
ಸಾಂದರ್ಭಿಕ ಚಿತ್ರ
Job News | ಅಂಡಮಾನ್ ಅರಣ್ಯ ಇಲಾಖೆಯಲ್ಲಿ 196 ಹುದ್ದೆಗಳಿಗೆ ಅರ್ಜಿ ಆಹ್ವಾನ, ಲಿಖಿತ ಪರೀಕ್ಷೆ ಇಲ್ಲದೆ ಆಯ್ಕೆ!
ಗ್ರೂಪ್ ʼಸಿʼ ಮಟ್ಟದ ಮಜ್ದೂರ್ ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ 79, ಹಿಂದುಳಿದ ವರ್ಗದಕ್ಕೆ 79, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 33 ಹಾಗೂ ಪರಿಶಿಷ್ಟ ಪಂಗಡಕ್ಕೆ 5 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಪರಿಸರ ಮತ್ತು ಅರಣ್ಯ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಗ್ರೂಪ್ ‘ಸಿ’ ಅಡಿಯಲ್ಲಿ ಖಾಲಿ ಇರುವ ಒಟ್ಟು 196 ಮಜ್ದೂರ್ (ಕಾರ್ಮಿಕ) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಮಾರ್ಚ್ 23 ರಿಂದಲೇ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಬರಾಟಾಂಗ್, ದಿಗ್ಲಿಪುರ್ ಮತ್ತು ಮಾಯಾಬಂದರ್ ಸೇರಿದಂತೆ ಐದು ಪ್ರಮುಖ ಅರಣ್ಯ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹುದ್ದೆಗಳ ವಿವರ
ಗ್ರೂಪ್ ʼಸಿʼ ಮಟ್ಟದ ಮಜ್ದೂರ್ ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ 79, ಹಿಂದುಳಿದ ವರ್ಗದಕ್ಕೆ 79, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 33 ಹಾಗೂ ಪರಿಶಿಷ್ಟ ಪಂಗಡಕ್ಕೆ 5 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ಆರಂಭಿಕ ವೇತನ 18,000 ರೂ. ರಿಂದ 56,900 ರೂ. ವರೆಗೆ ವೇತನ ಸಿಗಲಿದೆ. 7ನೇ ವೇತನ ಆಯೋಗದ ಲೆವೆಲ್-1 ರಂತೆ ಮನೆ ಹಾಗೂ ಆಸ್ಪತ್ರೆ ಭತ್ಯೆ ನೀಡಲಾಗುವುದು.
ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಿರಬೇಕು. ಹಿಂದಿ ಭಾಷೆಯ ಜ್ಞಾನವಿದ್ದರೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಪುರುಷ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸರ್ಕಾರಿ ನಿಯಮದಂತೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ.
ಆಯ್ಕೆ ವಿಧಾನ
ಈ ನೇಮಕಾತಿಯ ವಿಶೇಷವೆಂದರೆ ಇಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ದೈಹಿಕ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಪುರುಷರಿಗೆ 10 ಕಿ.ಮೀ ಮತ್ತು ಮಹಿಳೆಯರಿಗೆ 8 ಕಿ.ಮೀ ಓಟ ನಿಗದಿಪಡಿಸಿದೆ. ಉದ್ದ ಜಿಗಿತ, ತೂಕ ಹೊರುವಿಕೆಯಲ್ಲಿ ಪುರುಷರು 30 ಕೆ.ಜಿ. ಮತ್ತು ಮಹಿಳೆಯರು 20 ಕೆ.ಜಿ. ತೂಕವನ್ನು 500 ಮೀಟರ್ ದೂರದವರೆಗೆ ಹೊರಬೇಕು.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ, ಹಿಂದುಳಿದ ವರ್ಗದ ಅಭ್ಯರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100 ರೂ. ಪರೀಕ್ಷಾ ಶುಲ್ಕ ನಿಗದಿಪಡಿಸಿದ್ದು, ಮಹಿಳೆಯರು ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಅರ್ಜಿ ಸಲ್ಲಿಸಲು ಮೇ 6 ಕೊನೆಯ ದಿನಾಂಕವಾಗಿದ್ದು, ಅರ್ಜಿ ತಿದ್ದುಪಡಿ ಅವಧಿ ಮೇ. 7 ರಿಂದ ಮೇ. 13 ರವರೆಗೆ ಸಮಯ ನೀಡಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಂಡಮಾನ್ ಆಡಳಿತದ ಅಧಿಕೃತ ನೇಮಕಾತಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ದೈಹಿಕವಾಗಿ ಸದೃಢರಾಗಿರುವ ಮತ್ತು ದ್ವೀಪ ಪ್ರದೇಶದ ಅರಣ್ಯ ಸಂರಕ್ಷಣೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ.

