ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆ
x

ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಸಾವನ್ನಪ್ಪಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಮಾಧ್ಯಮಗಳು ಈ ಸುದ್ದಿಯನ್ನು ದೃಢಪಡಿಸಿವೆ.


ಟೆಹ್ರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. ಈ ವಿಚಾರವನ್ನು ಇರಾನ್‌ನ ಸರ್ಕಾರಿ ಸ್ವಾಮ್ಯದ ಐಆರ್‌ಎನ್‌ಎ ಸುದ್ದಿ ಸಂಸ್ಥೆ ಮತ್ತು ಸರ್ಕಾರಿ ಟೆಲಿವಿಷನ್ ಖಚಿತಪಡಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಸಾವನ್ನಪ್ಪಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಮಾಧ್ಯಮಗಳು ಈ ಸುದ್ದಿಯನ್ನು ದೃಢಪಡಿಸಿವೆ. ಈ ಹತ್ಯೆಯು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಭೀಕರ ಪ್ರಾದೇಶಿಕ ಸಂಘರ್ಷದ ಭೀತಿಯನ್ನು ಹೆಚ್ಚಿಸಿದೆ.

ಕುಟುಂಬಸ್ಥರ ದುರ್ಮರಣ

ಈ ಭೀಕರ ವೈಮಾನಿಕ ದಾಳಿಯಲ್ಲಿ ಕೇವಲ ಖಮೇನಿ ಮಾತ್ರವಲ್ಲದೆ, ಅವರ ಪುತ್ರಿ, ಅಳಿಯ ಹಾಗೂ ಮೊಮ್ಮಗಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಸರ್ವೋಚ್ಚ ನಾಯಕರ ಕುಟುಂಬದ ಆಪ್ತ ಮೂಲಗಳನ್ನು ಸಂಪರ್ಕಿಸಿದಾಗ ಈ ಸಾವುಗಳು ಖಚಿತವಾಗಿವೆ ಎಂದು ಫಾರ್ಸ್ (Fars) ಸುದ್ದಿ ಸಂಸ್ಥೆ ಸೇರಿದಂತೆ ಇತರೆ ಪ್ರಮುಖ ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ

ಶನಿವಾರ (ಫೆಬ್ರವರಿ 28) ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ನಡೆಸಿದ ಬೃಹತ್ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರು. ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ ಖಮೇನಿ ಮೃತಪಟ್ಟಿದ್ದಾನೆ ಹಾಗೂ ಇರಾನಿಯನ್ನರು ತಮ್ಮ ದೇಶವನ್ನು ಮರಳಿ ಪಡೆಯಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ ಎಂದು ಅವರು ಬರೆದುಕೊಂಡಿದ್ದರು. ಅಲ್ಲದೆ, ಇರಾನ್‌ನ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲೂ ನಿಖರ ಹಾಗೂ ಭಾರಿ ಬಾಂಬ್ ದಾಳಿಗಳು ಮುಂದುವರಿಯಲಿವೆ ಎಂದು ಅವರು ಎಚ್ಚರಿಕೆ ನೀಡಿದ್ದರು. 'ಅಮೆರಿಕ ಫಸ್ಟ್' ನೀತಿಯಡಿ ಶಾಶ್ವತ ಯುದ್ಧಗಳಿಂದ ದೂರ ಉಳಿಯುವುದಾಗಿ ಹೇಳಿದ್ದ ಟ್ರಂಪ್, ಎಂಟು ತಿಂಗಳಲ್ಲಿ ಇರಾನ್ ಮೇಲೆ ನಡೆಸಿದ ಎರಡನೇ ಅತಿದೊಡ್ಡ ದಾಳಿ ಇದಾಗಿದೆ.

ಇರಾನ್ ಪ್ರತೀಕಾರದ ಎಚ್ಚರಿಕೆ

ತಮ್ಮ ದಶಕಗಳ ಅಧಿಕಾರದ ಅವಧಿಯಲ್ಲಿ ಇರಾನ್‌ನ ಎಲ್ಲಾ ಪ್ರಮುಖ ನೀತಿಗಳ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಖಮೇನಿ ಸಾವಿನಿಂದಾಗಿ ಇದೀಗ ದೇಶದಲ್ಲಿ ನಾಯಕತ್ವದ ನಿರ್ವಾತ ಸೃಷ್ಟಿಯಾಗಿದೆ. ಸೇನಾಪಡೆ ಮತ್ತು ಆಡಳಿತದ ಮೇಲಿನ ಅವರ ಹಿಡಿತ ಅಪಾರವಾಗಿತ್ತು ಹಾಗೂ ಅವರಿಗೆ ಸ್ಪಷ್ಟ ಉತ್ತರಾಧಿಕಾರಿ ಇಲ್ಲದಿರುವುದು ಇಸ್ಲಾಮಿಕ್ ರಿಪಬ್ಲಿಕ್‌ನ ಭವಿಷ್ಯವನ್ನು ಅತಂತ್ರಗೊಳಿಸಿದೆ. ಮತ್ತೊಂದೆಡೆ, ಈ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಪ್ರತಿದಾಳಿ ನಡೆಸಿದ್ದು, ತೀವ್ರ ಸೇಡು ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದೆ.

ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಅವರು, ಇಸ್ರೇಲ್ ಮತ್ತು ಅಮೆರಿಕ ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪ ಪಡಲಿವೆ ಮತ್ತು ಇರಾನ್‌ನ ಧೈರ್ಯಶಾಲಿ ಸೈನಿಕರು ಈ ಅಂತರರಾಷ್ಟ್ರೀಯ ದಬ್ಬಾಳಿಕೆಕೋರರಿಗೆ ಮರೆಯಲಾಗದ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಖಮೇನಿ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಟೆಹ್ರಾನ್‌ನ ಕೆಲವು ನಿವಾಸಿಗಳು ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

Read More
Next Story