
ವೆನೆಜುವೆಲಾದಲ್ಲಿ ಭೀಕರ ಅವಳಿ ಭೂಕಂಪ- ವಿಮಾನ ನಿಲ್ದಾಣ ಬಂದ್, ಜನರಲ್ಲಿ ಆತಂಕ
ವೆನೆಜುವೆಲಾದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿ ಭಾರೀ ಹಾನಿ ಉಂಟಾಗಿದೆ. ಕರಾಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿದ್ದು, ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ.
ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ದೇಶವನ್ನೇ ಬೆಚ್ಚಿಬೀಳಿಸಿವೆ. 7.2 ಮತ್ತು 7.5 ತೀವ್ರತೆಯ ಅವಳಿ ಭೂಕಂಪಗಳು ಅಲ್ಪಾವಧಿಯ ಅಂತರದಲ್ಲಿ ಸಂಭವಿಸಿದ್ದು, ಹಲವು ಕಟ್ಟಡಗಳು ಕುಸಿದುಬಿದ್ದಿವೆ. ಜನರು ಭಯಭೀತರಾಗಿ ರಸ್ತೆಗಳಿಗೆ ಓಡಿ ಬಂದಿದ್ದಾರೆ.
ವೆನೆಜುವೆಲಾದ ಕರಾವಳಿ ಪ್ರದೇಶದ ಸಮೀಪ ಭೂಕಂಪ ಸಂಭವಿಸಿದ್ದು, ಅದರ ಕಂಪನವು ಬ್ರೆಜಿಲ್‌ನ ಅಮೆಜಾನ್ ಪ್ರದೇಶ ಸೇರಿದಂತೆ ಸುಮಾರು 1,700 ಕಿಲೋಮೀಟರ್ ದೂರದವರೆಗೂ ಅನುಭವವಾಗಿದೆ. ರಾಜಧಾನಿ ಕರಾಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳನ್ನು ಖಾಲಿ ಮಾಡಿಸಲಾಗಿದೆ.
ವಿಮಾನ ನಿಲ್ದಾಣ ಬಂದ್
ತಾತ್ಕಾಲಿಕ ಅಧ್ಯಕ್ಷೆ ಡೆಲ್ಸಿ ರೋಡ್ರಿಗ್ಸ್ ದೇಶವನ್ನುದ್ದೇಶಿಸಿ ಮಾತನಾಡಿ, ಹಲವು ರಾಜ್ಯಗಳಲ್ಲಿ ಭೂಕಂಪದಿಂದ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಆದರೆ ಸಾವುನೋವು ಹಾಗೂ ಗಾಯಾಳುಗಳ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಭೂಕಂಪದಿಂದ ದೇಶದ ಪ್ರಮುಖ ಸೈಮನ್ ಬೊಲಿವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೀವ್ರ ಹಾನಿಯಾಗಿದ್ದು, ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಅಲ್ಲದೇ ಶಾಲಾ-ಕಾಲೇಜುಗಳಿಗೆ ಕೆಲವು ದಿನಗಳ ರಜೆ ಘೋಷಿಸಲಾಗಿದೆ.
32 ಮಂದಿ ಆಸ್ಪತ್ರೆಗೆ ದಾಖಲು
ಫಾಲ್ಕನ್ ರಾಜ್ಯದ ಗವರ್ನರ್ ವಿಕ್ಟರ್ ಕ್ಲಾರ್ಕ್ ಮಾಹಿತಿ ನೀಡಿದ್ದು, ಕನಿಷ್ಠ 32 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಹಲವು ಗಂಟೆಗಳ ಬಳಿಕವೂ 15 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (USGS) ಪ್ರಕಾರ ಮೊದಲ ಭೂಕಂಪದ ತೀವ್ರತೆ 7.2 ಆಗಿದ್ದು, ಮೊರೊನ್ ಪಟ್ಟಣದ ಪಶ್ಚಿಮ ಭಾಗದಲ್ಲಿ ಕೇಂದ್ರಬಿಂದುವನ್ನು ಹೊಂದಿತ್ತು. ಭೂಮಿಯ ಒಳಭಾಗದಲ್ಲಿ ಸುಮಾರು 22 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ. ಇದಾದ ಕೇವಲ ಒಂದು ನಿಮಿಷದ ಬಳಿಕ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು ಮೊರೊನ್‌ನ ದಕ್ಷಿಣ-ಪಶ್ಚಿಮ ಭಾಗದಲ್ಲಿ 10 ಕಿಲೋಮೀಟರ್ ಆಳದಲ್ಲಿತ್ತು.
Passengers panic and run for cover at Simón Bolívar International Airport in Maiquetía, Venezuela, as the terminal shakes and power flickers, resulting from a massive 7.5 magnitude earthquake off the coast of Caracas. pic.twitter.com/uWN4ZqFjOZ
— OSINTdefender (@sentdefender) June 24, 2026
ರಸ್ತೆಗಳತ್ತ ಓಡಿದ ಜನ
ಭೂಕಂಪದ ತೀವ್ರತೆಗೆ ಕರಾಕಾಸ್‌ನ ಕಟ್ಟಡಗಳು ತೀವ್ರವಾಗಿ ನಡುಗಿದ್ದು, ಹಲವಾರು ಕಟ್ಟಡಗಳ ಗೋಡೆಗಳು ಕುಸಿದು ಬಿದ್ದಿವೆ. ಧೂಳಿನ ಮೋಡಗಳು ಆವರಿಸಿಕೊಂಡಿದ್ದು, ವಿದ್ಯುತ್ ಹಾಗೂ ಮೊಬೈಲ್ ಸಂಪರ್ಕವೂ ಹಲವು ಪ್ರದೇಶಗಳಲ್ಲಿ ಸ್ಥಗಿತಗೊಂಡಿದೆ. "ಮೊದಲು ಸಣ್ಣ ಕಂಪನದಂತೆ ಅನಿಸಿತು. ನಂತರ ನಿಧಾನವಾಗಿ ತೀವ್ರಗೊಂಡಿತು. ನಾವು ಎಲ್ಲರೂ ಮನೆ ಬಿಟ್ಟು ಹೊರಗೆ ಬರಬೇಕಾಯಿತು" ಎಂದು ಸ್ಥಳೀಯ ನಿವಾಸಿ ಹೆಕ್ಟರ್ ರಿಕ್ಕಿ ತಿಳಿಸಿದ್ದಾರೆ.
ಭೂಕಂಪದ ಬಳಿಕ ಆತಂಕ
ಸೂರ್ಯಾಸ್ತದ ಬಳಿಕವೂ ಸಾವಿರಾರು ಜನರು ರಸ್ತೆಗಳಲ್ಲೇ ಉಳಿದಿದ್ದರು. ಸಾಕುಪ್ರಾಣಿಗಳನ್ನು ಮಡಿಲಲ್ಲಿ ಹಿಡಿದು ಹಲವರು ತೆರದ ಪ್ರದೇಶಗಳಲ್ಲಿ ಕುಳಿತಿದ್ದರು. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಅವಶೇಷಗಳು ರಸ್ತೆಗಳನ್ನು ಮುಚ್ಚಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ
ವೆನೆಜುವೆಲಾದ ಪ್ರತಿಪಕ್ಷ ನಾಯಕಿ ಮರಿಯಾ ಕೊರಿನಾ ಮಚಾಡೋ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದು, "ಈ ಸಂಕಷ್ಟದ ಸಮಯದಲ್ಲಿ ದೇಶದಲ್ಲಿ ಧೈರ್ಯ ಮತ್ತು ಐಕ್ಯತೆ ಉಳಿಯಲಿ" ಎಂದು ಹೇಳಿದ್ದಾರೆ. ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಕೂಡ ವೆನೆಜುವಾ ಜನತೆಗೆ ಬೆಂಬಲ ಸೂಚಿಸಿದ್ದಾರೆ.
ಬ್ರೆಜಿಲ್, ಕೊಲಂಬಿಯಾದಲ್ಲೂ ಕಂಪನದ ಅನುಭವ
ಭೂಕಂಪದ ಕಂಪನವು ಬ್ರೆಜಿಲ್‌ನ ಮನೌಸ್, ಬೆಲೆಮ್ ಮತ್ತು ಮಕಾಪಾ ನಗರಗಳಲ್ಲಿಯೂ ಅನುಭವವಾಗಿದೆ. ಅಲ್ಲಿನ ಕೆಲವು ಕಟ್ಟಡಗಳನ್ನು ಕೂಡ ಖಾಲಿ ಮಾಡಲಾಗಿದೆ. ಕೊಲಂಬಿಯಾದ ಕರಾವಳಿ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದ್ದು, ಯಾವುದೇ ಹಾನಿ ಅಥವಾ ಗಾಯಾಳುಗಳ ವರದಿಯಾಗಿಲ್ಲ.
ಸುನಾಮಿ ಎಚ್ಚರಿಕೆ
ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ವರ್ಜಿನ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಿತ್ತು. ಡೊಮಿನಿಕನ್ ರಿಪಬ್ಲಿಕ್‌ನಲ್ಲೂ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಬಳಿಕ ಕೆಲವು ಎಚ್ಚರಿಕೆಗಳನ್ನು ಹಿಂತೆಗೆದುಕೊಳ್ಳಲಾಗಿದೆ. ವೆನೆಜುವೆಲಾದಲ್ಲಿ ಇಷ್ಟು ಪ್ರಬಲ ಭೂಕಂಪಗಳು ಅಪರೂಪವಾಗಿದ್ದು, ಕಳೆದ ಶತಮಾನದಲ್ಲೇ ಸಂಭವಿಸಿದ ಅತ್ಯಂತ ತೀವ್ರ ಭೂಕಂಪಗಳಲ್ಲಿ ಇದೂ ಒಂದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

