Deportation rules get tougher; US Supreme Court shocks green card holders!
x

ಎಐ ಆಧಾರಿತ ಚಿತ್ರ

ಗಡೀಪಾರು ನಿಯಮ ಮತ್ತಷ್ಟು ಕಠಿಣ; ಗ್ರೀನ್ ಕಾರ್ಡ್ ಹೊಂದಿರುವವರಿಗೆ ಯುಎಸ್ ಸುಪ್ರೀಂ ಕೋರ್ಟ್ ಶಾಕ್!

ಈ ತೀರ್ಪಿನಿಂದಾಗಿ ಯುಎಸ್ ಗಡಿ ಏಜೆಂಟರಿಗೆ ಪ್ರವೇಶ ಬಂದರುಗಳಲ್ಲಿ ಗ್ರೀನ್ ಕಾರ್ಡ್ ಹೊಂದಿರುವವರ ವಿರುದ್ಧ ಗಡೀಪಾರು ಪ್ರಕ್ರಿಯೆಗಳನ್ನು ತಕ್ಷಣವೇ ಪ್ರಾರಂಭಿಸಲು ವ್ಯಾಪಕ ಅಧಿಕಾರ ಸಿಕ್ಕಂತಾಗಿದೆ.


Click the Play button to hear this message in audio format

ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ಗ್ರೀನ್ ಕಾರ್ಡ್ (Green Card) ದಾರರಿಗೆ, ಅದರಲ್ಲೂ ವಿಶೇಷವಾಗಿ ಕಾನೂನು ಸಂಘರ್ಷಗಳನ್ನು ಎದುರಿಸುತ್ತಿರುವ ವಲಸಿಗರಿಗೆ ಅಮೆರಿಕದ ಸುಪ್ರೀಂ ಕೋರ್ಟ್ ಭಾರೀ ಆಘಾತ ನೀಡಿದೆ.

ಅಮೆರಿಕದ ಗಡಿ ಭದ್ರತಾ ಅಧಿಕಾರಿಗಳು ಗ್ರೀನ್ ಕಾರ್ಡ್ ಹೊಂದಿರುವ ವ್ಯಕ್ತಿಯೊಬ್ಬರು ಯಾವುದೇ ಅಪರಾಧ ಎಸಗಿದ್ದಾರೆ (ನೈತಿಕ ಅಧಃಫತನ) ಎಂಬುದನ್ನು ಸ್ಪಷ್ಟ ಪುರಾವೆಗಳೊಂದಿಗೆ ಸಾಬೀತುಪಡಿಸದಿದ್ದರೂ, ಕೇವಲ ಆರೋಪಗಳ ಆಧಾರದ ಮೇಲೆ ಅವರಿಗೆ ದೇಶದೊಳಗೆ ಮರುಪ್ರವೇಶವನ್ನು ನಿರಾಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಂಗಳವಾರ (ಜೂನ್ 23, 2026) ಹೊರಬಿದ್ದಿರುವ ಈ ತೀರ್ಪು ಅಮೆರಿಕದ ವಲಸೆ ನೀತಿ ಹಾಗೂ ಗ್ರೀನ್ ಕಾರ್ಡ್ ದಾರರ ಹಕ್ಕುಗಳ ವಿಚಾರದಲ್ಲಿ ದೊಡ್ಡ ಸಂಚಲನ ಹಾಗೂ ಆತಂಕವನ್ನು ಮೂಡಿಸಿದೆ.

ಬ್ಲಾಂಚೆ ವಿರುದ್ಧ ಲಾವ್ ಪ್ರಕರಣದ ಹಿನ್ನೆಲೆ

ಈ ಮಹತ್ವದ ತೀರ್ಪು ಹೊರಬಿದ್ದಿರುವುದು 'ಬ್ಲಾಂಚೆ ವಿರುದ್ಧ ಮುಕ್ ಚೋಯ್ ಲಾವ್' (Blanche v. Lau) ಎಂಬ ಬಹುಚರ್ಚಿತ ಪ್ರಕರಣದಲ್ಲಿ. ಮುಕ್ ಚೋಯ್ ಲಾವ್ ಎಂಬ ಚೀನಾ ಮೂಲದ ವ್ಯಕ್ತಿ 2007ರಲ್ಲಿ ಅಮೆರಿಕದ ಗ್ರೀನ್ ಕಾರ್ಡ್ ಪಡೆದಿದ್ದರು. 2012ರಲ್ಲಿ ಇವರ ವಿರುದ್ಧ ನ್ಯೂಜೆರ್ಸಿ ರಾಜ್ಯದಲ್ಲಿ ನಕಲಿ ಟ್ರೇಡ್‌ಮಾರ್ಕ್ ಬಳಕೆ ಮಾಡಿದ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಬಾಕಿ ಇರುವಾಗಲೇ ಲಾವ್ ಅವರು ಅಲ್ಪಾವಧಿ ಭೇಟಿಗಾಗಿ ಚೀನಾಕ್ಕೆ ಪ್ರಯಾಣ ಬೆಳೆಸಿದ್ದರು. ಅವರು ಮರಳಿ ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಮೆರಿಕ ಪ್ರವೇಶಿಸಲು ಯತ್ನಿಸಿದಾಗ, ಗಡಿ ಅಧಿಕಾರಿಗಳು ಅವರ ಮೇಲಿದ್ದ ಕ್ರಿಮಿನಲ್ ಆರೋಪದ ಹಿನ್ನೆಲೆಯಲ್ಲಿ ಸಾಮಾನ್ಯ ಗ್ರೀನ್ ಕಾರ್ಡ್ ದಾರರಿಗೆ ಸಿಗುವ ನೇರ ಮರುಪ್ರವೇಶದ ಹಕ್ಕನ್ನು ನಿರಾಕರಿಸಿದ್ದರು. ಬದಲಾಗಿ, ಅವರನ್ನು ಕೇವಲ 'ಪ್ರವೇಶ ಕೋರುತ್ತಿರುವ ಅರ್ಜಿದಾರ' ಎಂದು ಪರಿಗಣಿಸಿ ಷರತ್ತುಬದ್ಧ ಪೆರೋಲ್ ಪ್ರವೇಶ ನೀಡಿದ್ದರು. ನಂತರದ ದಿನಗಳಲ್ಲಿ ಲಾವ್ ಅವರು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದರಿಂದ ಅವರನ್ನು ಗಡೀಪಾರು ಮಾಡಲು ಆದೇಶಿಸಲಾಗಿತ್ತು. ಆದರೆ, ತಾವು ಅಮೆರಿಕಕ್ಕೆ ಮರಳಿದ ಸಮಯದಲ್ಲಿ ತಮ್ಮ ಮೇಲಿನ ಆರೋಪ ಸಾಬೀತಾಗಿರಲಿಲ್ಲ, ಹೀಗಾಗಿ ಅಧಿಕಾರಿಗಳು ಮರುಪ್ರವೇಶ ನಿರಾಕರಿಸಿದ್ದು ಕಾನೂನುಬಾಹಿರ ಎಂದು ಲಾವ್ ಮೇಲ್ಮನವಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ?

ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಅಮೆರಿಕ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠದಲ್ಲಿ, 6-3 ಬಹುಮತದ ಆಧಾರದ ಮೇಲೆ ಅಮೆರಿಕ ಸರ್ಕಾರದ ಹಾಗೂ ಗಡಿ ಅಧಿಕಾರಿಗಳ ಪರವಾಗಿ ತೀರ್ಪು ನೀಡಲಾಗಿದೆ. ಬಹುಮತದ ತೀರ್ಪನ್ನು ಬರೆದಿರುವ ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್, ಅಮೆರಿಕದ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯು ಗಡಿ ಅಧಿಕಾರಿಗಳಿಗೆ ಈ ವಿಚಾರದಲ್ಲಿ ವಿಸ್ತೃತ ಅಧಿಕಾರ ನೀಡಿದೆ ಎಂಬುದನ್ನು ಎತ್ತಿಹಿಡಿದಿದ್ದಾರೆ. ಗ್ರೀನ್ ಕಾರ್ಡ್ ಹೊಂದಿರುವ ವ್ಯಕ್ತಿಯೊಬ್ಬ ಅಮೆರಿಕಕ್ಕೆ ಮರಳಿದಾಗ, ಆತ ಯಾವುದೇ ಗಂಭೀರ ಅಪರಾಧ ಎಸಗಿದ್ದಾನೆ ಎಂಬುದನ್ನು ಗಡಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿಯೇ 'ಸ್ಪಷ್ಟ ಮತ್ತು ನಿಖರವಾದ ಸಾಕ್ಷ್ಯಗಳೊಂದಿಗೆ' ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬದಲಾಗಿ, ಆ ವ್ಯಕ್ತಿಯ ಮೇಲೆ ಆರೋಪಗಳಿರುವುದು ಅಥವಾ ಆತ ಅಪರಾಧ ಮಾಡಿರಬಹುದು ಎಂದು ನಂಬಲು ಸಕಾರಣಗಳಿದ್ದರೆ ಸಾಕು, ಅಂತಹ ವ್ಯಕ್ತಿಯನ್ನು ಗಡಿಯಲ್ಲೇ ತಡೆದು ಪ್ರವೇಶವನ್ನು ನಿರಾಕರಿಸಬಹುದು. ಆರೋಪವನ್ನು ಸಾಬೀತುಪಡಿಸುವ ಹೊಣೆಗಾರಿಕೆಯು ಆ ನಂತರ ನಡೆಯುವ ಗಡೀಪಾರು ವಿಚಾರಣೆಗಳ ಹಂತದಲ್ಲಿರುತ್ತದೆಯೇ ಹೊರತು, ಪ್ರಾಥಮಿಕ ಗಡಿ ತಪಾಸಣಾ ಕೇಂದ್ರಗಳಲ್ಲಿ ಅಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಗ್ರೀನ್ ಕಾರ್ಡ್ ದಾರರ ಮೇಲಾಗುವ ಪರಿಣಾಮಗಳೇನು?

ಈ ತೀರ್ಪು ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಗ್ರೀನ್ ಕಾರ್ಡ್ ದಾರರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎಂದು ವಲಸೆ ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ. ಈ ಹಿಂದೆ, ಖಾಯಂ ನಿವಾಸಿಗಳು ವಿದೇಶ ಪ್ರವಾಸ ಮುಗಿಸಿ ಮರಳುವಾಗ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಯುವುದು ಅಷ್ಟು ಸುಲಭವಿರಲಿಲ್ಲ. ಆದರೆ ಈ ಹೊಸ ಆದೇಶದ ಪ್ರಕಾರ, ಗಡಿ ಅಧಿಕಾರಿಗಳಿಗೆ ಅಸಾಧಾರಣ ವಿವೇಚನಾಧಿಕಾರ ಸಿಕ್ಕಂತಾಗಿದೆ. ಯಾವುದೇ ಗ್ರೀನ್ ಕಾರ್ಡ್ ದಾರರ ಮೇಲೆ ಸಣ್ಣಪುಟ್ಟ ಕ್ರಿಮಿನಲ್ ಆರೋಪಗಳಿದ್ದರೂ, ಅಥವಾ ಪ್ರಕರಣಗಳು ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗದೆ ಬಾಕಿ ಇದ್ದರೂ ಸಹ, ಅವರು ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವುದು ಭಾರಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಮರಳಿ ಅಮೆರಿಕ ಪ್ರವೇಶಿಸುವಾಗ ಅಧಿಕಾರಿಗಳು ಅವರ ಗ್ರೀನ್ ಕಾರ್ಡ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು, ಅವರನ್ನು ವಲಸೆ ಬಂಧನ ಕೇಂದ್ರಗಳಲ್ಲಿ ಇರಿಸಬಹುದು ಅಥವಾ ಸುದೀರ್ಘ ಗಡೀಪಾರು ಪ್ರಕ್ರಿಯೆಯನ್ನು ಆರಂಭಿಸಬಹುದು.

ಅಸಮಾಧಾನ ವ್ಯಕ್ತಪಡಿಸಿದ ಉದಾರವಾದಿ ನ್ಯಾಯಾಧೀಶರು

ಈ ಬಹುಮತದ ತೀರ್ಪಿಗೆ ಸುಪ್ರೀಂ ಕೋರ್ಟ್‌ನ ಮೂವರು ಉದಾರವಾದಿ ನ್ಯಾಯಾಧೀಶರಾದ ಕೇತಂಜಿ ಬ್ರೌನ್ ಜಾಕ್ಸನ್, ಸೋನಿಯಾ ಸೊಟೊಮೇಯರ್ ಮತ್ತು ಎಲೆನಾ ಕಗಾನ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಭಿನ್ನಮತದ ತೀರ್ಪು ಬರೆದಿರುವ ನ್ಯಾಯಮೂರ್ತಿ ಕೇತಂಜಿ ಬ್ರೌನ್ ಜಾಕ್ಸನ್, ಈ ತೀರ್ಪಿನ ಮೂಲಕ ನ್ಯಾಯಾಲಯವು ಗಡಿ ಅಧಿಕಾರಿಗಳಿಗೆ ಕಾನೂನಿನ ದುರ್ಬಳಕೆ ಮಾಡಲು 'ಬ್ಲಾಂಕ್ ಚೆಕ್' ನೀಡಿದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕೇವಲ ಆರೋಪಗಳ ಆಧಾರದ ಮೇಲೆ ಕಾನೂನುಬದ್ಧ ಖಾಯಂ ನಿವಾಸಿಗಳ ಸ್ಥಾನಮಾನವನ್ನು ಕಸಿದುಕೊಳ್ಳುವುದು ಅವರನ್ನು ತೀವ್ರ ಅತಂತ್ರ ಸ್ಥಿತಿಗೆ ನೂಕುತ್ತದೆ. ಯಾವುದೇ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗುವ ಮೊದಲೇ ಗಡಿ ಅಧಿಕಾರಿಗಳು ಅವರನ್ನು ಅಪರಾಧಿಗಳಂತೆ ಪರಿಗಣಿಸಲು ಇದು ಅನಗತ್ಯ ಅವಕಾಶ ಮಾಡಿಕೊಡುತ್ತದೆ ಎಂದು ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Read More
Next Story