WTC Final: South Africa wins ICC trophy after 27 years
x

ಟೆಸ್ಟ್‌ ಟ್ರೋಪಿಯೊಂದಿಗೆ ದಕ್ಷಿಣ ಆಫ್ರಿಕಾ ತಂಡ 

WTC Final: 27 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದ ದಕ್ಷಿಣ ಆಫ್ರಿಕಾ

ಆರಂಭಿಕ ಆಟಗಾರ ಏಡಂ ಮರ್ಕರಂ ಅವರ ಭರ್ಜರಿ ಶತಕ(136) ಹಾಗೂ ನಾಯಕ ತೆಂಬಾ ಬವುಮಾ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ (66) ಸತತ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಜಯಿಸಿತು.


ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ದ ಐದು ವಿಕೆಟ್‌ ಅಂತರದಲ್ಲಿ ಗೆಲುವು ಸಾಧಿಸಿದ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಇದು ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ವಿಶ್ವ ಕಪ್ ಟ್ರೋಫಿ. ಡಬ್ಲ್ಯುಟಿಸಿ ಚಾಂಪಿಯನ್​ಶಿಪ್​ ಟೆಸ್ಟ್​ ಕ್ರಿಕೆಟ್​ನ ವಿಶ್ವ ಕಪ್​. ಏಕ ದಿನ, ಟಿ೨೦ ಮಾದರಿಗಳಲ್ಲಿ ಹಲವು ಆವೃತ್ತಿಗಳಲ್ಲಿ ನಿರ್ಣಾಯಕ ಘಟ್ಟಗಳಲ್ಲಿ ಸೋಲು ಕಾಣುವ ಮೂಲಕ 'ಚೋಕರ್ಸ್' ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ 'ರಿಯಲ್ ಕ್ರಿಕೆಟ್ 'ಎನಿಸಿಕೊಂಡಿರುವ​ ಟೆಸ್ಟ್​​ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಎನಿಸಿಕೊಂಡು ಹಲವು ವರ್ಷಗಳ ನೋವು, ಹತಾಶೆಗೆ ಸಾಂತ್ವನ ಹೇಳಿಕೊಂಡಿದೆ.​

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ನೀಡಿದ 282 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭಿಕ ಆಟಗಾರ ಆ್ಯಡಂ ಮರ್ಕರಂ ಅವರ ಭರ್ಜರಿ ಶತಕ (136) ಹಾಗೂ ನಾಯಕ ತೆಂಬಾ ಬವುಮಾ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ(66) 27 ವರ್ಷಗಳ ನಂತರ ಐಸಿಸಿ ಟ್ರೋಫಿ ಜಯಿಸಿತು. ಆ ಮೂಲಕ ಟ್ರೋಫಿ ಬರ ನೀಗಿಸಿಕೊಂಡಿತು.

ಜೂನ್‌ 11ರಿಂದ ಆರಂಭವಾದ ಫೈನಲ್‌ ಪಂದ್ಯ ಕೇವಲ ನಾಲ್ಕು ದಿನಗಳಲ್ಲೇ ಮುಕ್ತಾಯಗೊಂಡಿತು. ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದರು. ಪ್ರಥಮ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ 212 ರನ್‌ಗಳಿಸಿ ಆಲೌಟ್‌ ಆಯಿತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ 138 ರನ್‌ ಗಳಿಸಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 74 ರನ್‌ಗಳ ಹಿನ್ನೆಡೆ ಅನುಭವಿಸಿತು.

ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾಗೆ ಬಾಲಂಗೋಚಿಗಳಾದ ಮಿಚೆಲ್‌ ಸ್ಟ್ರಾಕ್‌ (58) ಹಾಗೂ ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ (43) ರನ್‌ ಗಳಿಸಿ ನೆರವಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಪಡೆದು ಮಿಂಚಿದ್ದ ರಬಾಡ ಎರಡನೇ ಇನ್ನಿಂಗ್ಸ್‌ನಲ್ಲೂ ನಾಲ್ಕು ವಿಕೆಟ್‌ ಪಡೆದು ಕಾಂಗಾರೂ ಪಡೆಯನ್ನು ಕಾಡಿದರು.

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮಿಚೆಲ್‌ ಸ್ಟಾರ್ಕ್‌ ಆರಂಭಿಕ ಆಘಾತ ನೀಡಿದರು. ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಆರಂಭಿಕ ಆಟಗಾರ ಏಡಂ ಮರ್ಕರಂ ಹಾಗೂ ಮುಲ್ದರ್​ 61 ರನ್‌ ಕಲೆಹಾಕಿದರು. ಈ ಜತೆಯಾಟವನ್ನು ಬೇರ್ಪಡಿಸುವಲ್ಲಿ ವೇಗದ ಬೌಲರ್‌ ಮಿಚೆಲ್‌ ಸ್ಟ್ರಾಕ್‌ ಯಶಸ್ವಿಯಾದರಲ್ಲದೆ, ಆಸೀಸ್​ ಪಡೆಗೆ ಪಂದ್ಯ ಗೆಲ್ಲುವ ಆಸೆ ಮೂಡಿಸಿದರು.

ಈ ವೇಳೆ ಏಡಂ ಮರ್ಕರಂ ಅವರೊಂದಿಗೆ ಜತೆಯಾದ ನಾಯಕ ತೆಂಬಾ ಬವುಮಾ ಮೂರನೇ ವಿಕೆಟ್‌ಗೆ ಭರ್ಜರಿ 147 ರನ್‌ ಕಲೆಹಾಕಿ ಆಸ್ಟ್ರೇಲಿಯಾದ ಕೈಯಿಂದ ಗೆಲುವನ್ನು ಕಸಿದುಕೊಂಡರು. ನಂತರ ಬಂದ ಮಧ್ಯಮ ಕ್ರಮಾಂಕದ ಆಟಗಾರ ಡೇವಿಡ್ ಬೆಡಿಂಗ್ಹ್ಯಾಮ್(21) ಹಾಗೂ ಕೈಲ್ ವೆರ್ರೆನ್ನೆ(4) ರನ್‌ಗಳಿಸಿ ಗೆಲುವಿನ ದಡ ಸೇರಿಸಿದರು. ಫೈನಲ್‌ ಪಂದ್ಯದಲ್ಲಿ ಶತಕ ಸಿಡಿಸಿದ ಏಡಂ ಮರ್ಕರಂ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

Read More
Next Story