ಸರ್ಕಾರದಿಂದ ನಾಗರಿಕರ ಸುರಕ್ಷತೆ ಖಾತರಿ: ಮೊಹಮ್ಮದ್ ಯೂನಸ್
ಢಾಕಾ, ಆಗಸ್ಟ್ 8: ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸುವ ಸರ್ಕಾರವನ್ನು ನೀಡುವುದಾಗಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಗುರುವಾರ ಭರವಸೆ ನೀಡಿದರು.
ಒಲಿಂಪಿಕ್ಸ್ ಗೇಮ್ಸ್‌ಗೋಸ್ಕರ ಪ್ಯಾರಿಸ್‌ನಲ್ಲಿದ್ದ ಅವರು ದುಬೈ ಮೂಲಕ ದೇಶಕ್ಕೆ ಮರಳಿದರು. ಕಿರು ಸಾಲ ಕ್ಷೇತ್ರದಲ್ಲಿನ ಪ್ರವರ್ತಕ ಕೆಲಸಕ್ಕಾಗಿ ಯೂನಸ್(84), 2006 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪರಾರಿ ಆದ ನಂತರ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಸಂಸತ್ತನ್ನು ವಿಸರ್ಜಿಸಿ, ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಿಸಿದರು.
ಯೂನಸ್ ಅವರನ್ನು ಹೊತ್ತ ಎಮಿರೇಟ್ಸ್ ವಿಮಾನ (ಇಕೆ 582)ವು ಮಧ್ಯಾಹ್ನ 2:10ಕ್ಕೆ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಸೇನಾ ಮುಖ್ಯಸ್ಥ ಜನರಲ್ ವಕಾರ್ ಉಜ್ ಝಮಾನ್, ಹಿರಿಯ ಅಧಿಕಾರಿಗಳು, ವಿದ್ಯಾರ್ಥಿ ಮುಖಂಡರು ಮತ್ತು ನಾಗರಿಕರು ಅವರನ್ನು ವಿಮಾನನಿಲ್ದಾಣದಲ್ಲಿ ಸ್ವಾಗತಿಸಿದರು.
ವಿಮಾನ ನಿಲ್ದಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯೂನಸ್, ಹಸೀನಾ ವಿರುದ್ಧದ ಪ್ರತಿಭಟನಾ ಚಳವಳಿಯನ್ನು ಯಶಸ್ವಿಗೊಳಿಸಿದ ಯುವಜನರಿಗೆ ಕೃತಜ್ಞತೆ ಸಲ್ಲಿಸಿದರು.
ʻನಮಗೆ ಎರಡನೇ ಬಾರಿಗೆ ಸ್ವಾತಂತ್ರ್ಯ ಸಿಕ್ಕಿದೆ. ಈ ಸ್ವಾತಂತ್ರ್ಯವನ್ನು ನಾವು ರಕ್ಷಿಸಬೇಕಿದೆ. ದೇಶ ಈಗ ನಿಮ್ಮ ಕೈಯಲ್ಲಿದೆ; ಅದನ್ನು ನಿಮ್ಮ ಆಕಾಂಕ್ಷೆಯಂತೆ ಮರುನಿರ್ಮಾಣ ಮಾಡಬೇಕು. ದೇಶ ಕಟ್ಟಲು ಸೃಜನಶೀಲತೆಯನ್ನು ಬಳಸಬೇಕು. ಬಾಂಗ್ಲಾ ಅತ್ಯಂತ ಸುಂದರವಾದ ದೇಶವಾಗಬಹುದು ಮತ್ತು ನಾವು ಅದನ್ನು ಒಂದಾಗಿಸಬಹುದು,ʼ ಎಂದು ಹೇಳಿದರು. ಮೀಸಲು ತಾರತಮ್ಯ ವಿರೋಧಿ ಆಂದೋಲನದ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಅಬು ಸೈಯದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಆನಂತರ ಪ್ರಧಾನಿಯವರ ಅಧಿಕೃತ ನಿವಾಸ ಬಂಗಭಬನ್‌ಗೆ ತೆರಳಲಿದ್ದಾರೆ. ಮಧ್ಯಂತರ ಸರ್ಕಾರವು ನಿರ್ದಿಷ್ಟ ಅವಧಿಗೆ ದೇಶವನ್ನು ಮುನ್ನಡೆಸುತ್ತದೆ ಮತ್ತು ಚುನಾವಣೆಯ ಮೇಲ್ವಿಚಾರಣೆ ಮಾಡಿ ಚುನಾಯಿತ ಸರ್ಕಾರಕ್ಕೆ ಅಧಿಕಾರ ವಹಿಸಿ ಕೊಡುತ್ತದೆ.
ಅಧ್ಯಕ್ಷ ಮಹಮ್ಮದ್ ಶಹಾಬುದ್ದೀನ್ ನೂತನ ಸರ್ಕಾರಕ್ಕೆ ಪ್ರಮಾಣವಚನ ಬೋಧಿಸಲಿದ್ದಾರೆ. ಸುಮಾರು 400 ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸೇನೆಯ ಮುಖ್ಯಸ್ಥರು ಬುಧವಾರ ತಿಳಿಸಿದ್ದಾರೆ. ಹಂಗಾಮಿ ಸರ್ಕಾರ 15 ಸದಸ್ಯರನ್ನು ಹೊಂದಬಹುದು ಎಂದು ಸುಳಿವು ನೀಡಿದ ಅವರು, ಹೆಸರು ಮತ್ತು ಸರ್ಕಾರದ ಸಂಭವನೀಯ ಅಧಿಕಾರಾವಧಿಯನ್ನು ಬಹಿರಂಗಪಡಿಸಲಿಲ್ಲ.
ಹಸೀನಾ ಸರ್ಕಾರದಿಂದ ಕಿರುಕುಳ: 2008 ರಲ್ಲಿ ಅಧಿಕಾರಕ್ಕೆ ಬಂದ ನಂತರ ಹಸೀನಾ, ಯೂನಸ್ ವಿರುದ್ಧ ತನಿಖೆ ಆರಂಭಿಸಿದರು. 2011ರಲ್ಲಿ ಗ್ರಾಮೀಣ ಬ್ಯಾಂಕಿನ ಚಟುವಟಿಕೆಗಳ ಪರಿಶೀಲನೆ ಆರಂಭಿಸಿ, ನಿವೃತ್ತಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಜನವರಿಯಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪದ ಮೇಲೆ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತು.
2007 ರಲ್ಲಿ ಸೇನೆ ಬೆಂಬಲಿತ ಸರ್ಕಾರವಿದ್ದಾಗ, ಯೂನಸ್ ಅವರು ರಾಜಕೀಯ ಪಕ್ಷ ರಚಿಸುವುದಾಗಿ ಘೋಷಿಸಿದ್ದು, ಹಸೀನಾ ಅವರ ಕೋಪಕ್ಕೆ ಕಾರಣ ಎಂದು ಹಲವರು ನಂಬುತ್ತಾರೆ.