ಟ್ರಂಪ್ ಆರ್ಥಿಕ ನೀತಿಗೆ ಭಾರಿ ಹಿನ್ನಡೆ: ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್
x

ಟ್ರಂಪ್ ಆರ್ಥಿಕ ನೀತಿಗೆ ಭಾರಿ ಹಿನ್ನಡೆ: ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಳಸಬೇಕಾದ ವಿಶೇಷ ಅಧಿಕಾರವನ್ನು ಬಳಸಿ ಟ್ರಂಪ್ ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸಿದ್ದರು.


Click the Play button to hear this message in audio format

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಿತ 'ಜಾಗತಿಕ ಸುಂಕ' ನೀತಿಗೆ ಅಮೆರಿಕದ ಸುಪ್ರೀಂ ಕೋರ್ಟ್ ಪೆಟ್ಟು ಕೊಟ್ಟಿದೆ. ಅಧ್ಯಕ್ಷೀಯ ಅಧಿಕಾರದ ದುರುಪಯೋಗವನ್ನು ತೀವ್ರವಾಗಿ ಖಂಡಿಸಿರುವ ನ್ಯಾಯಾಲಯವು, ಟ್ರಂಪ್ ವಿಧಿಸಿದ್ದ ಬಹುತೇಕ ಸುಂಕಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ಶುಕ್ರವಾರ (ಫೆಬ್ರವರಿ 20) ತೀರ್ಪು ನೀಡಿದೆ. ಈ ನಿರ್ಧಾರವು ಟ್ರಂಪ್ ಅವರ ಆರ್ಥಿಕ ಕಾರ್ಯಸೂಚಿಗೆ ಮತ್ತು ಅವರ 'ರೆಸಿಪ್ರೋಕಲ್ ಸುಂಕ'ಗಳ (ಪರಸ್ಪರ ಸುಂಕ) ನೀತಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಳಸಬೇಕಾದ ವಿಶೇಷ ಅಧಿಕಾರವನ್ನು ಬಳಸಿ ಟ್ರಂಪ್ ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ 6-3 ಸದಸ್ಯರ ಪೀಠವು, ತೆರಿಗೆ ವಿಧಿಸುವ ಅಧಿಕಾರವು ಸಂವಿಧಾನಬದ್ಧವಾಗಿ ಸಂಸತ್ತಿಗೆ ಸೇರಿದ್ದೇ ಹೊರತು ಅಧ್ಯಕ್ಷರಿಗಲ್ಲ ಎಂದು ಸ್ಪಷ್ಟಪಡಿಸಿದೆ.

ತೀರ್ಪಿನ ಕುರಿತು ಬರೆದಿರುವ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, "ತೆರಿಗೆ ವಿಧಿಸುವ ಅಥವಾ ಸುಂಕಗಳನ್ನು ಹೇರುವ ಅಧಿಕಾರವನ್ನು ಸಂವಿಧಾನವು ಅತ್ಯಂತ ಸ್ಪಷ್ಟವಾಗಿ ಕಾಂಗ್ರೆಸ್‌ಗೆ ನೀಡಿದೆ. ಸಂವಿಧಾನ ಶಿಲ್ಪಿಗಳು ಈ ಅಧಿಕಾರದ ಯಾವುದೇ ಭಾಗವನ್ನು ಕಾರ್ಯಾಂಗಕ್ಕೆ ಹಸ್ತಾಂತರಿಸಿಲ್ಲ" ಎಂದು ಗುಡುಗಿದ್ದಾರೆ.

ಮೂವರು ನ್ಯಾಯಮೂರ್ತಿಗಳ ಭಿನ್ನಾಭಿಪ್ರಾಯ

ವಿಶೇಷವೆಂದರೆ, ಟ್ರಂಪ್ ಅವರ ಮೊದಲ ಅವಧಿಯಲ್ಲಿ ನೇಮಕಗೊಂಡಿದ್ದ ನ್ಯಾಯಮೂರ್ತಿಗಳೂ ಸೇರಿದಂತೆ ಒಟ್ಟು ಒಂಬತ್ತು ನ್ಯಾಯಮೂರ್ತಿಗಳಲ್ಲಿ ಮೂವರು ಈ ತೀರ್ಪಿಗೆ ಅಸಮ್ಮತಿ ಸೂಚಿಸಿದ್ದಾರೆ. ನ್ಯಾಯಮೂರ್ತಿಗಳಾದ ಸ್ಯಾಮ್ಯುಯೆಲ್ ಅಲಿಟೊ, ಕ್ಲಾರೆನ್ಸ್ ಥಾಮಸ್ ಮತ್ತು ಬ್ರೆಟ್ ಕವನಾಗ್ ಅವರು ಸುಂಕದ ಪರವಾಗಿ ಧ್ವನಿ ಎತ್ತಿದ್ದಾರೆ. "ಈ ಸುಂಕಗಳ ನೀತಿಯು ಸರಿಯೋ ತಪ್ಪೋ ಎಂಬುದು ಚರ್ಚಾರ್ಹ ಇರಬಹುದು. ಆದರೆ ಇತಿಹಾಸ ಮತ್ತು ಪೂರ್ವನಿದರ್ಶನಗಳನ್ನು ಗಮನಿಸಿದರೆ ಈ ಸುಂಕಗಳು ಕಾನೂನುಬದ್ಧವಾಗಿವೆ" ಎಂದು ಕವನಾಗ್ ತಮ್ಮ ಅಸಮ್ಮತಿ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.

ಟ್ರಂಪ್ ಮುಂದಿರುವ ಆಯ್ಕೆಗಳೇನು?

ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಈಗಿರುವ ಸುಂಕದ ಚೌಕಟ್ಟು ಸಡಿಲಗೊಂಡಿದ್ದರೂ, ಟ್ರಂಪ್ ಅವರಿಗೆ ಸುಂಕ ವಿಧಿಸಲು ಇತರ ಕಾನೂನುಗಳ ಅಡಿಯಲ್ಲಿ ಅವಕಾಶಗಳಿವೆ. ಆದರೆ, ಆ ಕಾನೂನುಗಳು ರಾಷ್ಟ್ರೀಯ ತುರ್ತು ಅಧಿಕಾರದಷ್ಟು ವೇಗವಾಗಿ ಅಥವಾ ಕಠಿಣವಾಗಿ ಸುಂಕ ವಿಧಿಸಲು ಅನುವು ಮಾಡಿಕೊಡುವುದಿಲ್ಲ. ಈ ಹಿನ್ನಡೆಯ ಹೊರತಾಗಿಯೂ, ಇತರ ಕಾನೂನು ಪ್ರಕ್ರಿಯೆಗಳ ಮೂಲಕ ಸುಂಕದ ನೀತಿಯನ್ನು ಮುಂದುವರಿಸುವುದಾಗಿ ಶ್ವೇತಭವನದ ಉನ್ನತ ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಫೆಡರಲ್ ಅನುದಾನ ಕಡಿತ ಮತ್ತು ಹಿರಿಯ ಅಧಿಕಾರಿಗಳ ವಜಾದಂತಹ ವಿಷಯಗಳಲ್ಲಿ ಸರಣಿ ಜಯ ಗಳಿಸುತ್ತಿದ್ದ ಟ್ರಂಪ್‌ ಅವರಿಗೆ, ಈ ಸುಂಕದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅವರ 'ಅಪರಿಮಿತ ಅಧಿಕಾರ'ಕ್ಕೆ ಕಡಿವಾಣ ಹಾಕಿದಂತಾಗಿದೆ.

Read More
Next Story