US presidential Poll | ಗಾಜಾ, ಉಕ್ರೇನ್, ವಲಸೆ ಕುರಿತು ಹ್ಯಾರಿಸ್-ಟ್ರಂಪ್ ಮಾತಿನ ಯುದ್ಧ
x

US presidential Poll | ಗಾಜಾ, ಉಕ್ರೇನ್, ವಲಸೆ ಕುರಿತು ಹ್ಯಾರಿಸ್-ಟ್ರಂಪ್ ಮಾತಿನ ಯುದ್ಧ

ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡೆನ್ ನಡುವೆ ಜೂನ್‌ನಲ್ಲಿ ನಡೆದ ಮೊದಲ ಅಧ್ಯಕ್ಷೀಯ ಚರ್ಚೆಯಿಂದ ಡೆಮೋಕ್ರಾಟ್‌ಗಳಿಗೆ ಹಿನ್ನಡೆ ಉಂಟಾಯಿತು. ಕಮಲಾ ಹ್ಯಾರಿಸ್ ಅದನ್ನು ಹಿಮ್ಮೆಟ್ಟಿಸುತ್ತಾರೆಯೇ?


ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನಡುವಿನ ಮೊದಲ ಮುಖಾಮುಖಿ ಮಂಗಳವಾರ (ಸೆಪ್ಟೆಂಬರ್ 10) ರಾತ್ರಿ ಫಿಲಡೆಲ್ಫಿಯಾದಲ್ಲಿ ನಡೆಯಿತು. ಎಬಿಸಿ ನ್ಯೂಸ್ ಮತ್ತು ಎನ್‌ಬಿಸಿಯಲ್ಲಿ ಸಿಮುಲ್‌ಕಾಸ್ಟ್ ಆಯೋಜಿಸಿದ್ದ ಚರ್ಚೆ ಸುಮಾರು ಒಂದೂವರೆ ಗಂಟೆ ಕಾಲ ನಡೆಯಿತು.

ಬೈಡೆನ್-ಹ್ಯಾರಿಸ್ ಅವರನ್ನು ʻದೇಶದ ಇತಿಹಾಸದ ಅತ್ಯಂತ ಕೆಟ್ಟ ಅಧ್ಯಕ್ಷ, ಕೆಟ್ಟ ಉಪಾಧ್ಯಕ್ಷೆ,ʼ ಎಂದು ಟ್ರಂಪ್ ಜರಿದರು. ʻನಮ್ಮ ನಡುವೆ ಪ್ರತ್ಯೇಕಿಸುವುದಕ್ಕಿಂತ ಹೆಚ್ಚು ಸಮಾನ ಅಂಶಗಳು ಇವೆ ಎಂದು ಅಮೆರಿಕನ್ನರು ನಂಬುತ್ತಾರೆ ಮತ್ತು ನಾವು ಮುಂದೆ ಹೊಸ ಮಾರ್ಗವನ್ನು ರೂಪಿಸಬಹುದು,ʼ ಎಂದು ಹ್ಯಾರಿಸ್ ಹೇಳಿದರು.

ಕಿಡಿನುಡಿಗಳು: ಬೈಡೆನ್ ಹಿಂದೆ ಸರಿದ ನಂತರ ಕೇವಲ ಏಳು ವಾರಗಳ ಹಿಂದೆ ಕಣಕ್ಕಿಳಿದಿರುವ ಹ್ಯಾರಿಸ್, ಸೀಮಿತ ಸಮಯವಿದೆ. ಆದ್ದರಿಂದ, ಅವರು ಇಲ್ಲಿಯವರೆಗೆ ನಿರ್ದಿಷ್ಟ ನಿಲುವುಗಳಿಗೆ ಬದ್ಧರಾಗುವುದನ್ನು ತಪ್ಪಿಸಿದ್ದಾರೆ.

ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ಇಬ್ಬರು ಅಧ್ಯಕ್ಷೀಯ ಅಭ್ಯರ್ಥಿಗಳು ಕೈಕುಲುಕಿದರು. ಹ್ಯಾರಿಸ್ ಟ್ರಂಪ್‌ ಅವರಿಗೆ ತಮ್ಮನ್ನು ಪರಿಚಯಿಸಿಕೊಂಡರು. ಅಭ್ಯರ್ಥಿಗಳಾಗಿ ಅವರು ಪರಸ್ಪರ ಭೇಟಿಯಾಗುತ್ತಿರುವುದು ಇದೇ ಮೊದಲು.

ಆರ್ಥಿಕತೆ ಬಗ್ಗೆ ಚರ್ಚೆ: 2017 ರಿಂದ 2021 ರ ಅವಧಿಯಲ್ಲಿ ಮಹಾ ಆರ್ಥಿಕ ಕುಸಿತದ ನಂತರ ರಾಷ್ಟ್ರವನ್ನು ಕೆಟ್ಟ ಸ್ಥಿತಿಗೆ ಹಾಕಿದ್ದಕ್ಕಾಗಿ ಟ್ರಂಪ್‌ ಅವರನ್ನು ಹ್ಯಾರಿಸ್‌ ಟೀಕಿಸಿದರು. ʻಶತಮಾನದ ಅತ್ಯಂತ ಕೆಟ್ಟ ಆರೋಗ್ಯ ಸಾಂಕ್ರಾಮಿಕ ಮತ್ತು ಪ್ರಜಾಪ್ರಭುತ್ವದ ಮೇಲಿನ ಕೆಟ್ಟ ದಾಳಿ ಬಳಿಕ ದೇಶವನ್ನು ತೊರೆದರು. ಬೈಡೆನ್ ಆಡಳಿತ ಈ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಬೇಕಾಯಿತು,ʼ ಎಂದು ಹೇಳಿದರು.

ಅಧ್ಯಕ್ಷರಾದರೆ ಸಣ್ಣ ಉದ್ಯಮಗಳು ಮತ್ತು ಕುಟುಂಬಗಳಿಗೆ ಬೆಂಬಲ, 6,000 ಡಾಲರ್ ಚೈಲ್ಡ್ ಟ್ಯಾಕ್ಸ್ ಕ್ರೆಡಿಟ್ ಯೋಜನೆ ಮತ್ತು ಸ್ಟಾರ್ಟ್-ಅಪ್‌ಗಳಿಗೆ 50,000‌ ಡಾಲರ್ ತೆರಿಗೆ ಕಡಿತ‌ ಮಾಡಲಾಗುತ್ವತದೆ. ಟ್ರಂಪ್ ಅವರು ಬಿಲಿಯನೇರ್‌ಗಳು ಮತ್ತು ದೊಡ್ಡ ಸಂಸ್ಥೆಗಳಿಗೆ ತೆರಿಗೆ ಕಡಿತ ನೀಡಲಿದ್ದಾರೆ. ಟ್ರಂಪ್ ನಿಮಗಾಗಿ ಯಾವುದೇ ಯೋಜನೆಗಳನ್ನು ಹೊಂದಿಲ್ಲ,ʼ ಎಂದು ಹ್ಯಾರಿಸ್‌ ಹೇಳಿದರು.

ತಾವು ಅಂತಹ ಯಾವುದೇ ತೆರಿಗೆ ಕಡಿತ ಯೋಜನೆಗಳನ್ನು ಹೊಂದಿಲ್ಲ.ಬೈಡೆನ್ ಮತ್ತು ಹ್ಯಾರಿಸ್ ಅವರ ಅಡಿಯಲ್ಲಿ ಹಣದುಬ್ಬರದಿಂದ ಯುಎಸ್ ಆರ್ಥಿಕತೆ ಕುಂಠಿತಗೊಂಡಿದೆ ಎಂದು ಟ್ರಂಪ್ ಉತ್ತರಿಸಿದರು.

‌ʻ ಆಕೆ ಮಾರ್ಕ್ಸ್‌ವಾದಿ ಮತ್ತು ಆಕೆಯ ತಂದೆಯೂ ಮಾರ್ಕ್ಸ್‌ವಾದಿ. ಸಾಂಕ್ರಾಮಿಕ ರೋಗದ ಅವಧಿಯಲ್ಲಿ ತಮ್ಮ ಆಡಳಿತ ಮಾಡಿದ ಅದ್ಭುತ ಕೆಲಸಕ್ಕೆ ಸಾಕಷ್ಟು ಮನ್ನಣೆ ಸಿಕ್ಕಿಲ್ಲ ಎಂದು ಟ್ರಂಪ್‌ ಮಾರ್ನುಡಿದರು.

ಗರ್ಭಪಾತದ ವಿಷಯ: ʻಮಹಿಳೆಯರು ತಮ್ಮ ದೇಹವನ್ನು ಏನು ಮಾಡಬೇಕೆಂದು ಟ್ರಂಪ್ ಹೇಳಬಾರದು. ಅತ್ಯಾಚಾರದಿಂದ ಬದುಕುಳಿದವರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ಬಯಸುವುದಿಲ್ಲ,ʼ ಎಂದು ಹ್ಯಾರಿಸ್‌ ಹೇಳಿದರು.

ʻನಾನು ಗರ್ಭಪಾತ ನಿಷೇಧಕ್ಕೆ ಸಹಿ ಹಾಕುತ್ತಿಲ್ಲ. ರಾಜ್ಯಗಳು ಆಸಂಬಂಧ ಚಲಾಯಿಸುತ್ತವೆ,ʼ ಎಂದು ಟ್ರಂಪ್ ಹೇಳಿದರು. ʻನಾನು ಐವಿಎಫ್‌ ಬೆಂಬಲಿಗ. ಹ್ಯಾರಿಸ್‌ ಏಳು, ಎಂಟು, ಒಂಬತ್ತನೇ ತಿಂಗಳು ಮತ್ತು ಬಹುಶಃ ಜನನದ ನಂತರ ಗರ್ಭಪಾತಕ್ಕೆ ಅನುಮತಿಸುತ್ತಾರೆಯೇ?,ʼ ಎಂದು ಪ್ರಶ್ನಿಸಿದರು.

ಟ್ರಂಪ್ ಅಧ್ಯಕ್ಷರಾದರೆ ಗರ್ಭಪಾತವನ್ನು ನಿಷೇಧಿಸುತ್ತಾರೆ ಎಂದು ಹ್ಯಾರಿಸ್ ಹೇಳಿದರೆ, ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಟ್ರಂಪ್‌ ಪ್ರತಿಕ್ರಿಯಿಸಿದರು. ʻಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಮಗುವನ್ನು ಗಲ್ಲಿಗೇರಿಸುತ್ತಿದ್ದೇವೆ,ʼ ಎಂದು ಟ್ರಂಪ್ ಹೇಳಿದರು.

ಟ್ರಂಪ್‌ ಅವರ ಈ ಹೇಳಿಕೆಯನ್ನು ಎಬಿಸಿ ನೆಟ್‌ವರ್ಕ್ಸ್ ಪರಿಶೀಲಿಸಿದ್ದು, ಅದು ಸುಳ್ಳು ತಿಳಿದುಬಂದಿದೆ. ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲಿ ಮಗುವಿನ ಹತ್ಯೆ ಕಾನೂನುಬಾಹಿರ.

ʻಸಂತಾನೋತ್ಪತ್ತಿ ಹಕ್ಕುಗಳ ಕುರಿತು ಟ್ರಂಪ್‌ ನೀತಿಗಳು ಅಮೆರಿಕದ ಮಹಿಳೆಯರಿಗೆ ಅವಮಾನ. ರೋ ವಿ/ಎಸ್‌ ವೇಡ್ ರಕ್ಷಣೆಯನ್ನು ರದ್ದುಗೊಳಿಸಲು ಟ್ರಂಪ್‌ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಮೂವರು ಸದಸ್ಯರನ್ನು ನೇಮಿಸಿದ್ದಾರೆ,ʼ ಎಂದು ಹ್ಯಾರಿಸ್‌ ಹೇಳಿದರು. ʻಹ್ಯಾರಿಸ್ ಅವರ ಉಪಾಧ್ಯಕ್ಷ ಆಯ್ಕೆಯು ಭಯಾನಕವಾಗಿದೆ. ಗರ್ಭಪಾತ ಸಮಸ್ಯೆ 52 ವರ್ಷಗಳಿಂದ ದೇಶವನ್ನು ಛಿದ್ರಗೊಳಿಸಿದೆ,ʼ ಎಂದು ಟ್ರಂಪ್‌ ಹೇಳಿದರು.

ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ: ʻಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದೆ. ಇಸ್ರೇಲಿಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇದೆ. ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯರು ಶಾಂತಿಗೆ ಮುಂದಾಗಬೇಕು. ಯುದ್ಧ ಕೊನೆಗೊಳ್ಳಬೇಕು; ನಮಗೆ ಕದನ ವಿರಾಮ ಒಪ್ಪಂದ ಬೇಕು ಮತ್ತು ಒತ್ತೆಯಾಳುಗಳು ಬಿಡುಗಡೆ ಆಗಬೇಕು. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್‌ಗೆ ಭದ್ರತೆ ಇರಬೇಕು,ʼ ಎಂದು ಹ್ಯಾರಿಸ್‌ ಹೇಳಿದರು.

ʻತಾವು ಅಧಿಕಾರದಲ್ಲಿದ್ದರೆ ಯುದ್ಧ ಪ್ರಾರಂಭವಾಗುತ್ತಿರಲಿಲ್ಲ. ಹ್ಯಾರಿಸ್ ಮತ್ತು ಬೇಡೆನ್ ಸಂಘರ್ಷವನ್ನು ನಿಲ್ಲಿಸಲು ವಿಫಲರಾಗಿದ್ದಾರೆ. ದ ಪ್ರಸ್ತುತ ಆಡಳಿತ ಅಮೆರಿಕದ ಸ್ಥಾನವನ್ನು ದುರ್ಬಲಗೊಳಿಸಿದೆ,ʼ ಎಂದು ಟ್ರಂಪ್ ಆರೋಪಿಸಿದರು.

‌ʻಕಮಲಾ ಇಸ್ರೇಲ್ ಮತ್ತು ಅರಬ್ ಜನರನ್ನು ದ್ವೇಷಿಸುತ್ತಾರೆ. ಅವರು ಅಧ್ಯಕ್ಷರಾದರೆ, ಇಸ್ರೇಲ್ ಇಲ್ಲವಾಗುತ್ತದೆ. ನಾನು ಅಧ್ಯಕ್ಷನಾಗಿದ್ದಾಗ ಇರಾನ್‌ನಲ್ಲಿ ಭಯೋತ್ಪಾದನೆಗೆ ಹಣವಿರಲಿಲ್ಲ,ʼ ಎಂದು ಟ್ರಂಪ್‌ ಹೇಳಿದರು.

ಹ್ಯಾರಿಸ್ ಇದನ್ನು ನಿರಾಕರಿಸಿದರು. ʻಅವರು ಸರ್ವಾಧಿಕಾರಿಗಳನ್ನು ಮೆಚ್ಚುತ್ತಾರೆ ಮತ್ತು ಸರ್ವಾಧಿಕಾರಿಯಾಗಲು ಬಯಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಟ್ರಂಪ್ ಅವರನ್ನು ನಾಚಿಕೆಗೇಡು ಎಂದು ಮಿಲಿಟರಿ ನಾಯಕರು ಬಣ್ಣಿಸಿದ್ದಾರೆ,ʼ ಎಂದು ಹ್ಯಾರಿಸ್‌ ಹೇಳಿದರು.

ಉಕ್ರೇನ್ ಸಂಘರ್ಷ: ʻಉಕ್ರೇನ್‌ನ ಸ್ವಾತಂತ್ರ್ಯಕ್ಕೆ ಯುಎಸ್ ಬೆಂಬಲ ನೀಡಿದೆ. ಟ್ರಂಪ್ ಆಗಿದ್ದರೆ, ಪುಟಿನ್ ಇಷ್ಟರಲ್ಲೇ ಕೈವ್ ಅನ್ನು ವಶಪಡಿಸಿಕೊಳ್ಳುತ್ತಿದ್ದರು,ʼ ಎಂದು ಹ್ಯಾರಿಸ್ ಹೇಳಿದರು. ಪ್ರತಿಕ್ರಿಯಿಸಿದ ಟ್ರಂಪ್, ʻನಾನು ಅಧ್ಯಕ್ಷನಾಗಿದ್ದರೆ, ಯುದ್ಧ ಪ್ರಾರಂಭವಾಗುತ್ತಿರಲಿಲ್ಲ; ರಷ್ಯಾ ಉಕ್ರೇನ್ ಅನ್ನು ಪ್ರವೇಶಿಸುತ್ತಿರಲೂ ಇಲ್ಲ,ʼ ಎಂದರು.

ವಲಸೆ: ʻಇತರ ದೇಶಗಳ ಜೈಲು ಮತ್ತು ಮಾನಸಿಕ ಸಂಸ್ಥೆಗಳು ಲಕ್ಷಾಂತರ ಜನರನ್ನು ಅಮೆರಿಕಕ್ಕೆ ಕಳುಹಿಸುತ್ತಿವೆ. ಇದರಿಂದ ಅಪರಾಧಗಳು ಹೆಚ್ಚುತ್ತಿವೆ,ʼ ಎಂದು ಟ್ರಂಪ್‌ ಹೇಳಿದ್ದರು. ಆತಿಥೇಯರು ಈ ಮಾತು ತಳ್ಳಿಹಾಕಿದರು; ದೇಶದಲ್ಲಿ ಅಪರಾಧ ಕಡಿಮೆಯಾಗುತ್ತಿದೆ ಎಂಬ ಎಫ್‌ಬಿಐ ಹೇಳಿಕೆಯನ್ನು ಉಲ್ಲೇಖಿಸಿದರು.

ಹೈಟಿಯಿಂದ ವಲಸೆ ಬಂದವರು ಓಹಿಯೋ ಪಟ್ಟಣದಲ್ಲಿ ಸಾಕುಪ್ರಾಣಿಗಳನ್ನು ತಿನ್ನುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ ಎಂಬ ಮಾತಿಗೆ, ಕಮಲಾ ಹ್ಯಾರಿಸ್ ನಗುತ್ತಾ ತಲೆ ಅಲ್ಲಾಡಿಸಿದರು. ಇದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಆತಿಥೇಯರು ಹೇಳಿದರು.

ಬೈಡೆನ್ ಆಡಳಿತದ ವೈಫಲ್ಯಗಳನ್ನು ಟ್ರಂಪ್ ಪ್ರಸ್ತಾಪಿಸಿದಾಗ, ಕಮಲಾ ಹ್ಯಾರಿಸ್, ʻನೀವು ಬೈಡೆನ್ ವಿರುದ್ಧ ಸ್ಪರ್ಧಿಸುತ್ತಿಲ್ಲ,ʼ ಎಂದು ಪ್ರತಿಕ್ರಿಯಿಸಿದರು.

Read More
Next Story