
ವಿಯೆಟ್ನಾಂ ದೋಣಿ ದುರಂತ: ಮೃತಪಟ್ಟ ಭಾರತೀಯರು ಲಾವಾ ಮೊಬೈಲ್ಸ್ ಕಂಪನಿಯ ಸಿಬ್ಬಂದಿ
ಘಟನೆ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಲಾವಾ ಮೊಬೈಲ್ಸ್, ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವುದೇ ತಮ್ಮ ಮೊದಲ ಆದ್ಯತೆ ಎಂದು ಪ್ರಕಟಿಸಿದೆ.
ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಸಮೀಪ ಪ್ರವಾಸಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ 15 ಮಂದಿ ಭಾರತೀಯರು ಜಲಸಮಾಧಿಯಾಗಿದ್ದಾರೆ. ಇವರೆಲ್ಲರೂ 'ಲಾವಾ ಮೊಬೈಲ್ಸ್' ಸಂಸ್ಥೆ ಆಯೋಜಿಸಿದ್ದ ಪ್ರವಾಸದ ಅಂಗವಾಗಿ ವಿಯೆಟ್ನಾಂಗೆ ತೆರಳಿದ್ದರು. ಮೃತರೆಲ್ಲರೂ ದಕ್ಷಿಣ ಭಾರತದವರಾಗಿದ್ದು, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ಮೂಲದವರಾಗಿದ್ದಾರೆ.
ವಿಯೆಟ್ನಾಂನ ಹನೋಯ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ದೋಣಿಯಲ್ಲಿ ಒಟ್ಟು 36 ಮಂದಿ ಇದ್ದರು. ಈ ಪೈಕಿ 32 ಭಾರತೀಯ ಪ್ರವಾಸಿಗರು ಮತ್ತು ನಾಲ್ವರು ಸ್ಥಳೀಯ ಸಿಬ್ಬಂದಿ ಸೇರಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿ 21 ಜನರನ್ನು ರಕ್ಷಿಸಲಾಗಿದ್ದು, 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ 10 ಮಂದಿ ತಮಿಳುನಾಡು, ಮೂವರು ಆಂಧ್ರಪ್ರದೇಶ ಹಾಗೂ ಇಬ್ಬರು ಕೇರಳ ಮೂಲದವರು. ಇವರಲ್ಲಿ 14 ಮಂದಿ ಲಾವಾ ಮೊಬೈಲ್ಸ್‌ನ ಚಾನೆಲ್ ಪಾಲುದಾರರಾಗಿದ್ದರೆ, ಒಬ್ಬರು ಕಂಪನಿಯ ಸಿಬ್ಬಂದಿಯಾಗಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ವಿತರಕರು, ಮಾರಾಟಗಾರರು ಹಾಗೂ ವ್ಯಾಪಾರ ಪಾಲುದಾರರಿಗಾಗಿ ಸಂಸ್ಥೆಯು ಈ ಪ್ರವಾಸವನ್ನು ಆಯೋಜಿಸಿತ್ತು.
ನೂರು ಮೀಟರ್ ದೂರದಲ್ಲಿ ನಡೆದ ಘಟನೆ
ಸ್ಥಳೀಯ ಕಾಲಮಾನ ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಹಾನ್ ಮೇ ರುಟ್ ನ್ಗೋಯ್ ದ್ವೀಪದಿಂದ ದೋಣಿ ಹೊರಟ ಕೆಲವೇ ನೂರು ಮೀಟರ್‌ಗಳಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಲೆಗಳ ಅಬ್ಬರ ಮತ್ತು ಮಿತಿಮೀರಿದ ಜನಸಂದಣಿಯಿಂದಾಗಿ ಕೇವಲ ಕೆಲವೇ ಸೆಕೆಂಡ್‌ಗಳಲ್ಲಿ ಸ್ಪೀಡ್ ಬೋಟ್ ಮಗುಚಿ ಬಿತ್ತು ಎಂದು ದುರಂತದಿಂದ ಪಾರಾದ ತಮಿಳುನಾಡಿನ ಪಳನಿ ಮೂಲದ ನಿರ್ಮಲ್ ಕುಮಾರ್ ತಿಳಿಸಿದ್ದಾರೆ. ರಕ್ಷಿಸಲ್ಪಟ್ಟವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಲಾವಾ ಮೊಬೈಲ್ಸ್, ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವುದೇ ತಮ್ಮ ಮೊದಲ ಆದ್ಯತೆ ಎಂದು ಪ್ರಕಟಿಸಿದೆ. ಮೃತರ ಪಾರ್ಥಿವ ಶರೀರಗಳನ್ನು ಆದಷ್ಟು ಬೇಗ ತಾಯ್ನಾಡಿಗೆ ತರಲು ಭಾರತೀಯ ರಾಯಭಾರ ಕಚೇರಿ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿರುವುದಾಗಿ ಕಂಪನಿ ತಿಳಿಸಿದೆ.
ಗಣ್ಯರ ಸಂತಾಪ
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಪಾರ್ಥಿವ ಶರೀರಗಳನ್ನು ತಾಯ್ನಾಡಿಗೆ ತರಲು ಹಾಗೂ ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಿವೆ. ಪ್ರಸ್ತುತ ದೋಣಿ ದುರಂತದ ನಿಖರ ಕಾರಣದ ಬಗ್ಗೆ ಸ್ಥಳೀಯ ಆಡಳಿತ ತನಿಖೆ ನಡೆಸುತ್ತಿದೆ.

