ಇರಾನ್ ಅಣ್ವಸ್ತ್ರ ನೆಲೆಗಳ ಮೇಲೆ ಅಮೆರಿಕಾ ದಾಳಿ, ವಿಶ್ವಸಂಸ್ಥೆ ತೀವ್ರ ಕಳವಳ
x

ಇರಾನ್ ಅಣ್ವಸ್ತ್ರ ನೆಲೆಗಳ ಮೇಲೆ ಅಮೆರಿಕಾ ದಾಳಿ, ವಿಶ್ವಸಂಸ್ಥೆ ತೀವ್ರ ಕಳವಳ

ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ತಮ್ಮ ಆತಂಕ ಹಂಚಿಕೊಂಡಿರುವ ಗುಟೆರಸ್, "ಮಧ್ಯಪ್ರಾಚ್ಯದಲ್ಲಿ ಈಗಿನ ಯುದ್ಧದ ತೀವ್ರತೆಯು ತೀವ್ರ ಅಪಾಯಕಾರಿಯಾಗಿದೆ. ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ," ಎಂದು ಎಚ್ಚರಿಸಿದ್ದಾರೆ.


ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಹಳೆ ಮೊಳಗಿದೆ. ಇರಾನ್‌ನ ಪ್ರಮುಖ ಪರಮಾಣು ನೆಲೆಗಳನ್ನು ಗುರಿಯಾಗಿಸಿ ಅಮೆರಿಕಾ ನಡೆಸಿದ ಬಾಂಬ್ ದಾಳಿಗಳು ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿವೆ. ವಿಶ್ವಸಂಸ್ಥೆಯ ಪ್ರಧಾನಿ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಈ ಬೆಳವಣಿಗೆಯನ್ನು "ಅಪಾಯಕಾರಿ" ಎಂದು ಬಣ್ಣಿಸಿದ್ದು, ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುವ ಸಾಧ್ಯತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಮೂರು ಅಣು ಕೇಂದ್ರಗಳಾದ ಫಾರ್ಡೋ, ನತಾಂಜ್ ಮತ್ತು ಇಸ್ಫಹಾನ್‌ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಘೋಷಿಸಿದ ಬೆನ್ನಲ್ಲೇ, ಇಸ್ರೇಲ್-ಇರಾನ್ ನಡುವಿನ ದಶಕಗಳ ಹಗೆತನದಲ್ಲಿ ಅಮೆರಿಕಾ ನೇರವಾಗಿ ಪ್ರವೇಶಿಸಿದೆ. ಈ ದಾಳಿಗಳು ಮಧ್ಯಪ್ರಾಚ್ಯದ ಭವಿಷ್ಯದ ಮೇಲೆ ಗಾಢ ಪರಿಣಾಮ ಬೀರಲಿವೆ ಎಂಬ ಆತಂಕ ಎಲ್ಲೆಡೆ ಮನೆ ಮಾಡಿದೆ.

ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ತಮ್ಮ ಆತಂಕ ಹಂಚಿಕೊಂಡಿರುವ ಗುಟೆರಸ್, "ಮಧ್ಯಪ್ರಾಚ್ಯದಲ್ಲಿ ಈಗಿನ ಯುದ್ಧದ ತೀವ್ರತೆಯು ತೀವ್ರ ಅಪಾಯಕಾರಿಯಾಗಿದೆ. ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ," ಎಂದು ಎಚ್ಚರಿಸಿದ್ದಾರೆ. ಅಲ್ಲದೆ, "ಈ ಸಂಘರ್ಷವು ಮಿತಿ ಮೀರಿ ಹೋಗುವ ಅಪಾಯವೂ ಇದೆ. ಇದು ಇಡೀ ಪ್ರದೇಶದ ಹಾಗೂ ನಾಗರಿಕರ ಮೇಲೆ ವಿನಾಶಕಾರಿ ಪರಿಣಾಮ ಬೀರುವ ಸಾಧ್ಯತೆಯಿದೆ," ಎಂದೂ ಅವರು ಉಲ್ಲೇಖಿಸಿದ್ದಾರೆ.

ಈ ಸೂಕ್ಷ್ಮ ಪರಿಸ್ಥಿತಿಯಲ್ಲಿ, ಉದ್ವಿಗ್ನತೆಯನ್ನು ತಗ್ಗಿಸಲು ಅಂತರರಾಷ್ಟ್ರೀಯ ಸಮುದಾಯದ ಸಹಕಾರ ಅನಿವಾರ್ಯ ಎಂದು ಗುಟೆರಸ್ ಪ್ರತಿಪಾದಿಸಿದ್ದಾರೆ. "ಈ ಅಪಾಯಕಾರಿ ಗಳಿಗೆಯಲ್ಲಿ ಸಂಪೂರ್ಣ ಅವ್ಯವಸ್ಥೆಯನ್ನು ತಪ್ಪಿಸುವುದು ಅತ್ಯಗತ್ಯ. ಮಿಲಿಟರಿ ಕಾರ್ಯಾಚರಣೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ರಾಜತಾಂತ್ರಿಕತೆ ಮಾತ್ರ ನಮ್ಮ ಮುಂದಿರುವ ಏಕೈಕ ಮಾರ್ಗವಾಗಿದೆ. ಶಾಂತಿಯೊಂದೇ ನಮ್ಮ ಭರವಸೆ," ಎಂದು ಅವರು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಅಮೆರಿಕಾ ಮತ್ತು ಇರಾನ್ ನಡುವಿನ ಈ ಸಂಘರ್ಷ ವಿಶ್ವ ರಾಜಕೀಯದಲ್ಲಿ ಹೊಸ ತಿರುವನ್ನು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Read More
Next Story