US presidential polls | ವಲಸೆ ವ್ಯವಸ್ಥೆಯನ್ನು ಸರಿಪಡಿಸುವೆ: ಕಮಲಾ ಹ್ಯಾರಿಸ್‌
x
ಅಮೆರಿಕನ್ ಫೆಡರೇಶನ್ ಆಫ್ ಟೀಚರ್ಸ್ ನ 88ನೇ ರಾಷ್ಟ್ರೀಯ ಸಮಾವೇಶದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಮಾತನಾಡಿದರು

US presidential polls | ವಲಸೆ ವ್ಯವಸ್ಥೆಯನ್ನು ಸರಿಪಡಿಸುವೆ: ಕಮಲಾ ಹ್ಯಾರಿಸ್‌


ವಾಷಿಂಗ್ಟನ್: ಗಡಿಯಲ್ಲಿ ಕಠಿಣ ಭದ್ರತಾ ಕ್ರಮ ಮತ್ತು ದೇಶದ ಭಗ್ನ ವಲಸೆ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಹೇಳಿದ್ದಾರೆ.

ಅವರು ಅರಿಝೋನಾದ ಡಗ್ಲಾಸ್‌ನಲ್ಲಿರುವ ಯುಎಸ್-ಮೆಕ್ಸಿಕೋ ಗಡಿಗೆ ಶುಕ್ರವಾರ ಭೇಟಿ ನೀಡಿದ್ದು, ಗಡಿ ಭದ್ರತೆ ಬಗ್ಗೆ ಕಠಿಣ ನಿಲುವು ತಳೆದರೂ, ಪ್ರಸ್ತುತ ಅಮೆರಿಕದಲ್ಲಿರುವ ದಾಖಲೆರಹಿತ ವಲಸಿಗರಿಗೆ ಪೌರತ್ವ ನೀಡುವಿಕೆಯನ್ನು ಬೆಂಬಲಿಸುವುದಾಗಿ ಹೇಳಿದರು.

ವಲಸೆಗೆ ಸಂಬಂಧಿಸಿದಂತೆ ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್‌ ಅವರಿಂದ ಪದೇಪದೇ ರಾಜಕೀಯ ದಾಳಿ ಎದುರಿಸುತ್ತಿರುವ ಅವರು, ʻಅಧ್ಯಕ್ಷೆಯಾದರೆ, ಪರಿಶ್ರಮಿ ವಲಸಿಗರಿಗೆ ಪೌರತ್ವದ ಹಾದಿ ನಿರ್ಮಿಸಲು ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡುತ್ತೇನೆ,ʼಎಂದು ಹೇಳಿದರು.

ಪರಿಸ್ಥಿತಿಯ ಅವಲೋಕನಕ್ಕೆ ಅವರು ಅರಿಜೋನಾಕ್ಕೆ ಆಗಮಿಸಿದ್ದರು. ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಟೀಕಿಸಿ, ʻರಾಜಕಾರಣಿಗಳು ಒಗ್ಗೂಡಲು ಮತ್ತು ಮುರಿದ ವಲಸೆ ವ್ಯವಸ್ಥೆಯನ್ನು ಸರಿಪಡಿಸಲು ನಿರಾಕರಿಸಿದ್ದಾರೆ,ʼ ಎಂದು ಹೇಳಿದರು.

ಇತ್ತೀಚೆಗೆ ಅಕ್ರಮ ವಲಸೆ ದಕ್ಷಿಣದ ಗಡಿಯಲ್ಲಿ ಹೆಚ್ಚಿದ್ದು, ಈ ಕುರಿತು ಅಮೆರಿಕನ್ನರು ಚಿಂತಿತರಾಗಿದ್ದಾರೆ.

ʻರಾಜಕೀಯವನ್ನು ಬದಿಗಿರಿಸಿ ವಲಸೆ ವ್ಯವಸ್ಥೆಯನ್ನು ಸರಿಪಡಿಸುತ್ತೇನೆ ಮತ್ತು ಬಹಳ ಕಾಲದಿಂದ ಉಳಿದುಕೊಂಡಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇನೆ .ಈ ಸಮಸ್ಯೆಗಳು ರಾಷ್ಟ್ರದ ಮೇಲೆ ಹೆಚ್ಚು ಪರಿಣಾಮ ಬೀರಿವೆ,ʼ ಅವರು ಹೇಳಿದರು.

ನವೆಂಬರ್ 5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹ್ಯಾರಿಸ್(59) ಅವರು ಟ್ರಂಪ್(78) ಅವರನ್ನು ಎದುರಿಸಲಿದ್ದಾರೆ.

ಟ್ರಂಪ್‌ ಟೀಕೆ: ʻಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ನಾಲ್ಕು ವರ್ಷಗಳಲ್ಲಿ ವಲಸೆ ವ್ಯವಸ್ಥೆಯನ್ನು ಸರಿಪಡಿಸಲು ಏನನ್ನೂ ಮಾಡಲಿಲ್ಲ. ವಲಸೆ ನ್ಯಾಯಾಧೀಶರು ಮತ್ತು ಗಡಿ ಏಜೆಂಟರ ಕೊರತೆಯನ್ನು ತುಂಬಲಿಲ್ಲ ಅಥವಾ ರಾಷ್ಟ್ರಕ್ಕೆ ಕಾನೂನುಬದ್ಧ ಆಗಮನ ಮಾರ್ಗಗಳನ್ನು ರಚಿಸಲಿಲ್ಲ. ಸವಾಲನ್ನು ಎದುರಿಸಲು ಇತರ ದೇಶಗಳೊಂದಿಗೆ ಕೆಲಸ ಮಾಡಲಿಲ್ಲ,ʼ ಎಂದು ದೂರಿದರು.

ʻಅಮೆರಿಕನ್ ಜನರಿಗೆ ರಾಜಕೀಯ ಆಟ ಆಡುವವರಿಗಿಂತ ಗಡಿ ಭದ್ರತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಧ್ಯಕ್ಷರು ಬೇಕಿದೆ. ಚೀನಾದಿಂದ ರಾಸಾಯನಿಕಗಳ ಹರಿವು ಕಡಿಮೆ ಮಾಡಲು ಮತ್ತು ವಿನಾಶದಿಂದ ಅಮೆರಿಕನ್ನರನ್ನು ರಕ್ಷಿಸಲು ಜಾಗತಿಕ ಫೆಂಟಾನಿಲ್ ಪೂರೈಕೆ ಸರಪಳಿಯನ್ನು ಗುರಿಯಾಗಿಸಿಕೊಳ್ಳಲಾಗುತ್ತದೆ,ʼ ಎಂಉದ ಹೇಳಿದರು.

ಕಮಲಾ ದೇಶ ಹಾಳು ಮಾಡಿದರು:‌ ಟ್ರಂಪ್‌ ಅವರು ಅಸುರಕ್ಷಿತ ಗಡಿಗೆ ಹ್ಯಾರಿಸ್‌ ಅವರನ್ನು ಟೀಕಿಸಿದ್ದರು. ʻಗಡಿಯಲ್ಲಿ ಕಾಣಿಸಿಕೊಳ್ಳಲು ಇದು ಕೆಟ್ಟ ಸಮಯ. ನಾಲ್ಕು ವರ್ಷ ಅಲ್ಲಿಗೆ ಹೋಗದ ಕಮಲಾ ಈಗ ಅಲ್ಲಿಗೆ ಹೋಗಿದ್ದಾರೆ. ಪ್ರಮಾಣವಚನಕ್ಕೆ ದ್ರೋಹ ಮಾಡಿದ್ದಾರೆ,ʼ ಎಂದು ಟ್ರಂಪ್ ಹೇಳಿದ್ದಾರೆ.

ʻಕಮಲಾ ಅವರು ರಕ್ಷಿಸಬೇಕಾದ ಸಣ್ಣ ಪಟ್ಟಣಗಳನ್ನು ನಿರಾಶ್ರಿತರ ಶಿಬಿರಗಳಾಗಿ ಪರಿವರ್ತಿಸಿದ್ದಾರೆ. ಆಕೆ ಮಾಡಿದ್ದು ಅಕ್ಷಮ್ಯ ಅಪರಾಧ. ಇದು ಕ್ರಿಮಿನಲ್ ವರ್ತನೆ. ನಿಮ್ಮದೇ ದೇಶದ ಸಾರ್ವಭೌಮತ್ವವನ್ನು ನಂದಿಸುವುದಕ್ಕಿಂತ ನಿಷ್ಠೆರಹಿತ ಕಾರ್ಯವಿಲ್ಲ. ಆಕೆ ಮಾಡಿದ್ದು ಅದನ್ನೇ. ನಮ್ಮ ದೇಶವನ್ನು ಹಾಳು ಮಾಡಿದರು,ʼ ಎಂದು ಟ್ರಂಪ್ ದೂರಿದ್ದಾರೆ.

Read More
Next Story