ಕೆನಡಾ, ಮೆಕ್ಸಿಕೋ ಮೇಲೆ ಶೇ.25 ತೆರಿಗೆ ಇಂದಿನಿಂದಲೇ ಜಾರಿ: ಟ್ರಂಪ್ ಘೋಷಣೆ
x

ಕೆನಡಾ, ಮೆಕ್ಸಿಕೋ ಮೇಲೆ ಶೇ.25 ತೆರಿಗೆ ಇಂದಿನಿಂದಲೇ ಜಾರಿ: ಟ್ರಂಪ್ ಘೋಷಣೆ

ಶ್ವೇತಭವನದಲ್ಲಿ ಮಂಗಳವಾರ ಮಾತನಾಡಿದ ಟ್ರಂಪ್, "ಮೆಕ್ಸಿಕೋ ಮತ್ತು ಕೆನಡಾ ಮೇಲೆ ಸುಂಕ ಹೇರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರು ಸುಂಕ ಪಾವತಿಸಲೇಬೇಕು. ಇಂದಿನಿಂದಲೇ ಅದು ಜಾರಿಗೆ ಬರಲಿದೆ" ಎಂದು ಹೇಳಿದ್ದಾರೆ.


ವಾಷಿಂಗ್ಟನ್: ಮೆಕ್ಸಿಕೋ ಮತ್ತು ಕೆನಡಾದ ಸರಕುಗಳ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವ ನಿರ್ಧಾರವು ಮಂಗಳವಾರದಿಂದಲೇ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಘೋಷಣೆಯು ಉತ್ತರ ಅಮೆರಿಕದಲ್ಲಿ ವ್ಯಾಪಾರ ಯುದ್ಧ ಭೀತಿ ಹುಟ್ಟುಹಾಕಿದೆ.

ಟ್ರಂಪ್ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಜಾಗತಿಕ ಷೇರು ಮಾರುಕಟ್ಟೆ ಕುಸಿದು ಬಿದ್ದವು. ಮೆಕ್ಸಿಕನ್ ಪೆಸೊ ಮತ್ತು ಕೆನಡಿಯನ್ ಡಾಲರ್‌ಗಳೂ ಮೌಲ್ಯ ಕಳೆದುಕೊಂಡವು. .

ಶ್ವೇತಭವನದಲ್ಲಿ ಮಂಗಳವಾರ ಮಾತನಾಡಿದ ಟ್ರಂಪ್, "ಮೆಕ್ಸಿಕೋ ಮತ್ತು ಕೆನಡಾ ಮೇಲೆ ಸುಂಕ ಹೇರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರು ಸುಂಕ ಪಾವತಿಸಲೇಬೇಕು. ಇಂದಿನಿಂದಲೇ ಅದು ಜಾರಿಗೆ ಬರಲಿದೆ" ಎಂದು ಹೇಳಿದ್ದಾರೆ.

ಇದೇ ವೇಳೆ, ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಎಲ್ಲ ದೇಶಗಳಿಗೂ ಪ್ರತಿ ತೆರಿಗೆ ವಿಧಿಸುವ ನಿರ್ಧಾರವು ಏಪ್ರಿಲ್ 2ರಿಂದಲೇ ಜಾರಿಗೆ ಬರಲಿವೆ ಎಂದೂ ಟ್ರಂಪ್ ಘೋಷಿಸಿದ್ದಾರೆ. ಇದು ಜಾರಿಯಾದರೆ ಭಾರತಕ್ಕೂ ಅದರ ಬಿಸಿ ತಟ್ಟಲಿದೆ.

ಚೀನಾಕ್ಕೂ ಪ್ರತಿಕಾರ

ಅಮೆರಿಕಕ್ಕೆ ಫೆಂಟಾನಿಲ್ ಸಾಗಣೆ ಮುಂದುವರಿಸಿರುವ ಚೀನಾ ವಿರುದ್ಧವೂ ಕೆಂಡಕಾರಿರುವ ಟ್ರಂಪ್, ಬೀಜಿಂಗ್‌ನ ಈ ನಡೆಗೆ ತಕ್ಕ ಶಿಕ್ಷೆ ನೀಡುತ್ತೇವೆ. ಚೀನಾದ ಆಮದಿನ ಮೇಲಿನ ಸುಂಕವನ್ನು ಹಿಂದಿನ ಶೇಕಡಾ 10ರಿಂದ 20ಕ್ಕೆ ಹೆಚ್ಚಿಸುತ್ತೇನೆ ಎಂದೂ ಘೋಷಿಸಿದ್ದಾರೆ.

ಅಮೆರಿಕಕ್ಕೆ ವರ್ಷಕ್ಕೆ 900 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಕೆನಡಾ ಮತ್ತು ಮೆಕ್ಸಿಕೋ ರಫ್ತು ಮಾಡುತ್ತವೆ. ಈಗ ಟ್ರಂಪ್ ಸುಂಕದ ನಿರ್ಧಾರವು ಉತ್ತರ ಅಮೆರಿಕದ ಆರ್ಥಿಕತೆಗೆ ಗಂಭೀರ ಹಿನ್ನಡೆಯನ್ನುಂಟು ಮಾಡಲಿದೆ ಎಂದು ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮೆಕ್ಸಿಕೋ ಪ್ರತಿಕ್ರಿಯೆ ಹೇಗಿತ್ತು?

ಮೆಕ್ಸಿಕೋ ಕೊನೆಯ ಕ್ಷಣದಲ್ಲಿ ಟ್ರಂಪ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಟ್ರಂಪ್ ಅವರ ಮೊದಲ ಸುತ್ತಿನ ಸುಂಕದಿಂದ ತಪ್ಪಿಸಿಕೊಂಡಿತ್ತು. ಅಲ್ಲದೇ, ಮಾದಕವಸ್ತು ನಿಗ್ರಹ ಕ್ರಮಗಳನ್ನೂ ಹೆಚ್ಚಿಸಿ ಟ್ರಂಪ್‌ರನ್ನು ಸಮಾಧಾನಪಡಿಸಲು ಪ್ರಯತ್ನಿಸಿತ್ತು. ಆದರೆ, ಈಗ ಟ್ರಂಪ್ ಸುಂಕದ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೆನ್ಬಾಮ್, “ನಾವು ಟ್ರಂಪ್ ಘೋಷಣೆಯನ್ನು ನಿರೀಕ್ಷಿಸಿದ್ದೆವು. ಹೀಗಾಗಿ ಶಾಂತವಾಗಿದ್ದೇವೆ. ಅವರು ಸುಂಕ ಹೇರಿದ್ದೇ ಆದಲ್ಲಿ ಅದಕ್ಕೆ ಪ್ರತಿಕ್ರಿಯಿಸಲೂ ನಾವು ಸಿದ್ಧರಾಗಿದ್ದೇವೆ” ಎಂದಿದ್ದಾರೆ. ಜೊತೆಗೆ "ನಮ್ಮ ಬಳಿ ಪ್ಲಾನ್ ಬಿ, ಸಿ, ಡಿ ಎಲ್ಲವೂ ಇದೆ" ಎಂದಿದ್ದಾರೆ.

ಕೆನಡಾ ಮತ್ತು ಮೆಕ್ಸಿಕೋದ ಮೇಲೆ ಸುಂಕವನ್ನು ಮುಂದುವರಿಸುವ ನಿರ್ಧಾರವು ಅಮೆರಿಕದ ಕುಟುಂಬಗಳಿಗೆ ದುಬಾರಿಯಾಗಿ ಪರಿಣಮಿಸಲಿದೆ. ಕಿರಾಣಿ ಅಂಗಡಿ, ಗ್ಯಾಸ್ ಸ್ಟೇಷನ್ ಮತ್ತು ಫಾರ್ಮಸಿಗೆ ಅಮೆರಿಕದ ಜನರು ಸಾವಿರಾರು ಡಾಲರ್ ಗಳನ್ನು ವೆಚ್ಚ ಮಾಡಬೇಕಾಗಿ ಬರಲಿದೆ ಎಂದು ವಾಷಿಂಗ್ಟನ್‌ನ ಡೆಮಾಕ್ರಟಿಕ್ ಪ್ರತಿನಿಧಿ ಸುಜಾನ್ ಡೆಲ್ಬೆನ್ ಹೇಳಿದ್ದಾರೆ.

Read More
Next Story