
ಯೆಮೆನ್‌ನ ಹೌಥಿ ಬಂಡುಕೋರರ ಮೇಲೆ ಅಮೆರಿಕದ ಭೀಕರ ದಾಳಿ; 24 ಜನರು ಬಲಿ
ಹೌಥಿ ಬಂಡುಕೋರರನ್ನು ಗುರಿಯಾಗಿಸಿ ನಡೆಸಿದ ಈ ದಾಳಿಯಲ್ಲಿ 13 ನಾಗರಿಕರು ಸಹ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಯೆಮೆನ್‌ನ ರಾಜಧಾನಿ ಸನಾದಲ್ಲಿರುವ ಹೌಥಿ ಬಂಡುಕೋರರ ನೆಲೆಗಳ ಮೇಲೆ ಅಮೆರಿಕ ನಡೆಸಿರುವ ಭಾರಿ ಪ್ರಮಾಣದ ವೈಮಾನಿಕ ವಾಯುದಾಳಿಯಲ್ಲಿ (US Attack) 24 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೆಂಪು ಸಮುದ್ರದ ಮೂಲಕ ಸಾಗುವ ವ್ಯಾಪಾರಿ ನೌಕೆಗಳ ಮೇಲೆ ಇರಾನ್‌ನ ಬೆಂಬಲ ಪಡೆದ ಹೌಥಿ ಬಂಡುಕೋರರು ದಾಳಿ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ವಾಯುದಾಳಿ ನಡೆಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ನಡೆಸುತ್ತಿರುವ ಆಕ್ರಮಣಕಾರಿ ದಾಳಿ ಇದಾಗಿದೆ. ವಿಶ್ವ ಹಲವು ದೇಶಗಳಲ್ಲಿ ಆವರಿಸಿರುವ ಯುದ್ಧದ ಕಾರ್ಮೋಡವನ್ನು ಸರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳುತ್ತಿರುವ ಅಮೆರಿಕದ ಅಧ್ಯಕ್ಷ ಬಂಡೋಕರರನ್ನು ತಟಸ್ಥ ಮಾಡಲು ಮುಂದಾಗಿದ್ದಾರೆ. ಈ ದಾಳಿಯ ಬಗ್ಗೆ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಟ್ರಂಪ್, "ಹೌಥಿ ಉಗ್ರರೇ, ನಿಮಗೆ ಕೊನೆಗಾಲ ಬಂದಿದೆ . ಇಂದಿನಿಂದಲೇ ನೀವು ಕೆಂಪು ಸಮುದ್ರದಲ್ಲಿ ದಾಳಿಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.
"ನೀವು ತಕ್ಷಣ ನೌಕೆಗಳ ಮೇಲೆ ನಡೆಸುತ್ತಿರುವ ದಾಳಿಗಳಿಗೆ ಅಂತ್ಯವಾಡಬೇಕು. ಇಲ್ಲದೇ ಹೋದರೆ ನೀವು ಇದುವರೆಗೆ ಕಂಡಿರದ ವಿನಾಶಕಾರಿ ಪರಿಣಾಮ ಎದುರಿಸಬೇಕಾಗುತ್ತದೆ. ನಿಮ್ಮನ್ನು ಸಂಪೂರ್ಣವಾಗಿ ಅಂತ್ಯಮಾಡದೆ ನಾವು ಬಿಡುವುದಿಲ್ಲ. ಇರಾನ್ ಕೂಡ ಹೌಥಿ ಉಗ್ರರಿಗೆ ಬೆಂಬಲ ನೀಡುವುದನ್ನು ತಕ್ಷಣ ನಿಲ್ಲಿಸಬೇಕು. ಮುಂದೆ ಉಂಟಾಗುವ ಯಾವುದೇ ಪರಿಣಾಮಗಳಿಗೆ ನಿಮ್ಮನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು" ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಹೌಥಿ ಬಂಡುಕೋರರನ್ನು ಗುರಿಯಾಗಿಸಿ ನಡೆಸಿದ ಈ ದಾಳಿಯಲ್ಲಿ 13 ನಾಗರಿಕರು ಸಹ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಈ ಭೀಕರ ದಾಳಿಯಲ್ಲಿ 23 ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಕೆಂಪು ಸಮುದ್ರದಲ್ಲಿ ಅಮೆರಿಕದ ನೌಕೆಗಳ ಮೇಲೆ ಹೌಥಿ ಬಂಡುಕೋರರು ಇತ್ತೀಚೆಗೆ ದಾಳಿ ನಡೆಸಿದ್ದರಿಂದ ಈ ಪ್ರತಿದಾಳಿ ನಡೆಸಲಾಗಿದೆ. ಇದುವರೆಗೆ ಈ ದಾಳಿಯ ಬಗ್ಗೆ ಹೌಥಿ ಬಂಡುಕೋರರು ಅಥವಾ ಇರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.