರನೇ ವರ್ಷ 50 ಸಾವಿರ, ನಾಲ್ಕನೇ ವರ್ಷ 55 ಸಾವಿರ ನಿಗದಿಪಡಿಸಿದ್ದು, ಹೆಚ್ಚುವರಿ ಸೌಲಭ್ಯವಾಗಿ ವಾರ್ಷಿಕ 12 ಸಾವಿರ ಭತ್ಯೆ (ವಿಮೆ, ಪಾದರಕ್ಷೆ ಇತ್ಯಾದಿ) ಮತ್ತು 4 ವರ್ಷ ಪೂರೈಸಿದ ನಂತರ 1 ಲಕ್ಷ ರೂ. ಬೋನಸ್ ಸಿಗಲಿದೆ.
ಅರ್ಹತಾ ಮಾನದಂಡಗಳು
ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಇ, ಬಿ.ಟೆಕ್, ಬಿ.ಎಸ್ಸಿ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಅಥವಾ ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಎಂಜಿನಿಯರಿಂಗ್ ನಾಲ್ಕು ವರ್ಷ ಪದವಿ ಪಡೆದಿರಬೇಕು. ಫೆ. 1ರ ವೇಳೆಗೆ ಕನಿಷ್ಠ 2 ವರ್ಷಗಳ ಕಾಲ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ
ಆರ್ಜಿ ಸಲ್ಲಿಸುವ ಸಾಮಾನ್ಯ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 32 ವರ್ಷ, ಹಿಂದುಳಿದ ವರ್ಗಗಳಿಗೆ 35 ವರ್ಷಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 37 ವರ್ಷಗಳು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 42 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ
ಅರ್ಹ ಅಭ್ಯರ್ಥಿಗಳನ್ನು ಎರಡು ಹಂತಗಳಲ್ಲಿ ಆಯ್ಕೆ ಮಾಡಲಿದ್ದು, 85 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನಕ್ಕೆ 15 ಅಂಕಗಳನ್ನು ನಿಗದಿಪಡಿಸಿದ್ದು, ಒಟ್ಟಾರೆ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತರು ಬಿಇಎಲ್ ಅಧಿಕೃತ ವೆಬ್‌ಸೈಟ್ www.bel-india.in ಗೆ ಭೇಟಿ ನೀಡಿ, ಮೈಕ್ರೋಸಾಫ್ಟ್ ಆಫೀಸ್ ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗ, ಹಿಂದುಳಿದ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 472 ರೂ. ಅರ್ಜಿ ಶುಲ್ಕು ನಿಗದಿಪಡಿಸಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

