ಭಾರತದಿಂದ ಹಸೀನಾ ಗಡಿಪಾರಿಗೆ ಬಾಂಗ್ಲಾ ಕ್ರಮ
x

ಭಾರತದಿಂದ ಹಸೀನಾ ಗಡಿಪಾರಿಗೆ ಬಾಂಗ್ಲಾ ಕ್ರಮ

ಸಾಮೂಹಿಕ ಹತ್ಯೆ ಮತ್ತು ಮಾನವೀಯತೆ ವಿರುದ್ಧದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇಖ್ ಹಸೀನಾ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಬಂಧನ ವಾರಂಟ್‌ ಜಾರಿಗೊಳಿಸಲು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ತಾಜುಲ್‌ ಇಸ್ಲಾಂ ಅವರು ಢಾಕಾದಲ್ಲಿ ಹೇಳಿದ್ದಾರೆ.


ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಧಿಕರಣಕ್ಕೆ ಹೊಸದಾಗಿ ನೇಮಕಗೊಂಡ ಮುಖ್ಯ ಪ್ರಾಸಿಕ್ಯೂಟರ್ ಮೊಹಮದ್‌ ತಾಜುಲ್ ಇಸ್ಲಾಂ ಹೇಳಿದ್ದಾರೆ.

ವಿದ್ಯಾರ್ಥಿಗಳ ಚಳವಳಿ ಸಂದರ್ಭದಲ್ಲಿ ಸಾಮೂಹಿಕ ಹತ್ಯೆ ಆರೋಪದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಭಾರತ ದೊಂದಿಗೆ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಮರಳಿ ತರಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.

ಆಗಸ್ಟ್ 5 ರಂದು ಉತ್ತುಂಗಕ್ಕೇರಿದ ಸರ್ಕಾರ ವಿರೋಧಿ ಪ್ರತಿಭಟನೆಗಳ ನಂತರ, ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದರು.

ʻಸಾಮೂಹಿಕ ಹತ್ಯೆ ಮತ್ತು ಮಾನವೀಯತೆ ವಿರುದ್ಧದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇಖ್ ಹಸೀನಾ ಹಾಗೂ ತಲೆಮರೆಸಿಕೊಂಡಿರುವ ಎಲ್ಲ ಆರೋಪಿಗಳ ವಿರುದ್ಧ ಬಂಧನ ವಾರಂಟ್‌ ಜಾರಿಗೊಳಿಸಲು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸುತ್ತೇವೆ,ʼ ಎಂದು ಅವರು ಢಾಕಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿ, ಹೊಸ ಪ್ರಕರಣಗಳ ವಿಚಾರಣೆಗೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಕಾಯ್ದೆಗೆ ತಿದ್ದುಪಡಿ ಮಾಡುವ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸಾಕ್ಷ್ಯ ಸಂಗ್ರಹ ಸವಾಲಿನ ಕೆಲಸ

ʻಆರೋಪಿಗಳ ವಿರುದ್ಧ ಮಾಹಿತಿ, ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ದೇಶಾದ್ಯಂತ ಸಂಗ್ರಹಿಸಬೇಕಿದೆ. ಅವುಗಳನ್ನು ಸಂಕಲಿಸಿ, ಪರಿಶೀಲಿಸಿ ನ್ಯಾಯಮಂಡಳಿ ಮುಂದೆ ಇರಿಸಬೇಕಾಗುತ್ತದೆ. ಇದು ಬಹಳ ಸವಾಲಿನ ಮತ್ತು ದೊಡ್ಡ ಕೆಲಸ,ʼ ಎಂದು ಹೇಳಿದರು.

ಮಧ್ಯಂತರ ಸರ್ಕಾರದ ಆರೋಗ್ಯ ಸಲಹೆಗಾರ್ತಿ ನೂರ್ಜಹಾನ್ ಬೇಗಂ ಅವರ ಪ್ರಕಾರ, ಹಸೀನಾ ನೇತೃತ್ವದ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ 1,000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಮಂದಿ ಗಾಯಗೊಂಡಿ ದ್ದಾರೆ.

ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ)ಯು ಹಸೀನಾ ಹಾಗೂ 9 ಮಂದಿ ಮೇಲೆ ಜುಲೈ 15 ರಿಂದ ಆಗಸ್ಟ್ 5 ರವರೆಗೆ ನಡೆದ ಹತ್ಯೆಗಳು ಹಾಗೂ ಮಾನವೀಯತೆ ವಿರುದ್ಧದ ಅಪರಾಧಗಳ ಆರೋಪದ ತನಿಖೆಯನ್ನು ಆಗಸ್ಟಿನಲ್ಲಿ ಪ್ರಾರಂಭಿಸಿದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಹೊಸ ನ್ಯಾಯಾಧೀಶರು ಮತ್ತು ತನಿಖಾಧಿಕಾರಿಗಳನ್ನು ನೇಮಿಸುವ ಮೂಲಕ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಮತ್ತು ಅದರ ತನಿಖಾ ತಂಡವನ್ನು ಪುನಾರಚಿಸಬೇಕಾಗುತ್ತದೆ ಎಂದು ಮೊಹಮದ್‌ ತಾಜುಲ್ ಇಸ್ಲಾಂ ಹೇಳಿದ್ದಾರೆ.

Read More
Next Story