ಶೇಖ್ ಹಸೀನಾ ಅವರ ಪತನಕ್ಕೆ ವಿದ್ಯಾರ್ಥಿಗಳ ಪ್ರತಿಭಟನೆ ಮಾತ್ರ ಕಾರಣವೇ?

ಬಾಂಗ್ಲಾದೇಶದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ರೋಮಾಂಚನಗೊಳಿಸುವಂಥದ್ದು ಇದೆ; ಏಕೆಂದರೆ ಅದು ʼನಿರಂಕುಶʼ ಸರ್ಕಾರವನ್ನು ಉರುಳಿಸಿದೆ.ಆದರೆ, ಈ ಪ್ರತಿಭಟನೆಯ ತೆರೆಮರೆಯಲ್ಲಿ ಬೇರೆ ಆಟಗಾರರ ಕೈವಾಡ ಇದೆಯೇ? ಇಂಗ್ಲೆಂಡ್‌ ಮತ್ತು ಅಮೆರಿಕದ ಹಸ್ತಕ್ಷೇಪ ಇರಬಹುದು ಎಂಬ ಶಂಕೆ ದಟ್ಟವಾಗಿದೆ.


ಬಾಂಗ್ಲಾದೇಶದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ರೋಮಾಂಚನಗೊಳಿಸುವಂಥದ್ದು ಇದೆ; ಏಕೆಂದರೆ ಅದು ʼನಿರಂಕುಶʼ ಸರ್ಕಾರವನ್ನು ಉರುಳಿಸಿದೆ. ನ್ಯಾಯಸಮ್ಮತವಲ್ಲದ ಕೋಟಾ ವ್ಯವಸ್ಥೆಯನ್ನು ವಿರೋಧಿಸಿ ಆರಂಭವಾದ ಬಾಂಗ್ಲಾದೇಶದ ವಿದ್ಯಾರ್ಥಿಗಳ ಪ್ರತಿಭಟನೆಯು ಪ್ರಪಂಚದ ಗಮನವನ್ನು ಸೆಳೆಯಿತು. ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ತರಾತುರಿಯಲ್ಲಿ ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನಗೈದರು. ʻ‌ಝಡ್‌ ಪೀಳಿಗೆ(ಜೆನ್‌ ಝಡ್)‌ʼಯ ಪ್ರತಿಭಟನಾಕಾರರು ಆಗಸ್ಟ್‌ 5 ರಂದು ಢಾಕಾಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದಂತೆ ಬಾಂಗ್ಲಾದೇಶೀಯರು ಮಾತ್ರವಲ್ಲ, ಎಡಪಂಥೀಯ ಒಲವು ಹೊಂದಿರುವ ಅನೇಕರು ಸಂತೋಷಪಟ್ಟರು.

ಅದರ ಹಿಂದಿನ ರಾತ್ರಿ 14 ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಹಸೀನಾ ಅವರ ಪಲಾಯನದ ನಂತರ, ದೇಶದಲ್ಲಿ ʻಎಲ್ಲವೂ ಚೆನ್ನಾಗಿದೆʼ ಎಂದು ಅನೇಕ ಧ್ವನಿಗಳು ಹೇಳಿದ್ದರೂ, ದೇಶದಲ್ಲಿ ಅವ್ಯವಸ್ಥೆ ಮತ್ತು ಹೇಳಲಾಗದ ಹಿಂಸಾಚಾರ ಮನೆ ಮಾಡಿದೆ. ಪೊಲೀಸರು ಮತ್ತು ಅವಾಮಿ ಲೀಗ್ ಕಾರ್ಯಕರ್ತರನ್ನು ಸೇತುವೆಗಳಿಂದ ತಲೆಕೆಳಗಾಗಿ ನೇತು ಹಾಕಿ, ಹೊಡೆದು ಸಾಯಿಸುತ್ತಿರುವುದನ್ನು ತೋರಿಸುವ ವಿಡಿಯೋಗಳು ಹರಿದಾಡುತ್ತಿವೆ. ಅವಾಮಿ ಲೀಗ್ ನಾಯಕನ ಮಾಲೀಕತ್ವದ ಜೆಸ್ಸೋರ್‌ನಲ್ಲಿರುವ ಹೋಟೆಲ್‌ಗೆ ಬೆಂಕಿ ಹಚ್ಚಲಾಗಿದ್ದು, 25 ಜನರನ್ನು ಸಜೀವ ದಹನ ಮಾಡಲಾಗಿದೆ. ಆಗಸ್ಟ್ 7ರಂದು 20 ಅವಾಮಿ ಲೀಗ್ ನಾಯಕರು ಮತ್ತು ಅವರ ಕುಟುಂಬ ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.

ಪ್ರಶ್ನೆಯೇನೆಂದರೆ, ವಿದ್ಯಾರ್ಥಿಗಳ ಪ್ರತಿಭಟನೆಯು ದೇಶವನ್ನು ನಿರಂಕುಶ ಮುಖ್ಯಸ್ಥನಿಂದ ಮುಕ್ತಗೊಳಿಸುವ ʻಎರಡನೇ ವಿಮೋಚನೆʼ (1971 ರ ನಂತರ) ಏಕೈಕ ಉದ್ದೇಶವನ್ನು ಇದು ಸೂಚಿಸುತ್ತವೆಯೇ? ಅಥವಾ, ತಳಮಟ್ಟದಲ್ಲಿ ಸಹಾನುಭೂತಿ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಟನೆಯ ತೆರೆಮರೆಯಲ್ಲಿ ಕಾಣದ ಆಟಗಾರರು ಇದ್ದಾರೆಯೇ?

ಅವನತಿಯೆಡೆಗೆ ಹಸೀನಾ ಅವರ ಪಯಣ: ಹಸೀನಾ ಅವರು ನಿರಂಕುಶ ಆಡಳಿತಗಾರ್ತಿಯಾಗಿ ಬದಲಾಗಿದ್ದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆಗೆ ಅವರ ಪ್ರತಿಕ್ರಿಯೆಯೇ ಅದಕ್ಕೆ ಸಾಕ್ಷಿಯಾಗಿದೆ. ಆಂದೋಲನವನ್ನು ಹತ್ತಿಕ್ಕಲು ಸೇನೆ , ಪೊಲೀಸ್ ಸೇರಿದಂತೆ ಎಲ್ಲ ರೀತಿಯ ಬಲಪ್ರಯೋಗ ಮಾಡಿದರು. ರಾಜ್ಯ ಯಂತ್ರದೊಂದಿಗೆ ಅವಾಮಿ ಲೀಗ್, ವಿದ್ಯಾರ್ಥಿ ಘಟಕ ಮತ್ತು ಯುವ ಸಂಘಟನೆಗಳ ಸಶಸ್ತ್ರ ಗೂಂಡಾಗಳು ಸೇರಿಕೊಂಡರು. ಸೇನೆಯ ಟ್ಯಾಂಕ್‌ಗಳು ಢಾಕಾದ ಬೀದಿಗಳಿಗೆ ಇಳಿದವು ಮತ್ತು ಪೊಲೀಸರು ನಿರ್ಭಯವಾಗಿ ಪ್ರತಿಭಟನಾಕಾರರನ್ನು ಕೊಂದು ಅಂಗವಿಕಲಗೊಳಿಸಿದರು. ಹಸೀನಾರ ತರ್ಕವೆಂದರೆ, ಈ ಪ್ರತಿಭಟನಾಕಾರರು ವಿದ್ಯಾರ್ಥಿಗಳಲ್ಲ; ಬಿಎನ್‌ಪಿ-ಜಮಾತ್‌ ಬೆಂಬಲಿತ ʻಭಯೋತ್ಪಾದಕರುʼ.

ಪ್ರತಿಸ್ಪರ್ಧಿಗಳು ತನ್ನನ್ನು ಪದಚ್ಯುತಗೊಳಿಸುತ್ತಾರೆ ಎಂಬ ಅವರ ಚಿತ್ತಭ್ರಾಂತಿ ಎಷ್ಟು ತೀವ್ರವಾಗಿತ್ತು ಎಂದರೆ ವಿನಾಕಾರಣ ಜೈಲಿಗೆ ಕಳಿಸಿದರು. 2009 ರಿಂದ ಕಳೆದ 15 ವರ್ಷಗಳಲ್ಲಿ ನೂರಾರು ಬಲವಂತದ ನಾಪತ್ತೆಗಳು ಮತ್ತು ಹತ್ಯೆಗಳನ್ನು ಆಯೋಜಿಸಿದಳು. ಆದರೆ, ಹಸೀನಾ ಈ ಎಲ್ಲ ಆರೋಪಗಳನ್ನೂ ತಳ್ಳಿಹಾಕಿದರು.

ರಾಪಿಡ್ ಆಕ್ಷನ್ ಬೆಟಾಲಿಯನ್ (ಆರ್‌ಎಬಿ) ಭದ್ರತಾ ಪಡೆಗಳ ವಿರುದ್ಧ ದುರ್ಬಳಕೆ, ಚಿತ್ರಹಿಂಸೆ ಮತ್ತು ಅಕ್ರಮ ಹತ್ಯೆಗಳ ಆರೋಪಗಳಿಂದ ಅಮೆರಿಕ 2021ರಲ್ಲಿ ಈ ಪಡೆಯನ್ನು ನಿಷೇಧಿಸಿತು. ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪತ್ರಕರ್ತರು ಕೂಡ ಬಂಧನ ಮತ್ತು ಕಿರುಕುಳ ಎದುರಿಸಿದರು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಕಟ್ಟುನಿಟ್ಟು ಕಾನೂನು ಜಾರಿಗೆ ತರಲಾಯಿತು.

ಯೂನಸ್ ಅವರೊಂದಿಗೆ ಕಿತ್ತಾಟ

ಹಸೀನಾ ಅವರ ಮುಖ್ಯ ಗುರಿಗಳಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮೊಹಮದ್‌ ಯೂನಸ್ ಕೂಡ ಇದ್ದರು. ಯೂನಸ್‌ ಅವರಿಗೆ ವಿದ್ಯಾರ್ಥಿ ಪ್ರತಿಭಟನಾಕಾರರು ಮಧ್ಯಂತರ ಸರ್ಕಾರದ ಉಸ್ತುವಾರಿ ನೀಡಬೇಕೆಂದು ಬಯಸಿದ್ದು, ಅವರು ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ. ಕಿರು ಬಂಡವಾಳ ಬ್ಯಾಂಕರ್ ಮತ್ತು ಸಾಮಾಜಿಕ ಕಾರ್ಯಕರ್ತನನ್ನು ಜನರನ್ನು ಲೂಟಿ ಮಾಡುವ ʻರಕ್ತದಾಹಿʼ ಮತ್ತು ʻಅಮೆರಿಕದ ಗೂಂಡಾʼ ಎಂದು ಹಸೀನಾ ದೂಷಿಸಿದರು.

ಯೂನಸ್ ಅವರನ್ನು ಅವರೇ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್‌ನಿಂದ 2011 ರಲ್ಲಿ ವಜಾಗೊಳಿಸಲಾಯಿತು ಮತ್ತು 100 ಕ್ಕೂ ಹೆಚ್ಚು ಆರೋಪ ಹೊರಿಸಿ, ಈ ವರ್ಷದ ಜನವರಿಯಲ್ಲಿ ಸೆರೆಮನೆಗೆ ಕಳಿಸಲಾಯಿತು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು. ಯೂನಸ್ ವಿರುದ್ಧದ ದ್ವೇಷವು ಹಸೀನಾ ಅವರನ್ನು ಯುವಜನರಲ್ಲಿ ಇನ್ನಷ್ಟು ಕುಖ್ಯಾತೆಯನ್ನಾಗಿಸಿತು.

ಪ್ರತಿಸ್ಪರ್ಧಿಗಳ ವಿರುದ್ಧ ಹಸೀನಾಳ ಚಿತ್ತಭ್ರಾಂತಿ, ಕೆಲವು ನೈಜ ಮತ್ತು ಕೆಲವು ಕಾಲ್ಪನಿಕ, ಪ್ರಾಯಶಃ ಆಕೆಯ ಅನುಭವಗಳಿಂದ ಹುಟ್ಟಿ ಕೊಂಡಿದೆ. ಹಸೀನಾ ತಮ್ಮ ತಂದೆ, ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಸೇರಿದಂತೆ, ಕುಟುಂಬದ ಹೆಚ್ಚಿನ ಸದಸ್ಯರನ್ನು 1975 ರಲ್ಲಿ ಸೇನೆಯ ಹಂತಕರಿಂದ ಕಳೆದುಕೊಂಡರು. ಅರ್ಧ ಶತಮಾನದ ನಂತರ ಹಸೀನಾ ಅವರ ಪತನಕ್ಕೆ ಕಾರಣವಾಗಿದ್ದು ಇದೇ ಆರೋಪ- ನಿರಂಕುಶಾಧಿಕಾರ.

ಮುಜೀಬ್‌ ಹತ್ಯೆಗೆ ಮೊದಲು ದೇಶದಲ್ಲಿ ತುರ್ತು ಪರಿಸ್ಥಿತಿಯಂಥ ಸನ್ನಿವೇಶ ಇದ್ದಿತ್ತು; ಎಲ್ಲ ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿ, ತನ್ನನ್ನು ಬಕ್ಸಲ್ ಎಂಬ ಏಕಪಕ್ಷೀಯ ರಾಜ್ಯದ ಮುಖ್ಯಸ್ಥನಾಗಿ ಘೋಷಿಸಿಕೊಂಡಿದ್ದರು. ಇದೇ ಕಾರಣದಿಂದ, ಹಸೀನಾ ಅವರ ಆಡಳಿತವನ್ನು ಟೀಕಾಕಾರರು ʻಬಕ್ಸಲ್ 2.0ʼ ಎಂದು ಕರೆಯುತ್ತಾರೆ.

ಆರ್ಥಿಕ ಪರಿಸ್ಥಿತಿ

ಹಸೀನಾ ಈವರೆಗೆ 19 ಹತ್ಯೆ ಪ್ರಯತ್ನಗಳನ್ನು ಎದುರಿಸಿದ್ದರೆ; 2007 ರ ವಿಪ್ಲವದ ನಂತರ ಸೇನೆಯು ಹಸೀನಾ ಹಾಗೂ ಅವರ ಪ್ರತಿಸ್ಪರ್ಧಿ ಬಿಎನ್ಪಿಯ ಖಲೀದಾ ಜಿಯಾ ಜೊತೆಗೆ ಭ್ರಷ್ಟಾಚಾರದ ಆರೋಪದ ಮೇಲೆ ಸೆರೆಮನೆಗೆ ತಳ್ಳಿತು. ಇದರಿಂದಾಗಿ ಆಕೆ ತನ್ನ ಸುತ್ತ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪ ಹೊತ್ತಿರುವ ಹೊಗಳುಭಟರನ್ನು ತುಂಬಿಕೊಂಡಿದ್ದಾರೆ.

ಇವುಗಳೊಂದಿಗೆ 160 ದಶಲಕ್ಷ ಜನಸಂಖ್ಯೆಯ ದೇಶದಲ್ಲಿ ಯುವಜನರ ನಿರುದ್ಯೋಗ (ಶೇ.15.7), ಅಧಿಕ ಹಣದುಬ್ಬರ (ಶೇ. 9.4) ಮತ್ತು ಬೆಳೆಯುತ್ತಿರುವ ಅಸಮಾನತೆ ಇದೆ. ಮೀಸಲು ಪ್ರತಿಭಟನೆಗೂ ಮುನ್ನವೇ ಸರ್ಕಾರಿ ಉದ್ಯೋಗಗಳಿಗೆ ನಡೆದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. 12 ವರ್ಷಗಳಲ್ಲಿ ಸರ್ಕಾರಿ ಉದ್ಯೋಗ ಪರೀಕ್ಷೆಗಳ ಕನಿಷ್ಠ 30 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವುದು ಕಳೆದ ತಿಂಗಳು ಬಹಿರಂಗವಾಗಿದೆ.

ಇದರಿಂದ ಯುವಜನರು ಮತ್ತು ಬಡವರು ಹೆಚ್ಚು ಕೋಪಗೊಂಡರೂ, ಆಕೆಯ ನಿರಂಕುಶ ವರ್ತನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರಿಗೆ ಸ್ಪಷ್ಟವಾಯಿತು.ತಮ್ಮ ಆಡಳಿದಲ್ಲಿನ ಶೈಕ್ಷಣಿಕ ಸುಧಾರಣೆಗಳು, 2009 ರಿಂದ ದಕ್ಷಿಣ ಏಷ್ಯಾದ ಎರಡನೇ ಅತಿದೊಡ್ಡ ಆರ್ಥಿಕ ಬೆಳವಣಿಗೆ (ಭಾರತದ ನಂತರ), ಬಡತನ ಕುಸಿತ, ಉತ್ತಮ ಮೂಲಸೌಕರ್ಯ (6 ಕಿಮೀ ಪದ್ಮ ಸೇತುವೆ), ಶೇ.6 ವಾರ್ಷಿಕ ಬೆಳವಣಿಗೆ ಯ ಕಥನವನ್ನು ಹಸೀನಾ ಮುಂದೊತ್ತಿದರು. ಬಾಂಗ್ಲಾದೇಶದ ತಲಾದಾಯ 2021 ರಲ್ಲಿ ಭಾರತಕ್ಕಿಂತ ಹೆಚ್ಚು ಇದೆ. ಗಾರ್ಮೆಂಟ್ ಉದ್ಯಮ ಇದಕ್ಕೆ ಕಾರಣ.

ಯುಎಸ್ ʻಹಸ್ತಕ್ಷೇಪʼ: ಆದರೆ, ಇದರಿಂದ ಯುವಕರು ಪ್ರಭಾವಿತರಾಗಲಿಲ್ಲ. ಒಂದು ಪ್ರಮುಖ ಕಾರಣ- ಭಿನ್ನಾಭಿಪ್ರಾಯಕ್ಕೆ ಅವಕಾಶದ ಕೊರತೆ. ಇದರಿಂದ ಹಸೀನಾ ಅಮೆರಿಕದ ವಿರೋಧ ಎದುರಿಸಬೇಕಾಗಿ ಬಂದಿತು. ಅಮೆರಿಕ ಆರಂಭದಲ್ಲಿ ಹಸೀನಾ ಬಗ್ಗೆ ಸಂತೋಷದಿಂದಿತ್ತು. ಆಕೆ ನೆರೆಯ ಮ್ಯಾನ್ಮಾರ್‌ನಿಂದ ಪಲಾಯನ ಮಾಡಿದ ಲಕ್ಷಾಂತರ ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಿದರು. ಬಿಎನ್‌ಪಿ-ಜಮಾತ್‌ಗೆ ಹೋಲಿಸಿದರೆ, ಆಕೆ ಯಾವಾಗಲೂ ಬಾಂಗ್ಲಾದೇಶದ ʻಜಾತ್ಯತೀತʼ ಮುಖವಾಗಿದ್ದಳು ಮತ್ತು ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸ್ರೀನ್ ಅವರ ಗಡಿಪಾರಿಗೆ ಕಾರಣವಾಗಿದ್ದ ಮುಸ್ಲಿಂ ಮತೀಯ ಗುಂಪುಗಳನ್ನು ಛಿದ್ರಗೊಳಿಸಿದರು.

ಆದರೆ, ವಿರೋಧದ ಧ್ವನಿಗಳ ನಿಗ್ರಹ ಮತ್ತು ನಿರಂತರ ದೌರ್ಜನ್ಯದ ವರದಿಗಳು ಅಮೆರಿಕವನ್ನು ಮುಜುಗರಕ್ಕೆ ಸಿಲುಕಿಸಿದವು. ಮಹಮದ್‌ ಯೂನಸ್‌ ಅವರ ಕಿರುಕುಳ ನಿಲ್ಲಿಸುವಂತೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ 170 ಜಾಗತಿಕ ನಾಯಕರು ಹಸೀನಾ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ಜೊತೆಗೆ, ಅಮೆರಿಕ ಸರ್ಕಾರ ʻಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆʼ ಗೆ ಹಸೀನಾ ಸರ್ಕಾರದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿತು. ಹಸೀನಾ ಈ ಆರೋಪವನ್ನು ನಿರಾಕರಿಸಿದರು.

ಅದಕ್ಕಿಂತ ಹೆಚ್ಚಾಗಿ, ಅಮೆರಿಕದ ರಾಜತಾಂತ್ರಿಕ ಪೀಟರ್ ಹಾಸ್ ಅವರು ಬಿಎನ್‌ಪಿಯನ್ನು ಬೆಂಬಲಿಸುತ್ತಿರುವುದರಿಂದ, ಅವರಿಗೆ ಅವಾಮಿ ಲೀಗ್‌ನ ಅಧಿಕಾರಿಗಳು ಬೆದರಿಕೆಯೊಡ್ಡಿದರು. ಹಾಸ್‌ ಕಳೆದ ನವೆಂಬರ್‌ನಲ್ಲಿ ಬಾಂಗ್ಲಾದೇಶವನ್ನು ತೊರೆದರು.

ಬುಧವಾರದಂದು ಢಾಕಾದಲ್ಲಿ ಪಕ್ಷದ ಅಧ್ಯಕ್ಷೆ ಖಲೀದಾ ಜಿಯಾ ಅವರ ಚಿತ್ರವನ್ನು ಕಟ್ಟಡದ ಮೇಲೆ ಪ್ರದರ್ಶಿಸಿದಾಗ BNP ಬೆಂಬಲಿಗರು ಸಾಮೂಹಿಕ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸೇರುತ್ತಾರೆ | PTI ಮೂಲಕ EPA-EFE

ಅಮೆರಿಕದ ಹಿಡಿತ

ದೇಶದ ಗಾರ್ಮೆಂಟ್‌ ಉದ್ಯಮವು ಅಮೆರಿಕವನ್ನು ಅವಲಂಬಿಸಿದ್ದರೂ, ಹಸೀನಾ ಹಿಂಜರಿಯಲಿಲ್ಲ. ಕಳೆದ ವರ್ಷ ಸಂಸತ್ತಿನಲ್ಲಿ ʻಅಮೆರಿಕ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆʼ ಎಂದು ಹೇಳಿದ್ದರು. ʻಅಮೆರಿಕವು ತನಗೆ ಬೇಕಾದ ಯಾವುದೇ ದೇಶದಲ್ಲಿ ಅಧಿಕಾರವನ್ನು ಬದಲಾಯಿಸಬಹುದು.ಇಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಅಸ್ತಿತ್ವವಿಲ್ಲದ ಸರ್ಕಾರವನ್ನು ತರಲು ಅದು ಬಯಸುತ್ತದೆ, ʼ ಎಂದು ಹೇಳಿದರು.

ಕಳೆದ ಮೇ ತಿಂಗಳಿನಲ್ಲಿ ʻಜನವರಿ 7 ರ ಚುನಾವಣೆಯಲ್ಲಿ ʻಬಿಳಿಯ ವ್ಯಕ್ತಿʼಯೊಬ್ಬರು ಬಾಂಗ್ಲಾದೇಶದಲ್ಲಿ ಮತ್ತೊಂದು ದೇಶಕ್ಕೆ ವಾಯುನೆಲೆ ನಿರ್ಮಿಸಲು ಅವಕಾಶ ನೀಡಿದರೆ ತಮ್ಮನ್ನು ಅಧಿಕಾರಕ್ಕೆ ಮರಳಿಸುವ ಭರವಸೆ ನೀಡಿದ್ದಾರೆʼ ಎಂದು ಹೇಳಿಕೊಂಡಿದ್ದರು. ಬಿಎನ್ಪಿ-ಜಮಾತ್ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ, ಅವಿರೋಧವಾಗಿ ಗೆದ್ದರು.

ಹಸೀನಾ ಅವರು ದೇಶದ ಹೆಸರು ಹೇಳಲಿಲ್ಲ. ಆದರೆ, ಹೇಳಿದರು, ʻಕೇವಲ ಒಂದು ದೇಶವನ್ನು ಗುರಿಯಾಗಿರಿಸಿಕೊಂಡಿದೆ ಎಂದು ತೋರುತ್ತದೆ. ಈ ಬಗ್ಗೆ ಚಿಂತಿಸಬೇಡಿ. ದೇಶದ ಭಾಗವನ್ನು ಬಾಡಿಗೆಗೆ ನೀಡುವ ಮೂಲಕ ಅಥವಾ ಬೇರೆ ದೇಶಕ್ಕೆ ಹಸ್ತಾಂತರಿಸುವ ಮೂಲಕ ನಾನು ಅಧಿಕಾರಕ್ಕೆ ಬರಲು ಬಯಸುವುದಿಲ್ಲ ಮತ್ತು ನನಗೆ ಅಂಥ ಅಧಿಕಾರದ ಅಗತ್ಯವಿಲ್ಲ,ʼ ಎಂದು ಅವರು ದಿ ಡೈಲಿ ಸ್ಟಾರ್ ಗೆ ಹೇಳಿದ್ದರು.

ಕಳೆದ ವರ್ಷ ಬಿಬಿಸಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೂಡ ಹಸೀನಾ ಕೂಡ ಇದೇ ಹೇಳಿಕೆ ನೀಡಿದ್ದರು. ಪೊಲೀಸ್ ಪಡೆ ಆರ್‌ಎಬಿ ಮೇಲೆ ಅಮೆರಿಕ ನಿಷೇಧದ ಬಗ್ಗೆಉಲ್ಲೇಖಿಸಿ ,ʻಅಮೆರಿಕದ ಸಲಹೆ ಮೇರೆಗೆ 2004 ರಲ್ಲಿ ಪಡೆ ಸ್ಥಾಪಿಸಲಾಯಿತು. ಅವರಿಗೆ ತರಬೇತಿ, ಸಲಕರಣೆಗಳನ್ನು ಅಮೆರಿಕ ಒದಗಿಸಿದೆ. ಹೀಗಿದ್ದರೂ, ಅವರು ಆರ್‌ಎಬಿಯನ್ನು ಏಕೆ ನಿಷೇಧಿಸಿದರು? ನನಗೂ ಇದು ದೊಡ್ಡ ಪ್ರಶ್ನೆಯಾಗಿದೆ,ʼ.

ಅಮೆರಿಕ ಏಕೆ ಹಾಗೆ ಮಾಡಿದೆ ಎಂದು ಕೇಳಿದಾಗ, ʻನನಗೆ ಗೊತ್ತಿಲ್ಲ. ಬಹುಶಃ ಅವರು ನನ್ನ ಕೆಲಸವನ್ನು ಮುಂದುವರಿಸಲು ಬಯಸುವುದಿಲ್ಲʼ ಎಂದಿದ್ದರು. ಅಕ್ರಮ ಹತ್ಯೆಗಳನ್ನು ಕುರಿತು, ʻಆರ್‌ಎಬಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿಲ್ಲ,ʼ ಎಂದು ಹೇಳಿದರು.

ಹಲವು ಪ್ರಶ್ನೆಗಳು

ಆದ್ದರಿಂದ, ಹಸೀನಾ ಸರ್ಕಾರದ ಪತನವು ಯುವಜನರ ಪ್ರತಿಭಟನೆಯಿಂದ ಸಂಭವಿಸಿತೇ ಅಥವಾ ದೊಡ್ಡ ಸಂಚು ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆ ಎದ್ದಿರುವುದು ಆಶ್ಚರ್ಯವೇನಿಲ್ಲ.

ಮಾಧ್ಯಮ ವರದಿಗಳು ʻಗುಪ್ತಚರ ಮೂಲʼಗಳನ್ನುಉಲ್ಲೇಖಿಸಿವೆ. ಒಂದು, ಹಸೀನಾ ಪದಚ್ಯುತಿಯಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್‌ ಎರಡೂ ಪಾತ್ರ ವಹಿಸಿವೆ. ವಿದ್ಯಾರ್ಥಿಗಳ ಪ್ರತಿಭಟನೆ ಕೇವಲ ನೆಪವಾಗಿತ್ತು. ಕೆಲವರು ʻಸ್ಪಷ್ಟ ಸಿಐಎ ಕೈವಾಡʼ ವನ್ನು ನೋಡಿದ್ದಾರೆ.

ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಮತ್ತು ಸೌದಿ ಅರೇಬಿಯಾದಲ್ಲಿ ಐಎಸ್‌ಐ ನಡುವಿನ ಸಭೆಗಳ ಪುರಾವೆಗಳನ್ನು ಹೊಂದಿರುವ ಬಾಂಗ್ಲಾದೇಶದ ಅಧಿಕಾರಿಗಳು ಮತ್ತೊಂದು ಹೇಳಿಕೆ ನೀಡಿದ್ದಾರೆ. ಸರ್ಕಾರವನ್ನು ಉರುಳಿಸುವ ಸಂಚು ಲಂಡನ್‌ನಲ್ಲಿ ರೂಪಿಸಲಾಗಿದೆ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಭಟನೆಯನ್ನು ಉತ್ತೇಜಿಸಲಾಯಿತು.

ವಿದೇಶಿ ಕೈವಾಡ?

ಸಂಭಾವ್ಯ ʻವಿದೇಶಿ ಕೈವಾಡʼ ಎಂಬ ಪ್ರಶ್ನೆಯನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಎತ್ತಿದ್ದಾರೆ; ನಿರ್ದಿಷ್ಟವಾಗಿ ಪಾಕಿಸ್ತಾನವನ್ನು ಉಲ್ಲೇಖಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ಜಾಗರೂಕತೆಯಿಂದ ಉತ್ತರ ನೀಡಿದರು- ಬಾಂಗ್ಲಾದೇಶದ ಅಶಾಂತಿಯಲ್ಲಿ ವಿದೇಶಿ ಸರ್ಕಾರಗಳ ಪಾತ್ರವನ್ನು ತಳ್ಳಿಹಾಕಲಾಗುವುದಿಲ್ಲ. ಆದರೆ, ಅನಿಶ್ಚಿತ ಪರಿಸ್ಥಿತಿ ಇರುವುದರಿಂದ ಇಂಥ ತೀರ್ಮಾನಕ್ಕೆ ಬರಲು ಆಗುವುದಿಲ್ಲ ಎಂದು ಒತ್ತಿ ಹೇಳಿದರು.

ಬಿಎನ್‌ಪಿ -ಜಮಾತ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ನಂತರದ ಭಾಗದಲ್ಲಿ ಸೇರಿಕೊಂಡರು. 2012-2015ರ ಅವಧಿಯಲ್ಲಿ ಬಾಂಗ್ಲಾ ದೇಶದಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಹಿರಿಯ ರಾಜತಾಂತ್ರಿಕ ಪಂಕಜ್ ಸರನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು, ʻರಾಜಕೀಯ ಸೇಡು ತೀರಿಸಿಕೊಳ್ಳಲು ವಿದ್ಯಾರ್ಥಿಗಳ ಸಮಸ್ಯೆಗಳನ್ನು ರಾಜಕೀಯ ಶಕ್ತಿಗಳು ಬಳಸಿಕೊಂಡಿರುವುದು ಸ್ಪಷ್ಟವಾಗಿದೆ.ʼ

ಮತ್ತೊಬ್ಬ ಮಾಜಿ ರಾಯಭಾರಿ ವೀಣಾ ಸಿಕ್ರಿ ಇದನ್ನು ಒಪ್ಪುತ್ತಾರೆ; ʻಇದು ಸಂಪೂರ್ಣವಾಗಿ ವಿದ್ಯಾರ್ಥಿ ಚಳವಳಿಯಾಗಿದ್ದರೆ, ಸರ್ಕಾರ ತನ್ನ ಬೇಡಿಕೆಗೆ ಸ್ಪಂದಿಸಿದ ನಂತರ ಅದು ವಿಸರ್ಜನೆ ಆಗಬೇಕಿತ್ತುʼ ಎಂದು ಹೇಳುತ್ತಾರೆ.

ಆದರೆ, ಹಸೀನಾ ಅವರ ಹಠಾತ್ ಪರಾರಿಯು ಭಾರತ ಒಳಗೊಂಡಂತೆ ಎಲ್ಲರನ್ನೂ ಆಶ್ಚರ್ಯಗೊಳಿಸಿತು. ಈಗ ಅಮೆರಿಕ ಹಾಗೂ ಮತ್ತು ಇಂಗ್ಲೆಂಡ್‌ ಎರಡೂ ದೇಶಗಳ ಬಾಗಿಲುಗಳು ಹಸೀನಾಗೆ ಮುಚ್ಚಲ್ಪಟ್ಟಿರುವುದರಿಂದ, ಅವರು ಅನಿಶ್ಚಿತ ಭವಿಷ್ಯದತ್ತ ನೋಡುತ್ತಿದ್ದಾರೆ. ಆದರೆ, ಆಕೆಯ ಗೌರವಾರ್ಹವಲ್ಲದ ನಿರ್ಗಮನದ ಸುತ್ತಲಿನ ಕಪ್ಪು ಮೋಡಗಳು ಸಂಪೂರ್ಣವಾಗಿ ತೆರವುಗೊಳ್ಳುವುದು ಅಸಂಭವ.

Read More
Next Story