ಕದನ ವಿರಾಮ ಅಂತ್ಯ ಎಂದ ಟ್ರಂಪ್, ಇರಾನ್‌ನ 60ಕ್ಕೂ ಹೆಚ್ಚು ಯುದ್ಧ ನೌಕೆಗಳು ಧ್ವಂಸ
x

ಕದನ ವಿರಾಮ ಅಂತ್ಯ ಎಂದ ಟ್ರಂಪ್, ಇರಾನ್‌ನ 60ಕ್ಕೂ ಹೆಚ್ಚು ಯುದ್ಧ ನೌಕೆಗಳು ಧ್ವಂಸ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಇರಾನ್‌ನ ಉದ್ಧಟತನದಿಂದಾಗಿ ಉಭಯ ದೇಶಗಳ ನಡುವಿನ ಕದನ ವಿರಾಮ ಒಪ್ಪಂದ ಅಂತ್ಯಗೊಂಡಿದೆ" ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಭೀಕರ ವಾಯುದಾಳಿಗಳು ನಡೆದಿವೆ.


Click the Play button to hear this message in audio format

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಪಡೆಗಳು ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಸೇನೆಯು ಇರಾನ್ ವಿರುದ್ಧ ಮತ್ತೊಂದು ಸುತ್ತಿನ ಬೃಹತ್ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕುರಿತು ಬುಧವಾರ (ಜು. 8) ಪ್ರಕಟಣೆ ಹೊರಡಿಸಿರುವ ಅಮೆರಿಕ ಸೇನೆ, ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ಯುದ್ಧ ನೌಕೆಗಳ ಮೇಲೆ ತೀವ್ರ ದಾಳಿ ನಡೆಸಿರುವುದಾಗಿ ಖಚಿತಪಡಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಇರಾನ್‌ನ ಉದ್ಧಟತನದಿಂದಾಗಿ ಉಭಯ ದೇಶಗಳ ನಡುವಿನ ಕದನ ವಿರಾಮ ಒಪ್ಪಂದ ಅಂತ್ಯಗೊಂಡಿದೆ" ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಭೀಕರ ವೈಮಾನಿಕ ದಾಳಿಗಳು ನಡೆದಿವೆ. ಈ ದಿಢೀರ್ ಬೆಳವಣಿಗೆಯಿಂದಾಗಿ ಜಾಗತಿಕವಾಗಿ ತೈಲ ಬೆಲೆಗಳು ಗಗನಕ್ಕೇರಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಭುಗಿಲೇಳುವ ಆತಂಕ ಸೃಷ್ಟಿಯಾಗಿದೆ.

ಇರಾನ್‌ಗೆ ತಕ್ಕ ಶಾಸ್ತಿ: ಟ್ರಂಪ್

ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ ಶೃಂಗಸಭೆಯ ನಡುವೆ ಇರಾನ್ ವಿರುದ್ಧ ಹರಿಹಾಯ್ದಿರುವ ಟ್ರಂಪ್, "ಅವರು ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಹಡಗುಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ. ಇಂದು ರಾತ್ರಿ ಅಮೆರಿಕ ಅವರನ್ನು ಮತ್ತೆ ಹೊಡೆದುರುಳಿಸಲಾಗಿದೆ" ಎಂದು ಎಚ್ಚರಿಸಿದ್ದಾರೆ.

ಆದರೆ, ಇದೇ ವೇಳೆ ಮಾತನಾಡಿರುವ ಅವರು, "ಈ ಹೋರಾಟವು ದೀರ್ಘಕಾಲದ ಮಿಲಿಟರಿ ಕ್ರಮಕ್ಕೆ ಕಾರಣವಾಗುವುದಿಲ್ಲ. ಏನಿದ್ದರೂ ಅತ್ಯಂತ ವೇಗವಾಗಿ ಮುಗಿಯಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲದೆ, ಇರಾನ್‌ನ ವಿದ್ಯುತ್ ಸ್ಥಾವರಗಳು, ಉಪ್ಪುನೀರು ಶುದ್ಧೀಕರಣ ಘಟಕಗಳು ಹಾಗೂ ಪ್ರಮುಖ ತೈಲ ಉತ್ಪಾದನಾ ಕೇಂದ್ರವಾದ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ತನ್ನ ಹಳೆಯ ಬೆದರಿಕೆಯನ್ನು ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ.

ಇರಾನ್ ತಿರುಗೇಟು

ಮಂಗಳವಾರ ಇರಾನ್ ಪಡೆಗಳು ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಅಮೆರಿಕ ದಾಳಿ ನಡೆಸಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ್ದ ಇರಾನ್, ಪರ್ಷಿಯನ್ ಕೊಲ್ಲಿಯಲ್ಲಿರುವ ಅಮೇರಿಕನ್ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ಮಳೆಗರೆದಿತ್ತು. ಬುಧವಾರ ಬೆಳಗ್ಗೆ ಯುಎಸ್ ನೌಕಾಪಡೆಯ 5ನೇ ದಳದ ನೆಲೆಯಾಗಿರುವ ಬಹ್ರೇನ್ ಮತ್ತು ಯುಎಸ್ ಪಡೆಗಳಿರುವ ಕುವೈತ್ ಎರಡೂ ದೇಶಗಳಲ್ಲಿ 'ಕ್ಷಿಪಣಿ ದಾಳಿಯ ಎಚ್ಚರಿಕೆ' ಮೊಳಗಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.

60 ದೋಣಿಗಳು ನಾಶ

ಯುಎಸ್ ಮಿಲಿಟರಿಯ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿ ಪ್ರಕಾರ, ಜಾಗತಿಕ ಇಂಧನ ಸಾಗಣೆಯ ಶೇ. 20 ರಷ್ಟು ಭಾಗ ಹಾದುಹೋಗುವ ಹಾರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಧಕ್ಕೆ ತಂದಿದ್ದಕ್ಕಾಗಿ ಇರಾನ್ ಮೇಲೆ ದಾಳಿ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್‌ಗಳು ಹಾಗೂ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ಸ್ ಬಳಸುತ್ತಿದ್ದ 60ಕ್ಕೂ ಹೆಚ್ಚು ಸಣ್ಣ ಯುದ್ಧ ದೋಣಿಗಳನ್ನು ಅಮೆರಿಕದ ಪಡೆಗಳು ನಾಶಪಡಿಸಿವೆ.

ಇತ್ತ ಇರಾನ್‌ನ ಸರ್ಕಾರಿ ಮಾಧ್ಯಮಗಳು ಬಂದರ್ ಮಹ್‌ಶಹರ್, ಬಂದರ್ ಅಬ್ಬಾಸ್ ಮತ್ತು ಬುಶೆಹರ್ (ಇರಾನ್‌ನ ಪರಮಾಣು ವಿದ್ಯುತ್ ಸ್ಥಾವರ ಇರುವ ಜಾಗ) ಸೇರಿದಂತೆ ಹಲವು ಕರಾವಳಿ ನಗರಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ ಎಂದು ವರದಿ ಮಾಡಿದ್ದು, ದಾಳಿಯಲ್ಲಿ ಒಟ್ಟು 9 ಇರಾನ್ ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಧೃಡಪಡಿಸಿವೆ.

ಇರಾನ್‌ ನಾಯಕರ ಆಕ್ರೋಶ

ಅಮೆರಿಕದ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್, "ಅಮೆರಿಕದ ಬೆದರಿಕೆ ಮತ್ತು ಸುಲಿಗೆಯ ಯುಗ ಮುಗಿದಿದೆ. ಅವರ ಬೆದರಿಕೆಗಳು ನಮ್ಮನ್ನು ಮಣಿಸಲು ಸಾಧ್ಯವಿಲ್ಲ. ನಾವು ಯಾರಿಗೂ ತಲೆಬಾಗುವುದಿಲ್ಲ" ಎಂದು ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಬರೆದುಕೊಂಡಿದ್ದಾರೆ.

ಇರಾನ್‌ನ ಉನ್ನತ ಸಂಧಾನಕಾರ ಹಾಗೂ ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಬಾದಿ ಪ್ರತಿಕ್ರಿಯಿಸಿ, "ಟ್ರಂಪ್ ಅವರ ಈ ಹೇಳಿಕೆಗಳು ಅಮೆರಿಕದ ಅಧಿಕಾರದ ಸಂಕೇತವಲ್ಲ, ಬದಲಿಗೆ ಅವರ ನೀತಿಗಳ ವೈಫಲ್ಯದ ಒಪ್ಪಿಕೊಳ್ಳುವಿಕೆ" ಎಂದು ಲೇವಡಿ ಮಾಡಿದ್ದಾರೆ.

ಇರಾನ್ ಆಡಳಿತದಲ್ಲೇ ಹೆಚ್ಚಿದ ಭಿನ್ನಮತ?

ವಿಶ್ವದ ಪ್ರಮುಖ ತೈಲ ಮಾರ್ಗವಾಗಿರುವ ಈ ಜಲಸಂಧಿಯ ಮೇಲೆ ಕಠಿಣ ನಿಲುವು ಹೊಂದಿರುವ ಇರಾನ್‌ನ ಎಡಪಂಥೀಯರು ಶಾಶ್ವತ ನಿಯಂತ್ರಣ ಸಾಧಿಸಲು ಬಯಸುತ್ತಿದ್ದಾರೆ. ಆದರೆ, ಅಂತರರಾಷ್ಟ್ರೀಯ ನಿರ್ಬಂಧಗಳಿಂದ ಆರ್ಥಿಕವಾಗಿ ನಲುಗಿರುವ ಇರಾನ್ ಅನ್ನು ರಕ್ಷಿಸಲು ಶಾಶ್ವತ ಶಾಂತಿ ಒಪ್ಪಂದ ಬೇಕು ಎಂದು ಅಲ್ಲಿನ ವಾಸ್ತವವಾದಿಗಳು ಪ್ರತಿಪಾದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಮುಗಿದಿದ್ದು, ಪ್ರಮುಖ ಪರಮಾಣು ಮಾತುಕತೆಗಳು ಆರಂಭವಾಗಬೇಕಿದ್ದ ಹೊತ್ತಿನಲ್ಲೇ ಈ ಭೀಕರ ಸಂಘರ್ಷ ಮರುಕಳಿಸಿದೆ.

Read More
Next Story