
ಯುದ್ಧೋನ್ಮಾದ ಟ್ರಂಪ್‌ಗೆ ಶಾಂತಿ ಪ್ರಶಸ್ತಿ ನೀಡಲು ಯುದ್ಧ ನಿರತ ನೆತನ್ಯಾಹು ಒತ್ತಾಯ
ಒಂದೆಡೆ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಟ್ರಂಪ್, ಮತ್ತೊಂದೆಡೆ ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ನಂತರವೂ ಸಂಘರ್ಷದ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂಬ ಆರೋಪವಿದೆ.
ಗಾಜಾ ಹಾಗೂ ಇರಾನ್ ಜತೆ ಯುದ್ಧದಲ್ಲಿ ನಿರತರಾಗಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ. ಸೋಮವಾರ ಟ್ರಂಪ್ ಜತೆಗಿನ ಮೂರನೇ ಸುತ್ತಿನ ಸಭೆಯಲ್ಲಿ ನೆತನ್ಯಾಹು ಅವರು ಟ್ರಂಪ್‌ರನ್ನು "ಶಾಂತಿ ದೂತ" ಎಂದು ಬಣ್ಣಿಸಿ ಶಾಂತಿ ಪುರಸ್ಕಾರಕ್ಕೆ ಅರ್ಹ ಎಂದಿದ್ದಾರೆ!
ಈ ಭೇಟಿಯ ಸಂದರ್ಭದಲ್ಲಿ, ಟ್ರಂಪ್ ಅವರು ಗಾಜಾ ಯುದ್ಧವನ್ನು ಕೊನೆಗೊಳಿಸುವಂತೆ ನೆತನ್ಯಾಹು ಅವರನ್ನು ಒತ್ತಾಯಿಸಿದ್ದಾರೆ. "ಅಧ್ಯಕ್ಷರೇ, ನಾನು ನೊಬೆಲ್ ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ. ಇದು ನಿಮ್ಮನ್ನು ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತಿದೆ. ನೀವು ಅದಕ್ಕೆ ಅರ್ಹ ಮತ್ತು ಪಡೆಯಬೇಕು" ಎಂದು ನೆತನ್ಯಾಹು ಟ್ರಂಪ್‌ಗೆ ಪತ್ರ ಹಸ್ತಾಂತರ ಮಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ಜತೆಗಿನ ಸಮರದ ಬಳಿಕ ಕತಾರ್‌ನಲ್ಲಿ ಪರೋಕ್ಷ ಕದನ ವಿರಾಮ ಮಾತುಕತೆ ನಡೆದ ನಂತರ ಈ ಬೆಳವಣಿಗೆ ನಡೆದಿದೆ.
ಒಂದೆಡೆ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಟ್ರಂಪ್, ಮತ್ತೊಂದೆಡೆ ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ನಂತರವೂ ಸಂಘರ್ಷದ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂಬ ಆರೋಪವಿದೆ. ನಿಯಮವನ್ನು ಉಲ್ಲಂಘಿಸಿ ಇರಾನ್ ಮತ್ತೆ ಪರಮಾಣು ನೆಲೆಗಳ ಸ್ಥಾಪನೆಗೆ ಮುಂದಾದರೆ ಅದರ ಮೇಲೆ ಮತ್ತೆ ದಾಳಿ ನಡೆಸಲು ಟ್ರಂಪ್ ಇಸ್ರೇಲ್‌ಗೆ ಅನುಮತಿ ನೀಡಬಹುದು ಎಂದು ವರದಿಗಳು ತಿಳಿಸಿವೆ. ಜೂನ್ 24 ರಂದು ಟ್ರಂಪ್ ಮಧ್ಯಸ್ಥಿಕೆಯ ಕದನ ವಿರಾಮಕ್ಕೆ ಸಹಿ ಹಾಕಲಾಗಿದ್ದರೂ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಮತ್ತೆ ಹಳಿಗೆ ತರಲು ಪ್ರಯತ್ನಿಸಿದರೆ ಮತ್ತಷ್ಟು ಮಿಲಿಟರಿ ದಾಳಿಗಳ ಸಾಧ್ಯತೆಗೆ ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಪಾಕ್ನಿಂದಲೂ ಪ್ರಸ್ತಾಪ
ಪಾಕಿಸ್ತಾನವು ಕೂಡಾ ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಔಪಚಾರಿಕವಾಗಿ ನಾಮನಿರ್ದೇಶನ ಮಾಡಿತ್ತು. ಭಾರತ-ಪಾಕಿಸ್ತಾನ ಸೇನಾ ಉದ್ವಿಗ್ನತೆಯ ಸಂದರ್ಭದಲ್ಲಿ ಟ್ರಂಪ್ ಅವರ ರಾಜತಾಂತ್ರಿಕ ಮಧ್ಯಸ್ಥಿಕೆಯಿಂದ ಕದನ ವಿರಾಮ ಸಾಧ್ಯವಾಯಿತು ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.
ಅಮೆರಿಕದ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಮೈಕೆಲ್ ರೂಬಿನ್, ಟ್ರಂಪ್‌ರ ನೊಬೆಲ್ ಆಸೆಯ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಅವರು , "ಟ್ರಂಪ್ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದಿಲ್ಲ. ನೊಬೆಲ್ ಪ್ರಶಸ್ತಿಯ ದುರಾಸೆಯಿಂದ ಅವರು ಅಮೆರಿಕದ ಭದ್ರತೆಗೆ ಅಪಾಯವನ್ನುಂಟುಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದು ನೇರವಾಗಿ ಟೀಕಿಸಿದ್ದಾರೆ.